ಸಾರಾಂಶ
ಪಾಲಬಾವಿ ಗ್ರಾಮದಲ್ಲಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿಲ್ಲಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ಲೆಕ್ಸ್ ಅನ್ನು ಕಿಡಿಗೇಡಿಗಳು ಹರಿದು ಅವಮಾನಿಸಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಪಾಲಬಾವಿ
ಗ್ರಾಮದಲ್ಲಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿಲ್ಲಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ಲೆಕ್ಸ್ ಅನ್ನು ಕಿಡಿಗೇಡಿಗಳು ಹರಿದು ಅವಮಾನಿಸಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ.ಏ.14ರಂದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ 133ನೇ ಜಯಂತಿ ನಿಮಿತ್ತ ವಿವಿಧ ದಲಿತ ಸಂಘಟನೆ ಮುಖಂಡರು, ಯುವಕರು ಸೇರಿ ಪ್ಲೆಕ್ಸ್ (ಬ್ಯಾನರ್) ನ್ನು ಬಸ್ ನಿಲ್ದಾಣದ ಬಳಿ ಅಳವಡಿಸಿದ್ದರು. ಬುಧವಾರ ರಾತ್ರಿ ಕಿಡಿಗೇಡಿಗಳು ಪ್ಲೆಕ್ಸ್ ಹರಿದಿದ್ದಾರೆ.
ಗುರುವಾರ ಬೆಳಗ್ಗೆ ಸುದ್ದಿ ತಿಳಿಯುತ್ತಿದಂತೆ ದಲಿತಪರ ಸಂಘಟನೆಗಳ ಮುಖಂಡರು, ಯುವಕರು ಬಸ್ ನಿಲ್ದಾಣದಲ್ಲಿ ಜಮಾಯಿಸಿ ಬ್ಯಾನರ್ ಹರಿದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಹಾರೂಗೇರಿ ಠಾಣೆ ಪಿಎಸ್ ಐ ಗಿರಿಮಲ್ಲಪ್ಪ ಉಪ್ಪಾರ ಸ್ಥಳಕ್ಕೆ ಆಗಮಿಸಿ ಬ್ಯಾನರ್ ಹರಿದವರು ಯಾರೇ ಆಗಿರಲಿ ಅವರನ್ನು 2-3 ದಿನಗಳಲ್ಲಿ ಪತ್ತೆ ಹಚ್ಚಿ ಬಂಧಿಸಿ ಸೂಕ್ತ ಕ್ರಮ ಜರುಗಿಸಲಾಗುವುದು, ದಲಿತ ಪರ ಸಂಘಟನೆ ಮುಖಂಡರು ಹಾಗೂ ಗ್ರಾಮಸ್ಥರು ಸಹಕರಿಸಬೇಕೆಂದು ಮನವಿ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.