ಸ್ವಂತ ಮನೆ ನಮ್ಮ ಹಕ್ಕು ಅಕ್ರಮ ಕೂಟ ರಚನೆ: ಕೆಂಪೇಗೌಡ

| Published : Nov 29 2024, 01:03 AM IST

ಸಾರಾಂಶ

ಪೊಲೀಸ್ ಪ್ರಕರಣ ದಾಖಲಾದ ಬಳಿಕ ಆಡಳಿತ ಮಂಡಳಿ ವಿರುದ್ಧ ದಿನೇ ದಿನೇ ಆಧಾರ ರಹಿತ ಆರೋಪಗಳು ಹೆಚ್ಚಾಗುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ಪಂಚಾಯಿತಿ ವಿರುದ್ಧ ತನಿಖಾ ತಂಡ ರಚಿಸಿದ್ಧಾರೆ. ತನಿಖೆಗೆ ನಾವೂ ಸಿದ್ಧರಿದ್ದು, ನ್ಯಾಯಯುತವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಎನ್ನುವುದು ಅಕ್ರಮ ಕೂಟ. ಇದರ ಅಧ್ಯಕ್ಷರಾಗಿರುವ ಬಿ.ಕೆ. ಸತೀಶ್ ಅವರು ಅಮಾಯಕರನ್ನು ಮುಂದಿಟ್ಟುಕೊಂಡು ಸಂಘಟನೆ ಹೆಸರಿನಲ್ಲಿ ಸ್ವಾರ್ಥಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಬೂದನೂರು ಗ್ರಾಪಂ ಸದಸ್ಯ ಕೆಂಪೇಗೌಡ ಆರೋಪಿಸಿದರು.

ಗುರುವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯಲ್ಲಿರುವ ಫಲಾನುಭವಿಗಳಿಗೆ ಪಂಚಾಯಿತಿಯಿಂದ ಹಕ್ಕುಪತ್ರಗಳನ್ನು ನೀಡಲಾಗಿದೆ. ಉಳಿದಿರುವ ೧೩ ಮಂದಿಗೆ ಹಕ್ಕುಪತ್ರ ಕೊಡುವುದಕ್ಕೆ ಪಂಚಾಯಿತಿ ಸಿದ್ಧವಿದ್ದರೂ ಫಲಾನುಭವಿಗಳಿಗೆ ದೊರಕಿಸಿಲು ಬಿ.ಕೆ. ಸತೀಶ್ ಒಪ್ಪುತ್ತಿಲ್ಲ. ಗ್ರಾಮಸಭೆಯಲ್ಲಿ ಹಕ್ಕುಪತ್ರ ನೀಡದಂತೆ ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದಾರೆ ಎಂದು ಟೀಕಿಸಿದರು.

ಪಂಚಾಯಿತಿಯ ಆಡಳಿತಾತ್ಮಕ ವಿಷಯಗಳಲ್ಲಿ ನಿರಂತರವಾಗಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ದಿನಕ್ಕೊಂದು ತಕರಾರು ಅರ್ಜಿ ಸಲ್ಲಿಸುತ್ತಾ ಪಂಚಾಯಿತಿ ಸೇವೆಗಳು ಹಾಗೂ ಆಡಳಿತಕ್ಕೆ ಸಮಸ್ಯೆ ಉಂಟುಮಾಡುತ್ತಿದ್ದಾರೆ. ಆಧಾರ ರಹಿತ, ದಾಖಲೆ ರಹಿತ ಸುಮಾರು ೩೦ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದು, ಇದುವರೆಗೂ ನಡೆದಿರುವ ವಿಚಾರಣೆಗಳಲ್ಲಿ ಯಾವುದೇ ಭ್ರಷ್ಟಾಚಾರ ಆರೋಪ ಸಾಬೀತಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬೂದನೂರಿನಲ್ಲಿ ರಚನೆಯಾಗಿರುವ ಹೊಸ ಬಡಾವಣೆಗೆ ಸಾಹುಕಾರ್ ಬಿ.ಎಂ. ರುದ್ರಪ್ಪ ಅವರ ಹೆಸರನ್ನಿಡುವುದಕ್ಕೆ ಮೂರು ತಿಂಗಳ ಹಿಂದೆಯೇ ಪಂಚಾಯಿತಿಯಲ್ಲಿ ನಿರ್ಣಯ ಮಾಡಲಾಗಿದೆ. ಪಂಚಾಯಿತಿ, ಆಸ್ಪತ್ರೆ, ಶಾಲೆ, ಪಶು ಆಸ್ಪತ್ರೆ ಸೇರಿದಂತೆ ಅನೇಕ ಕಟ್ಟಡಗಳ ನಿರ್ಮಾಣಕ್ಕೆ ಉದಾರವಾಗಿ ತಮ್ಮ ಜಮೀನನ್ನು ದಾನವಾಗಿ ರುದ್ರಪ್ಪ ಅವರು ನೀಡಿದ್ದಾರೆ. ಈಗ ಬಿ.ಕೆ. ಸತೀಶ್ ಅವರು ನೂತನ ಬಡಾವಣೆಗೆ ಶಾಸಕ ಪಿ. ರವಿಕುಮಾರ್, ಸಂಸದ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಇನ್ನೂ ಹಲವರ ಹೆಸರಿಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.

ನೂತನ ಬಡಾವಣೆಗೆ ತಮ್ಮ ಹೆಸರಿಡುವ ವಿಚಾರವನ್ನು ಅಲ್ಲಿಗೇ ಕೈಬಿಡುವಂತೆ ಸ್ವತಃ ಶಾಸಕ ಪಿ.ರವಿಕುಮಾರ್ ಅವರೇ ಹೇಳಿದ್ದರೂ ಶಾಸಕರ ಓಲೈಕೆಗಾಗಿ ಅಪಪ್ರಚಾರ ಮತ್ತು ದುರುದ್ದೇಶದಿಂದ ಮತ್ತದೇ ವಿಷಯವನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಆರು ತಿಂಗಳೊಳಗೆ ಬದಲಾವಣೆಗೆ ಅವಕಾಶವಿರುವುದರಿಂದ ಬೇರೆ ಹೆಸರನ್ನಿಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆಪಾದಿಸಿದರು.

ಬ್ಯಾಂಕ್ ನೌಕರರ ಸಹಕಾರ ಸಂಘದವರಿಂದ ೪೧೪/೪೬೭ ಸರ್ವೀಸ್ ರಸ್ತೆ ವಿನ್ಯಾಸ ನಕ್ಷೆಗಾಗಿ ಅಧ್ಯಕ್ಷರಿಗೆ ಲಂಚ ನೀಡಿದ್ದಾರೆ ಎನ್ನುವುದೂ ಸೇರಿ ೩೦ಕ್ಕೂ ಹೆಚ್ಚು ದೂರನ್ನು ಅಧ್ಯಕ್ಷರ ವಿರುದ್ಧವೇ ನೀಡಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ವಿಚಾರಣೆಗಾಗಿ ಪಂಚಾಯಿತಿಗೆ ಭೇಟಿ ನೀಡಿದ್ದ ವೇಳೆ ಅವರು ಕಚೇರಿಯೊಳಗೆ ನುಗ್ಗಿ ಅಧ್ಯಕ್ಷರು- ಸದಸ್ಯರ ಮೇಲೆ ಹಲ್ಲೆ ಮಾಡಿದ್ದು, ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ತಿಳಿಸಿದರು.

ಪೊಲೀಸ್ ಪ್ರಕರಣ ದಾಖಲಾದ ಬಳಿಕ ಆಡಳಿತ ಮಂಡಳಿ ವಿರುದ್ಧ ದಿನೇ ದಿನೇ ಆಧಾರ ರಹಿತ ಆರೋಪಗಳು ಹೆಚ್ಚಾಗುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ಪಂಚಾಯಿತಿ ವಿರುದ್ಧ ತನಿಖಾ ತಂಡ ರಚಿಸಿದ್ಧಾರೆ. ತನಿಖೆಗೆ ನಾವೂ ಸಿದ್ಧರಿದ್ದು, ನ್ಯಾಯಯುತವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಬೇರೆ ಬೇರೆ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟುಕೊಂಡು ಪತ್ರಿಕೆ ಮತ್ತು ಸಾಮಾಜಿಕ ಜಾಲ ತಾಣಗಳ ಮುಖಾಂತರ ಅನಗತ್ಯ ಮತ್ತು ದಾಖಲೆ ರಹಿತ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದು ಹೀಗೇ ಮುಂದುವರಿದರೆ ಪಂಚಾಯಿತಿ ಆಡಳಿತ ಮಂಡಳಿ ವಿಚಾರದಲ್ಲಿ ನಡೆಯುತ್ತಿರುವ ಈ ಅಪಪ್ರಚಾರ ವಿಷಯವನ್ನು ಜಿಲ್ಲೆ, ತಾಲೂಕು ಪಂಚಾಯಿತಿಗಳನ್ನು ಒಳಗೊಂಡು ಎಲ್ಲಾ ಗ್ರಾಪಂ ಸದಸ್ಯರಿಗೆ ತಿಳಿಸಿ ಗ್ರಾಪಂ ಸದಸ್ಯರ ಒಕ್ಕೂಟದ ಮುಂದಾಳತ್ವದಲ್ಲಿ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಧ್ಯಕ್ಷೆ ಮಾನಸ, ಉಪಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಬಿ.ಎಸ್.ಪೂರ್ಣಿಮಾ, ಹೆಚ್.ಎಸ್.ಮಧು, ಗಿರಿಗೌಡ ಇತರರಿದ್ದರು.