ಅನುದಾನಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ ಖಚಿತ: ಶಾಸಕ ಎಚ್.ಟಿ. ಮಂಜು

| Published : Apr 06 2025, 01:50 AM IST

ಅನುದಾನಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ ಖಚಿತ: ಶಾಸಕ ಎಚ್.ಟಿ. ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ವಿರೋಧಿಯಾಗಿದೆ. ಈ ಸರ್ಕಾರ ಬಂದಾಗಿನಿಂದ ತಾಲೂಕಿನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಿಲ್ಲ. ಕಳೆದ ಎರಡೂ ಅಧಿವೇಶನಗಳಲ್ಲಿ ಅನುದಾನಕ್ಕಾಗಿ ಮನವಿ ಮಾಡಿದ್ದರೂ ಸರ್ಕಾರವಾಗಲಿ, ಸಂಬಂಧಿಸಿದ ಸಚಿವರಾಗಲಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯವರಾಗಲಿ ನನ್ನ ಮನವಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಭಿವೃದ್ಧಿಗೆ ಅನುದಾನ ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡುವುದು ಖಚಿತ ಎಂದು ಶಾಸಕ ಎಚ್.ಟಿ. ಮಂಜು ಘೋಷಿಸಿದರು.

ಪಟ್ಟಣದ ಬಸವೇಶ್ವರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ವಿರೋಧಿಯಾಗಿದೆ. ಈ ಸರ್ಕಾರ ಬಂದಾಗಿನಿಂದ ತಾಲೂಕಿನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಿಲ್ಲ. ಕಳೆದ ಎರಡೂ ಅಧಿವೇಶನಗಳಲ್ಲಿ ಅನುದಾನಕ್ಕಾಗಿ ಮನವಿ ಮಾಡಿದ್ದರೂ ಸರ್ಕಾರವಾಗಲಿ, ಸಂಬಂಧಿಸಿದ ಸಚಿವರಾಗಲಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯವರಾಗಲಿ ನನ್ನ ಮನವಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಕಳೆದ ಎರಡು ವರ್ಷಗಳ ಹಿಂದೆ ತಾಲೂಕಿನಲ್ಲಿ ಬಾರಿ ಮಳೆಯಾಗಿ ಕೆರೆಗಳು ಒಡೆದಿದ್ದವು. ಜೊತೆಗೆ ರಸ್ತೆಗಳೂ ಹಾಳಾಗಿದ್ದವು. ಒಡೆದು ಹೋಗಿರುವ ಕೆರೆಗಳಿಗಾದರೂ ಅನುದಾನ ಬಿಡುಗಡೆ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದರೂ ಇಂದಿಗೂ ಉತ್ತರ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಿ.ಕೆಂಗೇಗೌಡ ಸಭಾ ಭವನ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆ.ಆರ್.ಪೇಟೆಗೆ ಆಗಮಿಸಿದ್ದ ವೇಳೆ ವೇದಿಕೆಯಲ್ಲಿ ಪೋಟೋಗಳ ಸಮೇತ ವಿವರಿಸಿ ಮನವಿ ಮಾಡಿದ್ದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳು ಸ್ಪಂದಿಸಿ ಅನುದಾನದ ಭರವಸೆ ಕೂಡ ನೀಡಿದ್ದರು. ಆದರೆ, ಈ ಕುರಿತು ಇದುವರೆಗೂ ಯಾವುದೇ ಉತ್ತರ ಸಿಗಲಿಲ್ಲ ಎಂದರು.

ಅನುದಾನಕ್ಕಾಗಿ ಕೆಲವು ಇಲಾಖೆಗಳಿಗೆ ಹತ್ತಾರು ಬಾರಿ ಅಲೆದಿದ್ದೇನೆ. ಆದರೆ ಏನೂ ಪ್ರಯೋಜನವಾಗಿಲ್ಲ. ನಾನು ವಿರೋಧ ಪಕ್ಷದ ಜೆಡಿಎಸ್ ಶಾಸಕನಾಗಿದ್ದರಿಂದ ಅನುದಾನ ನಿರೀಕ್ಷೆ ಮಾಡುವುದು ಕಷ್ಟಕರವಾಗಿದೆ ಎಂದು ಕಿಡಿಕಾರಿದರು.

ಕಷ್ಟದ ಸಮಯದಲ್ಲಿ ಶಾಸಕನಾಗಿದ್ದೇನೆ. ತಾಲೂಕಿನ ಜನತೆಗೆ ಉತ್ತರ ನೀಡುವುದು ಕಷ್ಟಕರವಾಗಿದೆ. ಕೆಲವರಿಗೆ ಇದು ಅರ್ಥವಾಗಬಹುದು, ಆದರೆ ಇನ್ನೂ ಹಲವರಿಗೆ ನನ್ನ ಪರಿಸ್ಥಿತಿ ಏನೆಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಯಾವುದೇ ಗ್ರಾಮಗಳಿಗೆ ಹೋದರೂ ಸಾರ್ವಜನಿಕರು ಸಮಸ್ಯೆಗಳನ್ನು ಮುಂದಿಡುತ್ತಿದ್ದಾರೆ. ಅವರಿಗೆ ಏನು ಹೇಳಬೇಕೆಂಬುದೆ ಗೊತ್ತಾಗುತ್ತಿಲ್ಲ ಎಂದು ವಿಷಾದಿಸಿದರು.

ಈ ಎಲ್ಲಾ ವಿಚಾರಗಳನ್ನು ಅವಲೋಕಿಸಿ ಅಂತಿಮವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ನನ್ನ ನೋವುಗಳನ್ನು ಈಗಾಗಲೇ ಪಕ್ಷದ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರ ಮುಂದಿಡುತ್ತಿದ್ದೇನೆ. ಅನುದಾನಕ್ಕಾಗಿ ಪಾದಯಾತ್ರೆ ಬಗ್ಗೆ ಚರ್ಚಿಸಿದ್ದೇನೆ. ಕಾರ್ಯಕರ್ತರು ಪಾದಯಾತ್ರೆಯ ಬಗ್ಗೆ ಸಕಾರಾತ್ಮಕ ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಅಭಿವೃದ್ಧಿಗಾಗಿ ಅನುದಾನ ತಂದು ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಬೇಕಿದೆ. ಪಕ್ಷದ ವರಿಷ್ಠರು ಕ್ಷೇತ್ರದ ಮುಖಂಡರು, ಕಾರ್ಯಕರ್ತರೊದಿಗೆ ಸೂಕ್ತ ದಿನಾಂಕದ ಬಗ್ಗೆ ಚರ್ಚಿಸಿ ಅತೀ ಶೀಘ್ರದಲ್ಲೇ ಕೆ.ಆರ್.ಪೇಟೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವುದಾಗಿ ತಿಳಿಸಿದರು.