ಪರಿಶಿಷ್ಟರ ಪಟ್ಟಿಗೆ ನಕಲಿ ಬೇಡ ಜಂಗಮರ ಸೇರ್ಪಡೆಗೆ ಆಕ್ರೋಶ

| Published : May 18 2025, 11:55 PM IST

ಪರಿಶಿಷ್ಟರ ಪಟ್ಟಿಗೆ ನಕಲಿ ಬೇಡ ಜಂಗಮರ ಸೇರ್ಪಡೆಗೆ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ ಆಂಜನೇಯ ಭಾನುವಾರ ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪರಿಶಿಷ್ಟರಿಗೆ ಒಳ ಮೀಸಲು ಕಲ್ಪಿಸುವ ಸಂಬಂಧ ರಾಜ್ಯದಲ್ಲಿ ನಡೆದಿರುವ ಜನಗಣತಿ ವೇಳೆ ನಕಲಿ ಬೇಡ ಜಂಗಮರು ಸೇರ್ಪಡೆಯಾಗುತ್ತಿದ್ದಾರೆಂದು ಮಾಜಿ ಸಚಿವ ಎಚ್‌.ಆಂಜನೇಯ ತೀವ್ರ ಆಕ್ರೋಶ ಹೊರ ಹಾಕಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಬೀದರ್ ಭಾಗದಲ್ಲಿ ಬೇಡ ಜಂಗಮ ಸಮುದಾಯವಿದೆ. ಇವರ ಮಾತೃಭಾಷೆ ತೆಲುಗು, ಮಾತ್ರವಲ್ಲದೇ ಮಾಂಸಹಾರಿಗಳಾಗಿದ್ದಾರೆ. ಆಂಧ್ರಮೂಲದಿಂದ ರಾಜ್ಯಕ್ಕೆ ವಲಸೆ ಬಂದಿದ್ದ ಬೇಡಜಂಗಮರು ಸತ್ತ ಹಂದಿ, ದನದ ಮಾಂಸ ಹಾಗೂ ಹೊಟ್ಟೆ ತುಂಬ ಮದ್ಯ ಸೇವಿಸುತ್ತಿದರು. ಮಾದಿಗರ ಹಟ್ಟಿಗಳಿಗೆ ಬಂದು ಅನ್ನಕ್ಕಾಗಿ ಬೇಡಿಕೊಂಡು ಬದುಕು ನಡೆಸುತ್ತಿದ್ದರು. ಮಾದಿಗರನ್ನು ಬೇಡ ಜಂಗಮರು ಮುಟ್ಟುತ್ತಿದ್ದಿಲ್ಲ. ಈ ಜಾತಿ ಜನರ ಸಂತತಿ ಕರ್ನಾಟಕದಲ್ಲಿ ಹೆಚ್ಚು ಕಡಿಮೆ ನಶಿಸಿದೆ. ಎಸ್ಸಿ ಪಟ್ಟಿಯಲ್ಲಿನ 101 ಜಾತಿಯಲ್ಲಿನ ಬೇಡಜಂಗಮರ ಹೆಸರಿರುವ ಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.

ವೀರಶೈವ ಸಮುದಾಯದ ಜಂಗಮರು ಜನಗಣತಿ ವೇಳೆ ಜಂಗಮ ಶಬ್ದವ ದುರುಪಯೋಗಪಡಿಸಿಕೊಂಡು ಬೇಡ ಜಂಗಮ ಎಂದು ನಮೂದಿಸುತ್ತಿರುವುದು ಸಾಂವಿಧಾನಿಕ ವಿರೋಧಿ ಕ್ರಮವಾಗಿದೆ. ಬಸವಾನುಯಾಯಿಯಾಗಿರುವ ಹಾಗೂ ಗುರು ಸ್ಥಾನದಲ್ಲಿರುವ ಜಂಗಮರ ಈ ನಡೆ ಸರಿಯಾದುದಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವ ಜಂಗಮರು ಇನ್ನೊಬ್ಬರ ತಟ್ಟೆಯಲ್ಲಿರುವ ತುತ್ತು ಕದಿಯಲು ಸುಳ್ಳು ಜಾತಿ ನಮೂದಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಜಾತಿ ಗಣತಿ ವೇಳೆ ವೀರಶೈವ ಜಂಗಮರು, ಬೇಡಜಂಗಮರೆಂದು ಹೇಳಿಕೆ ನೀಡುತ್ತಿರುವ ಬಗ್ಗೆ ಈಗಾಗಾಲೇ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ಗಮನಕ್ಕೆ ತರಲಾಗಿದೆ. ಗಣತಿ ವೇಳೆ ಬೇಡ ಜಂಗಮರ ಹೆಸರಲ್ಲಿ ವೀರಶೈವ ಜಂಗಮರು ನುಸುಳಬಾರದೆಂದು ಮನವಿ ಮಾಡಲಾಗಿದೆ. ಈ ಸಂಬಂಧ ಆಯೋಗವು ಎಲ್ಲ ಜಿಲ್ಲಾಧಿಕಾರಿಗೆ ಸೂಚನೆಗಳ ನೀಡಿ ಬೇಡ ಜಂಗಮರ ಹೆಸರಲ್ಲಿ ಗಣತಿ ವೇಳೆ ವೀರಶೈವ ಜಂಗಮರು ನಮೂದು ಮಾಡುತ್ತಿದ್ದರೆ ಅಂತಹವರ ಜಾತಿ ಪ್ರಮಾಣ ಪತ್ರ ಪರಿಶೀಲಿಸಬೇಕೆಂದು ಸೂಚಿಸಿದೆ. ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಂಭೀರ ಗಮನ ಹರಿಸಬೇಕೆಂದು ಆಂಜನೇಯ ಆಗ್ರಹಿಸಿದರು.

ಈ ಮೊದಲು ರಾಜ್ಯದ ಹಲವು ತಹಸೀಲ್ದಾರರು ವೀರಶೈವ ಜಂಗಮರಿಗೆ ಬೇಡ ಜಂಗಮ ಪ್ರಮಾಣ ಪತ್ರ ವಿತರಿಸಿದ್ದಾರೆ. ನಿಯಮಬಾಹಿರವಾಗಿ ಜಾತಿ ಪ್ರಮಾಣ ಪತ್ರ ವಿತರಿಸಿದ ತಹಸೀಲ್ದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳಿಸಬೇಕು. ರಾಜ್ಯ ಸರ್ಕಾರ ಬೇಡ ಜಂಗಮರ ಕುಲ ಶಾಸ್ತ್ರ್ರ ಅಧ್ಯಯನ ಮಾಡಬೇಕು. ಅಗತ್ಯವಿದ್ದಲ್ಲಿ ಬೇಡ ಜಂಗಮರ ಹೆಸರನ್ನು ಪರಿಶಿಷ್ಟರ ಪಟ್ಟಿಯಿಂದಲೇ ಕೈ ಬಿಡಬೇಕು. ಸರ್ವ ಪಕ್ಷಗಳು ಸಹಕರಿಸಬೇಕೆಂದು ಆಂಜನೇಯ ಮನವಿ ಮಾಡಿದರು.

ಜಾತಿಗಣತಿ ಕಾರ್ಯವನ್ನು ನಾಗಮೋಹನದಾಸ್ ಆಯೋಗ ಮೇ 28ರ ವರೆಗೆ ವಿಸ್ತರಿಸಿದೆ. ಈ ಸರ್ವೇಯಲ್ಲಿ ಪರಿಶಿಷ್ಟ ಗುಂಪಿನಲ್ಲಿನ ಎಲ್ಲ ಜಾತಿ ಜನರು ಕಡ್ಡಾಯವಾಗಿ ಪಾಲ್ಗೊಂಡು, ತಮ್ಮ ಪಾಲಿನ ಮೀಸಲಾತಿ ಪಡೆಯಬೇಕು. ಎಕೆ, ಎಡಿ, ಆದಿ ಆಂಧ್ರ ಯಾವುದೇ ಜಾತಿ ಸೂಚಕದಲ್ಲಿ ಗುರುತಿಸಿಕೊಂಡಿದ್ದರೂ ಕಡ್ಡಾಯವಾಗಿ 061-ಮಾದಿಗ ಎಂದು ಸ್ವಾಭಿಮಾನ, ಆತ್ಮಾಭಿಮಾನದಿಂದ ಹೇಳಬೇಕು. ಒಂದೊಮ್ಮೆ ಮೂಲ ಜಾತಿ ಬರೆಯಿಸದಿದ್ದರೇ ಎಲ್ಲ ಸೌಲಭ್ಯಗಳಿಂದಲೂ ಅಂತಹ ಕುಟುಂಬ ವಂಚಿತವಾಗಲಿದೆ. ಪ್ರಸಕ್ತ ವರ್ಷದಲ್ಲಿಯೇ ಎಕೆ, ಎಡಿ, ಆದಿ ಆಂಧ್ರ ಪದವನ್ನೇ ಜಾತಿಪಟ್ಟಿಯಿಂದ ರಾಜ್ಯ ಸರ್ಕಾರ ಕೈಬಿಡಲಿದೆ. ಆದ್ದರಿಂದ ಮಾದಿಗ-ಛಲವಾದಿ ಸೇರಿ ಎಲ್ಲ ವರ್ಗದ ಜನರು ಕಡ್ಡಾಯವಾಗಿ ಮೂಲ ಜಾತಿ ಬರೆಯಿಸಬೇಕು ಎಂದು ಆಂಜನೇಯ ಹೇಳಿದರು. ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ,ಅನಿಲ್ ಕೋಟಿ, ಸಮರ್ಥರಾಯ್, ವಕೀಲರಾದ ಶರಣಪ್ಪ, ರವಿಚಂದ್ರ ಸುದ್ದಿಗೋಷ್ಠಿಯಯಲ್ಲಿ ಉಪಸ್ಥಿತರಿದ್ದರು.