ದೇವೇಗೌಡರ ಕುಟುಂಬದ ವಿರುದ್ಧ ಪಿತೂರಿ ನಡೆಸಿದ ವ್ಯಕ್ತಿಗಳು ಯಾರು, ಏತಕ್ಕೋಸ್ಕರ ಮಾಡಿದರು ಎನ್ನುವುದು ಬಹಿರಂಗವಾಗಿದೆ. ನಾವು ಪ್ರಜ್ವಲ್‌ ರೇವಣ್ಣ ಪರವಾಗೇನೂ ನಿಂತಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕೆನ್ನುವುದೇ ದೇವೇಗೌಡರು, ಕುಮಾರಸ್ವಾಮಿ ಅವರ ಆಶಯವಾಗಿದೆ. ಆದರೆ, ಸಾವಿರಾರು ಹೆಣ್ಣು ಮಕ್ಕಳ ಮರ್ಯಾದೆಯನ್ನು ಬೀದಿಗೆ ತಂದಿರುವುದು ನಾಚಿಕೆಗೇಡಿನ ಸಂಗತಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆಂದು ಆರೋಪಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಜೆಡಿಎಸ್‌ ನಾಯಕರು ಪ್ರತಿಭಟನೆ ನಡೆಸುವುದರೊಂದಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮಾಜಿ ಶಾಸಕರ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜೆಡಿಎಸ್‌ ಕಾರ್ಯಕರ್ತರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ದಹನ ಮಾಡುವುದಕ್ಕೆ ಯತ್ನಿಸಿದರು. ಇದೇ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರಿಂದ ಪ್ರತಿಕೃತಿಯನ್ನು ಕಸಿದುಕೊಂಡು ದೂರಕ್ಕೆ ಕೊಂಡೊಯ್ದರು.

ಇದೇ ಸಮಯದಲ್ಲಿ ಜೆಡಿಎಸ್‌ ನಾಯಕರು, ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಪೊಲೀಸರು ಕಾಂಗ್ರೆಸ್‌ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪೊಲೀಸರ ವರ್ತನೆಯಿಂದ ಬೇಸತ್ತ ಜೆಡಿಎಸ್‌ ಕಾರ್ಯಕರ್ತರು ಪೆನ್‌ಡ್ರೈವ್‌ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ಗೆ ಸಹಕರಿಸಿದರೆನ್ನಲಾದ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡರ ಪ್ರತಿಕೃತಿಯನ್ನು ರಸ್ತೆಗೆ ಹಾಕಿ ದಹನ ಮಾಡಿದರು. ಕೆಲಕಾಲ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.

ಮಾಜಿ ಶಾಸಕ ಕೆ.ಸುರೇಶ್‌ಗೌಡ ಮಾತನಾಡಿ, ದೇವೇಗೌಡರ ಕುಟುಂಬದ ವಿರುದ್ಧ ಪಿತೂರಿ ನಡೆಸಿದ ವ್ಯಕ್ತಿಗಳು ಯಾರು, ಏತಕ್ಕೋಸ್ಕರ ಮಾಡಿದರು ಎನ್ನುವುದು ಬಹಿರಂಗವಾಗಿದೆ. ನಾವು ಪ್ರಜ್ವಲ್‌ ರೇವಣ್ಣ ಪರವಾಗೇನೂ ನಿಂತಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕೆನ್ನುವುದೇ ದೇವೇಗೌಡರು, ಕುಮಾರಸ್ವಾಮಿ ಅವರ ಆಶಯವಾಗಿದೆ. ಆದರೆ, ಸಾವಿರಾರು ಹೆಣ್ಣು ಮಕ್ಕಳ ಮರ್ಯಾದೆಯನ್ನು ಬೀದಿಗೆ ತಂದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ಮಾಜಿ ಪ್ರಧಾನಿ ದೇವೇಗೌಡರಿಗೆ ಕೆಟ್ಟಹೆಸರು ತರಲು, ಪ್ರಧಾನಿ ಮೋದಿ ಅವರ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡಲು ಡಿ.ಕೆ.ಶಿವಕುಮಾರ್‌ ಅವರು ಶಿಖಂಡಿ ರಾಜಕಾರಣಿಗಳನ್ನು ಮುಂದಿಟ್ಟುಕೊಂಡು ಈ ಕೆಲಸ ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯನವರು ಇದೇ ಪಕ್ಷದಿಂದ ಬೆಳೆದುಹೋದವರು. ಅವರಿಗೆ ಎಲ್ಲವೂ ಗೊತ್ತಿತ್ತು. ಇಂತಹ ಕುತುಂತ್ರ ಕೆಲಸ ಮಾಡುವುದಕ್ಕೆ ನಿಮಗೆ ಮನಸ್ಸು ಹೇಗೆ ಬಂತು ಎಂದು ಪ್ರಶ್ನಿಸಿದರು.

ಎಸ್‌ಐಟಿ ಎಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್‌ ಟೀಮ್‌, ಇನ್ನೊಂದು ಡಿ.ಕೆ.ಶಿವಕುಮಾರ್‌ ಇನ್ವೆಸ್ಟಿಗೇಷನ್‌ ಟೀಮ್‌, ಮತ್ತೊಂದು ಶಿವರಾಮೇಗೌಡ ಇನ್ವೆಸ್ಟಿಗೇಷನ್‌ ಟೀಮ್‌. ಈ ಮೂರು ಜನ ಹೇಳಿದಂತೆ ಹೇಳಿಕೆಗಳನ್ನು ಕೊಡಬೇಕು. ತನಿಖೆಯೂ ಅವರು ಹೇಳಿದಂತೆ ನಡೆಯಬೇಕು. ಇಂದು ಯಾವುದೇ ಕಾರಣವಿಲ್ಲದೆ ರೇವಣ್ಣರವರನ್ನು ಬಂಧಿಸಲಾಗಿದೆ. ದೇವೇಗೌಡರ ಕುಟುಂಬದ ಗೌರವ ಕಳೆಯಲು, ಜೆಡಿಎಸ್‌ ಪಕ್ಷ ನಾಶ ಮಾಡುವುದಕ್ಕೆ ಮುಂದಾಗಿರುವ ನಿಮಗೆ ಮಾನ ಮರ್ಯಾದೆ ಇದೆಯಾ, ದೇವರು ನಿಮಗೆ ಒಳ್ಳೇದು ಮಾಡ್ತಾನಾ ಎಂದು ಕಿಡಿಕಾರಿದರು.

ಈ ಎಸ್‌ಐಟಿ ಬಗ್ಗೆ ನಂಬಿಕೆ ಇಲ್ಲ. ಹಲವಾರು ಸಾಕ್ಷ್ಯಗಳು, ದಾಖಲೆಗಳು ದೇವರಾಜೇಗೌಡರ ಬಳಿ ಇವೆ. ಅವುಗಳನ್ನು ಪಡೆದುಕೊಂಡು ಸಿಬಿಐಗೆ ತನಿಖೆಗೆ ವಹಿಸಬೇಕು. ಕರ್ನಾಟಕದ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳುಮಾಡಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಸರ್ಕಾರವನ್ನು ಕೂಡಲೇ ವಿಸರ್ಜನೆ ಮಾಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಹಿಂದೆ ಕಾಂಗ್ರೆಸ್‌ನಲ್ಲಿದ್ದ ರಾಜಕಾರಣ, ಆಡಳಿತವನ್ನು ಈಗ ನೋಡಲಾಗುತ್ತಿಲ್ಲ. ಚುನಾವಣೆಯಲ್ಲಿ ಗೆಲುವೊಂದನ್ನೇ ಗುರಿಯಾಗಿಸಿಕೊಂಡು ಮಾಡಬಾರದ ಅನಾಚಾರಗಳೆಲ್ಲವನ್ನೂ ಮಾಡುತ್ತಿದ್ದಾರೆ. ವೈಯಕ್ತಿಕ ತೇಜೋವಧೆ ಮಾಡುವುದನ್ನು ಮಹಿಳೆಯರ ಮರ್ಯಾದೆ ಬೀದಿಪಾಲು ಮಾಡಲು ಮುಂದಾಗಿರುವುದು ಅಸಹ್ಯ ಹುಟ್ಟಿಸುತ್ತಿದೆ ಎಂದು ದೂಷಿಸಿದರು.

ನಾವ್ಯಾರೂ ಪ್ರಜ್ವಲ್‌ ರೇವಣ್ಣ ಅವರ ಪರವಾಗಿ ಇಲ್ಲಿಗೆ ಬಂದಿಲ್ಲ. ಪೆನ್‌ಡ್ರೈವ್‌ ಪ್ರಕರಣದ ಹಿಂದಿನ ಪಿತೂರಿಗಾರರು, ಸಂಚುಕೋರರ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ. ನಿಮಗೆ ನಿಜವಾಗಿಯೂ ಹೆಣ್ಣು ಮಕ್ಕಳ ಮಾನರಕ್ಷಣೆ ಮಾಡಬೇಕೆಂದಿದ್ದರೆ ದಾಖಲೆ, ಸಾಕ್ಷ್ಯಗಳನ್ನು ಪೊಲೀಸರಿಗೆ ಒಪ್ಪಿಸಿ ತಪ್ಪಿತಸ್ಥರನ್ನು ಕಾನೂನು ಶಿಕ್ಷೆಗೆ ಗುರಿಪಡಿಸಬೇಕಿತ್ತು. ಅದನ್ನು ಬಿಟ್ಟು ರಾಜಕೀಯ ದುರುದ್ದೇಶದಿಂದ ಪೆನ್‌ಡ್ರೈವ್‌ಗಳಿಗೆ ಅಶ್ಲೀಲ ವೀಡಿಯೋಗಳನ್ನು ತುಂಬಿ, ಅವುಗಳನ್ನು ಹಂಚಿಕೆ ಮಾಡುವಂತಹ ಕೀಳುಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ಮುಖಂಡ ಕೋಟಿ ರವಿ ಮಾತನಾಡಿ, ಶಿವರಾಮೇಗೌಡ ಒಬ್ಬ ಶಿಖಂಡಿ ರಾಜಕಾರಣಿ. ಅವನೊಬ್ಬ ಡಿ.ಕೆ.ಶಿವಕುಮಾರ್‌ ಏಜೆಂಟ್‌. ಯಾವ ಪಕ್ಷದಲ್ಲೂ ನೆಲೆ ನಿಲ್ಲದೆ ಆ ಪಕ್ಷ, ಈ ಪಕ್ಷ ಎಂದು ಬಣ್ಣ ಬದಲಾಯಿಸುವುದೇ ಅವನ ಕೆಲಸವಾಗಿದೆ. ದೇವೇಗೌಡರ ಕುಟುಂಬದ ವಿರುದ್ಧ ನಡೆದಿರುವ ಪಿತೂರಿ ರಾಜಕಾರಣದಲ್ಲಿ ಇವನ ಪಾತ್ರವಿರುವುದೂ ಬಹಿರಂಗವಾಗಿದೆ. ಈಗ ಅವನು ಬಂದು ಮಾಧ್ಯಮದವರ ಮುಂದೆ ಬಂದು ಮಾತನಾಡಲಿ ಎಂದು ಸವಾಲು ಹಾಕಿದರು.

ಜೆಡಿಎಸ್‌ ಅಧ್ಯಕ್ಷ ಡಿ.ರಮೇಶ್‌ ಮಾತನಾಡಿ, ನಾವಿದನ್ನು ಇಲ್ಲಿಗೇ ಬಿಡುವುದಿಲ್ಲ. ನಮ್ಮ ಹೋರಾಟವನ್ನು ತಾಲೂಕು, ಹೋಬಳಿ, ಪಂಚಾಯ್ತಿ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ. ಗುರುವಾರ ನಾಗಮಂಗಲದಲ್ಲಿ ಹೋರಾಟವನ್ನು ರೂಪಿಸಿದ್ದೇವೆ. ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರುವುದಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಪ್ರಕರಣದಲ್ಲಿರುವವರು, ಪೆನ್‌ಡ್ರೈವ್‌ ಸೃಷ್ಟಿಕರ್ತರಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮುಖಂಡರಾದ ಬಿ.ಆರ್‌.ರಾಮಚಂದ್ರ, ಮನ್‌ಮುಲ್‌ ಉಪಾಧ್ಯಕ್ಷ ವಿ.ಎಸ್‌.ರಘುನಂದನ್‌, ಮಾಜಿ ನಿರ್ದೇಶಕ ನೆಲ್ಲೀಗೆರೆ ಬಾಲು, ಸಾತನೂರು ಜಯರಾಂ, ನಗರಸಭಾ ಸದಸ್ಯರಾದ ಮೀನಾಕ್ಷಿ, ಮಂಜುಳಾ, ಮಹಿಳಾ ಮುಖಂಡರಾದ ಅಂಬುಜಮ್ಮ, ಜಯಶೀಲಮ್ಮ ಇತರರಿದ್ದರು.

ದೇವೇಗೌಡರ ಕುಟುಂಬದವರ ವಿರುದ್ಧ ಯಾರು ಏನೇ ಪಿತೂರಿ ನಡೆಸಿದರೂ ಜೆಡಿಎಸ್‌ ಪಕ್ಷವನ್ನು ಸರ್ವನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಲೈಂಗಿಕ ಪ್ರಕರಣದಲ್ಲಿ ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಲಿ. ಅದೇ ರೀತಿ ರಾಜಕೀಯ ಪಿತೂರಿ, ಒಳಸಂಚು ಮಾಡಿದವರಿಗೂ ಶಿಕ್ಷೆಯಾಗಲೇಬೇಕು. ಅದರ ಬಗ್ಗೆಯೂ ತನಿಖೆಯಾಗಬೇಕು. ದೇವರಾಜೇಗೌಡರ ಬಳಿ ಇರುವ ಸಾಕ್ಷ್ಯಗಳು, ದಾಖಲೆಗಳನ್ನು ಇಟ್ಟುಕೊಂಡು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎಲ್‌.ಆರ್‌. ಶಿವರಾಮೇಗೌಡ ಅವರನ್ನೂ ಎಸ್‌ಐಟಿ ಅಧಿಕಾರಿಗಳು ಬಂಧಿಸಬೇಕು. ತಕ್ಷಣವೇ ಪ್ರಕರಣವನ್ನು ಎಸ್‌ಐಟಿಯಿಂದ ಸಿಬಿಐ ತನಿಖೆಗೆ ಒಪ್ಪಿಸಬೇಕು.

- ಸಿ.ಎಸ್‌.ಪುಟ್ಟರಾಜು, ಮಾಜಿ ಸಚಿವ