ಬಾಂಗ್ಲಾದಲ್ಲಿ ಹಿಂದೂಗಳ ದೌರ್ಜನ್ಯಖಂಡಿಸಿ ಸಂಘಟನೆಗಳ ಆಕ್ರೋಶ

| Published : Aug 11 2024, 01:30 AM IST

ಸಾರಾಂಶ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದ ಹಲವೆಡೆ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ. ತಕ್ಷಣ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದ ಹಲವೆಡೆ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ. ತಕ್ಷಣ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಶನಿವಾರ ನಗರದ ಮೈಸೂರು ಬ್ಯಾಂಕ್‌ ವೃತ್ತ, ಹಲಸೂರು ಮೆಟ್ರೋ ನಿಲ್ದಾಣ, ರಾಮಮೂರ್ತಿನಗರ, ಮಲ್ಲೇಶ್ವರ, ಜಯನಗರ, ಜೆ.ಪಿ.ನಗರ, ವಿದ್ಯಾರಣ್ಯಪುರ, ಸುಂಕದಕಟ್ಟೆ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಾಂಗ್ಲಾದೇಶದ ನುಸುಳುಕೋರರು ನಗರದ ಹಲವೆಡೆ ಬಂದು ನೆಲೆಸಿದ್ದಾರೆ. ಸ್ಥಳೀಯ ಯುವಕರ ಕೆಲಸಗಳನ್ನು ತಮ್ಮದಾಗಿಸಿಕೊಂಡಿದ್ದೂ ಅಲ್ಲದೇ, ಕಳ್ಳತನ, ದರೋಡೆಗಳಂತಹ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದು ನಗರವಾಸಿಗಳ ಆತಂತಕ್ಕೆ ಕಾರಣವಾಗಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿದವು.

ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಹಿಂದೂ ಜನಜಾಗೃತಿ ವೇದಿಕೆಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ವಕ್ತಾರ ಮೋಹನ ಗೌಡ ಪಾಲ್ಗೊಂಡಿದ್ದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ ಎಂದು ಪೊಲೀಸರು ಮನವಿ ಮಾಡಿದರೂ ಇದಕ್ಕೆ ಕಾರ್ಯಕರ್ತರು ಒಪ್ಪದೆ ಕೇಸರಿ ಬಾವುಟಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು. ಆಗ ಕೆಲ ಸಮಯ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆಯಿತು. ನಂತರ 50ಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆಗೊಳಿಸಿದರು.ಬೈಕ್‌ ರ್‍ಯಾಲಿ ನಡೆಸಿ ಆಕ್ರೋಶ

ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಕೋನಪ್ಪಕ ಅಗ್ರಹಾರದಲ್ಲಿ ಜೈಶ್ರೀರಾಮ್‌ ಘೋಷಣೆ ಕೂಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಯನಗರ ಹಾಗೂ ಜೆ.ಪಿ. ನಗರದ ಹಲವು ನಿವಾಸಿಗಳು ರಾಗೀಗುಡ್ಡ ಬಳಿಯ ರಸ್ತೆಯಲ್ಲಿ ಫಲಕಗಳನ್ನು ಪ್ರದರ್ಶಿಸಿ, ಮೌನ ಪ್ರತಿಭಟನೆ ನಡೆಸಿದರು. ಬಸವನಗುಡಿಯಲ್ಲಿ ಬೈಕ್‌ ರ್ಯಾಲಿ ನಡೆಸಿ, ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಕೃತ್ಯವನ್ನು ಖಂಡಿಸಲಾಯಿತು.ಮಾನವ ಸರಪಳಿ ರಚಿಸಿ ಧರಣಿ

ನಾಗರಭಾವಿಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಮಮೂರ್ತಿ ನಗರ, ಮಲ್ಲೇಶ್ವರ, ಸುಂಕದಕಟ್ಟೆ, ನಾಗರಬಾವಿ ಸೇರಿದಂತೆ ಹಲವೆಡೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ, ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಹಲಸೂರಿನಲ್ಲಿ ಮೌನ ಪ್ರತಿಭಟನೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಲಸೂರು ಮೆಟ್ರೋ ನಿಲ್ದಾಣದ ಸಮೀಪ ಹಿಂದೂ ಜಾಗೃತಿ ವೇದಿಕೆ ಕಾರ್ಯಕರ್ತರು ಭಿತ್ತಿಪತ್ರಗಳನ್ನು ಹಿಡಿದು ಮೌನ ಪ್ರತಿಭಟನೆ ನಡೆಸಿದರು. ಬಾಂಗ್ಲಾದಲ್ಲಿನ ಹಿಂದೂಗಳ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು. ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾದರೆ ಇಲ್ಲೂ ಅದೇ ಪರಿಸ್ಥಿತಿ ಉಂಟಾಗುತ್ತದೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.