ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ, ಅತಿಥಿಗೃಹ ತಪಾಸಣೆ ನಡೆಸಿ-ಡಿಸಿ ಸೂಚನೆ

| Published : May 04 2024, 12:35 AM IST

ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ, ಅತಿಥಿಗೃಹ ತಪಾಸಣೆ ನಡೆಸಿ-ಡಿಸಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮೇ ೭ರಂದು ಮತದಾನ ನಡೆಯಲಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಲ್ಲದವರು ಕ್ಷೇತ್ರದಲ್ಲಿ ಉಳಿದುಕೊಳ್ಳುವಂತಿಲ್ಲ. ಈ ಕುರಿತಂತೆ ಅಗತ್ಯ ನಿಗಾವಹಿಸುವಂತೆ ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮೇ ೭ರಂದು ಮತದಾನ ನಡೆಯಲಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಲ್ಲದವರು ಕ್ಷೇತ್ರದಲ್ಲಿ ಉಳಿದುಕೊಳ್ಳುವಂತಿಲ್ಲ. ಈ ಕುರಿತಂತೆ ಅಗತ್ಯ ನಿಗಾವಹಿಸುವಂತೆ ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾನದ ೭೨ ಗಂಟೆ, ೪೮ ಗಂಟೆ ಹಾಗೂ ೨೪ ಗಂಟೆ ಅವಧಿಯಲ್ಲಿ ಮಾದರಿ ನೀತಿ ಸಂಹಿತೆ ಪರಿಣಾಮಕಾರಿ ಅನುಷ್ಠಾನ, ಮತದಾನ ದಿನದ ಪೂರ್ವ ಸಿದ್ಧತೆಗಳು ಕುರಿತಾಗಿ ವಿಧಾನಸಭಾ ಕ್ಷೇತ್ರವಾರು ನೇಮಕಗೋಂಡ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರಗಳು ಹಾಗೂ ವಿವಿಧ ನೋಡಲ್ ಅಧಿಕಾರಿಗಳ ಸಭೆ ನಡೆಸಿದರು.

ಮತದಾನ ಮುಕ್ತಾಯದ ಹಿಂದಿನ ೪೮ ಗಂಟೆಗಳ ಅವಧಿಯಲ್ಲಿ ಸಾರ್ವಜನಿಕ ರ‍್ಯಾಲಿಗಳು, ಸಾರ್ವಜನಿಕ ಸಭೆಗಳು, ಗಲ್ಲಿ ಸಭೆಗಳನ್ನು, ಬೈಕ್ ರ‍್ಯಾಲಿಗಳನ್ನು, ಅಥವಾ ಪ್ರಚಾರಕ್ಕಾಗಿ ಗುಂಪು ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು. ಚುನಾವಣೆಯ ಬಹಿರಂಗ ಪ್ರಚಾರವು ಮೇ ೫ರ ಸಾಯಂಕಾಲ ೬ ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪ, ಸಮುದಾಯ ಭವನ, ಅತಿಥಿಗೃಹಗಳು, ಹೋಟೆಲ್, ವಸತಿ ಗೃಹಗಳ ನಿರಂತರ ತಪಾಸಣೆ ನಡೆಸಬೇಕು. ಚಟುವಟಿಕೆಗಳ ಬಗ್ಗೆ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.ಬಹಿರಂಗ ಪ್ರಚಾರದ ಅಂತ್ಯದ (ಮತದಾನ ಮುಕ್ತಾಯದ ಪೂರ್ವದ ೪೮ ಗಂಟೆಗೆ) ನಂತರ ತಾರಾ ಪ್ರಚಾರಕರು ಸೇರಿದಂತೆ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದಲ್ಲಿ ಉಳಿದುಕೊಳ್ಳುವಂತಿಲ್ಲ. ಈ ಅವಧಿಯಲ್ಲಿ ಧ್ವನಿವರ್ಧಕಗಳ ಬಳಕೆಗೆ ಅವಕಾಶ ಇರುವುದಿಲ್ಲ. ೪೮ ಗಂಟೆಗಳ ಅವಧಿಯಲ್ಲಿ ಅಭ್ಯರ್ಥಿ, ರಾಜಕೀಯ ಪಕ್ಷಗಳ ಚಲನವಲನದ ಮೇಲೆ ತೀವ್ರ ನಿಗಾ ಇಡಲಾಗುತ್ತದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಹೋಬಳಿಗಳಲ್ಲಿ ಪಾಳಿಯದಲ್ಲಿ ಫ್ಲೈಯಿಂಗ್‌ಸ್ಕ್ವಾಡ್ ತಂಡಗಳು, ವಿಡಿಯೋ ವೀಕ್ಷಣಾ ತಂಡಗಳು, ಚೆಕಪೋಸ್ಟಗಳಲ್ಲಿ ಸೆಕ್ಟರ್ ಅಧಿಕಾರಿಗಳು ಮತ್ತು ಪೋಲೀಸ್‌ಸೆಕ್ಟರ್ ಅಧಿಕಾರಿಗಳ ತಂಡಗಳು ಸೇರಿ ನಿರಂತರ ಕಣ್ಗಾವಲಿನ ವೀಕ್ಷಣೆ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.ಮತದಾನ ಮುಕ್ತಾಯದ ೪೮ ಗಂಟೆ ಪೂರ್ವದ ಅವಧಿಯಲ್ಲಿ ಚುನಾವಣೋತ್ತರ ಹಾಗೂ ಎಕ್ಸಿಟ್ ಪೋಲ್ ನಿರ್ಬಂಧಿಸಲಾಗಿದೆ. ಮತದಾನ ಸಮೀಕ್ಷೆಯನ್ನು ಪ್ರಚುರಪಡಿಸುವಂತಿಲ್ಲ. ಅಭಿಪ್ರಾಯ ಸಮೀಕ್ಷೆಯನ್ನು ನಿರ್ಬಂಧಿಸಲಾಗಿದೆ ಮತ್ತು ಪ್ರಚುರಪಡಿಸುವಂತಿಲ್ಲ. ಮತದಾನ ದಿನ ಮತ ಕೋರಿ ಯಾರೇ ಆಗಲಿ ಸಗಟು ಸಂದೇಶಗಳನ್ನು ಕಳುಹಿಸುವಂತಿಲ್ಲ. ಈ ಬಗ್ಗೆ ನಿಗಾವಹಿಸಬೇಕು ಎಂದು ತಿಳಿಸಿದರು. ಮತದಾನ ದಿನದ ನಿಯಮಗಳು: ಮತದಾನಕ್ಕೆ ವಾಹನದಲ್ಲಿ ಮತದಾರರನ್ನು ಮನೆಯಿಂದ ಮತಗಟ್ಟೆಗೆ ಕರೆತರುವುದು ಮತ್ತು ಮರಳಿ ಕರೆದೊಯ್ಯಲು ಅವಕಾಶ ಇರುವುದಿಲ್ಲ. ಮತದಾನಕ್ಕೆ ಬರುವ ಖಾಸಗಿ, ವೈಯಕ್ತಿಕ ವಾಹನಗಳು ಮತಗಟ್ಟೆಯಿಂದ ೨೦೦ ಮೀಟರ್ ಹೊರಗಿರಬೇಕು. ಮತಗಟ್ಟೆಯ ೧೦೦ ಮೀಟರುಗಳ ಅಂತರದೊಳಗಿರುವ ಯಾವುದೇ ಸಾರ್ವಜನಿಕ, ಧಾರ್ಮಿಕ ಅಥವಾ ಖಾಸಗಿ ಸ್ಥಳಗಳಲ್ಲಿ ಪ್ರಚಾರ ನಡೆಸುವಂತಿಲ್ಲ. ಧ್ವನಿವರ್ಧಕಗಳ ಬಳಕೆ ನಿಷೇಧಿಸಿದೆ. ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಚುನಾವಣಾ ಬೂತ್ ಮತಗಟ್ಟೆಯಿಂದ ೨೦೦ ಮೀಟರ್ ವ್ಯಾಪ್ತಿಯ ಹೊರಗಿರಬೇಕು. ಮೊಬೈಲ್ ಪೋನ್, ಕಾರ್ಡಲೆಸ್ ಪೋನ್‌ಗಳನ್ನು ಮತಗಟ್ಟೆಯ ಬಳಸುವಂತಿಲ್ಲ ಎಂದರು. ಅಭ್ಯರ್ಥಿಯ ಅಥವಾ ರಾಜಕೀಯ ಪಕ್ಷದ ಹೆಸರು ಮತ್ತು ಚಿಹ್ನೆಯನ್ನೊಳಗೊಂಡ ಮತದಾರರ ಚೀಟಿಯನ್ನು ನೀಡಲು ಅವಕಾಶವಿಲ್ಲ. ಮತಗಟ್ಟೆ ವ್ಯಾಪ್ತಿಯ ೧೦೦ ಮೀಟರ್ ವ್ಯಾಪ್ತಿಯಲ್ಲಿ ಚುನಾವಣಾ ಸಂಬಂಧಿ ಪೋಸ್ಟರ್, ಬ್ಯಾನರ್ ಹಾಕುವಂತಿಲ್ಲ, ಮತಗಟ್ಟೆಯಿಂದ ೨೦೦ ಮೀ. ಒಳಗಡೆ ಚುನಾವಣಾ ಕರ್ತವ್ಯ ನಿರತ ವಾಹನ ಹೊರತುಪಡಿಸಿ, ಇತರೆ ಯಾವುದೇ ವಾಹನ ಪ್ರವೇಶ ಮತ್ತು ನಿಲುಗಡೆ ನಿಷೇಧಿಸಿದೆ. ಮತದಾನ ದಿನ ಮತ ಕೋರಿ ಯಾರೇ ಆಗಲಿ ಗುಂಪು ಸಂದೇಶಗಳನ್ನು ಕಳುಹಿಸುವಂತಿಲ್ಲ. ಈ ಕುರಿತಂತೆ ನಿಗಾ ವಹಿಸಿ ಎಂದು ತಿಳಿಸಿದರು.ಮತದಾನ ದಿನದಂದು ಅಭ್ಯರ್ಥಿಗಳು ೨೦೦ ಮೀ. ವ್ಯಾಪ್ತಿಯ ಹೊರಗಡೆ ಅಭ್ಯರ್ಥಿಯ ಚುನಾವಣಾ ಬೂತ್‌ಗಳನ್ನು ಸ್ಥಳೀಯ ಸಂಸ್ಥೆಗಳ ನಿರಾಪೇಕ್ಷಣಾ ಪತ್ರದೊಂದಿಗೆ ಚುನಾವಣಾಧಿಕಾರಿಗಳ ಅನುಮತಿ ಪಡೆದು ಸ್ಥಾಪಿಸಬಹುದಾಗಿದೆ. ಅನುಮತಿ ಇಲ್ಲದ ಚುನಾವಣಾ ಬೂತ್‌ಗಳನ್ನು ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.ಮತದಾನ ಬಹಿಷ್ಕಾರ ಘಟನೆಗಳನ್ನು ಮುಂಜಾಗ್ರತೆಯಾಗಿ ಮಾಹಿತಿ ಪಡೆದುಕೊಳ್ಳಬೇಕು. ಅಂತಹ ಸನ್ನಿವೇಶದಲ್ಲಿ ಖುದ್ದಾಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು. ಯಾವುದೇ ಅಹಿತಕರ ಸನ್ನಿವೇಶಗಳು ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ, ಸುರಕ್ಷತೆ ಹಾಗೂ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪೊಲೀಸ್, ಸೆಕ್ಟರ್ ಮೊಬೈಲ್ ತಂಡ ಸತತ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.ವಾಪಸ್ ಕಳುಹಿಸಬೇಡಿ: ಮತದಾರರ ವೋಟರ್ ಸ್ಲಿಪ್ ತೆಗೆದುಕೊಂಡು ಬಂದಿಲ್ಲ ಎಂಬ ಕಾರಣಕ್ಕೆ ಯಾರನ್ನೂ ಮತದಾನ ಮಾಡಲು ಅವಕಾಶ ನೀಡದೇ ವಾಪಸ್ ಕಳುಹಿಸಬಾರದು. ವೋಟರ್ ಸ್ಲೀಪ್ ತರದಿದ್ದರೂ ಚುನಾವಣಾ ಆಯೋಗದ ನಿಗದಿ ಪಡಿಸಿದ ಭಾವಚಿತ್ರವಿರುವ ಇತರ ದಾಖಲೆಗಳನ್ನು ಪರಿಗಣಿಸಿ ಮತದಾನಕ್ಕೆ ನಿಯಮಾನುಸಾರ ಅವಕಾಶ ಮಾಡಿಕೊಡಬೇಕು. ಮತಗಟ್ಟೆಯೊಳಗೆ ಮತದಾರರು ಮೊಬೈಲ್ ತೆಗೆದುಕೊಂಡು ಹೋಗದಂತೆ ಆಯೋಗ ಕಟ್ಟುನಿಟ್ಟಿನ ನಿಷೇಧ ಹೇರಿದೆ. ಈ ಕುರಿತಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಮಸ್ಟರಿಂಗ್, ಡಿ ಮಸ್ಟರಿಂಗ್, ಮತಗಟ್ಟೆಗಳ ಸಿದ್ಧತೆ, ಮತದಾನದ ದಿನ ಪ್ರಕ್ರಿಯೆ, ಮತದಾನ ನಂತರದ ಪ್ರಕ್ರಿಯೆಗಳು ಹಾಗೂ ಮತದಾನ ಪ್ರಮಾಣದ ಅಂಕಿ-ಸಂಖ್ಯೆಗಳ ಕ್ರೋಢೀಕರಣ ಹಾಗೂ ವರದಿ, ಕಂಟ್ರೋಲ್ ರೂಂ ನಿರ್ವಹಣೆ, ವಿದ್ಯುನ್ಮಾನ ಮತಯಂತ್ರಗ ಪ್ರಕ್ರಿಯೆಗಳ ಕುರಿತಂತೆ ಭಾರತ ಚುನಾವಣಾ ಆಯೋಗದ ಪ್ರಮಾಣೀಕೃತ ಕಾರ್ಯ ವಿಧಾನ(ಎಸ್.ಒ.ಪಿ)ದಂತೆ ಕೈಗೊಳ್ಳಬೇಕಾದ ಕ್ರಮ ಹಾಗೂ ಹೊಣೆಗಾರಿಕೆ ಕುರಿತಂತೆ ಅಧಿಕಾರಿಗಳಿಗೆ ವಿವರಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಣಧಿಕಾರಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿ.ಪಂ.ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಜಿಲ್ಲೆಯ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರ್‌ಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.