ಸಾರಾಂಶ
ಹೂವಿನಹಡಗಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಹೂವಿನಹಡಗಲಿಯಿಂದ ಜಿಲ್ಲಾ ಕೇಂದ್ರದ ವರೆಗೂ, ಭಾರತೀಯ ಕಿಸಾನ್ ಸಂಘದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷ ವಿ.ಬಿ. ಕೊಟ್ರೇಶ, ಕಾರ್ಯದರ್ಶಿ ವಿ. ದುರುಗಪ್ಪ ಹೇಳಿದರು.
ಸಿಂಗಟಾಲೂರು ಏತ ನೀರಾವರಿ ಯೋಜನೆಯ ನೀರು ಬಳಕೆ ತಾರತಮ್ಯ, ಕೊಯಿಲಾರಗಟ್ಟಿಯಲ್ಲಿ ಕೃಷಿ ಸಂಶೋಧನಾ ಕೇಂದ್ರ, ಹುಲಿಗಡ್ಡದಲ್ಲಿ ಸಶಸ್ತ್ರ ಮೀಸಲು ಪಡೆ ತರಬೇತಿ ಕೇಂದ್ರ ನಿರ್ಮಾಣ ಪ್ರಮುಖ ಬೇಡಿಕೆಯಾಗಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಬತ್ತ, ಮೆಕ್ಕೆಜೋಳ, ಕಬ್ಬು, ಸೂರ್ಯಕಾಂತಿ ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಭಾಗದಲ್ಲಿ ರೈತರು ಹಾಗೂ ಅವರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೃಷಿ ಸಂಶೋಧನ ಕೇಂದ್ರ ಅಗತ್ಯವಾಗಿದೆ. ಈಗಾಗಲೇ ಈ ಕುರಿತು ಸರ್ಕಾರಿ ಭೂಮಿ ಲಭ್ಯವಿದೆ. ಇದಕ್ಕೆ ಬೇಕಾದ ಎಲ್ಲ ಅಗತ್ಯ ಮೂಲಭೂತ ಸೌಲಭ್ಯಗಳು ಇವೆ ಎಂದರು.
ಈ ಹಿಂದೆ ಎಂ.ಪಿ. ಪ್ರಕಾಶ ಅವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ, ಹುಲಿಗುಡ್ಡದಲ್ಲಿ ಸಶಸ್ತ್ರ ಮೀಸಲು ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆಗಾಗಿ 100 ಎಕರೆ ಭೂಮಿ ಮೀಸಲಿರಿಸಿದ್ದಾರೆ. ಈ ಕೂಡಲೇ ಸರ್ಕಾರ ಕ್ರಮ ಕೈಗೊಂಡು ಈ ಭಾಗದಲ್ಲಿ ಆರಂಭಿಸಿದರೆ, ಅತಿ ಹಿಂದುಳಿದ ಪ್ರದೇಶ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ ಎಂದರು.ಈ ಭಾಗದ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ, ಎಡದಂಡೆಗೆ 2.5 ಲಕ್ಷ ಎಕರೆ ಭೂಮಿಗೆ ತುಂತುರು ನೀರಾವರಿ ಮತ್ತು ಕಾಲುವೆಗಳ ಮೂಲಕ ನೀರು ಹರಿಸಿ ನೀರಾವರಿ ಸೌಲಭ್ಯ ಕಲ್ಪಸಲಾಗಿದೆ. ಈ ಯೋಜನೆಯಿಂದ 16 ಟಿಎಂಸಿ ನೀರು ಬಳಕೆಗೆ ಅವಕಾಶವಿದೆ. ಆದರೆ ಬಲದಂಡೆ ಭಾಗಕ್ಕೆ ಕೇವಲ 3 ಟಿಎಂಸಿ ನೀರು ಮಾತ್ರ ನೀಡಿದ್ದಾರೆ. ಉಳಿದೆಲ್ಲ ನೀರನ್ನು ಎಡದಂಡೆಗೆ ಬಳಕೆ ಮಾಡುತ್ತಿದ್ದಾರೆ. ಈ ಕುರಿತು ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ ಅವರು, ಬಲದಂಡೆ ಭಾಗದಲ್ಲಿಯೂ ಸಾವಿರಾರು ರೈತರು ತಮ್ಮ ಆಸ್ತಿ ಕಳೆದುಕೊಂಡಿದ್ದಾರೆ. ಆದರೆ ಈ ಭಾಗದಲ್ಲಿ ಕೇವಲ 35 ಸಾವಿರ ಎಕರೆ ಮಾತ್ರ ನೀರಾವರಿ ಪ್ರದೇಶಕ್ಕೆ ಒಳಪಟ್ಟಿದೆ. ನಮ್ಮ ಭಾಗಕ್ಕೂ ಯೋಜನೆಯ ನೀರು ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಹೂವಿನಹಡಗಲಿ ತಾಲೂಕ ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ರೈತರ ಪಾದಯಾತ್ರೆ ಕುರಿತು ಮುಂಬರುವ ದಿನಗಳಲ್ಲಿ ದಿನಾಂಕ ನಿಗದಿ ಮಾಡಲಾಗುವುದು ಎಂದರು.ಪದಾಧಿಕಾರಿಗಳ ಆಯ್ಕೆ: ಇದೇ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ವಿ.ಬಿ. ಕೊಟ್ರೇಶಪ್ಪ, ಉಪಾಧ್ಯಕ್ಷ ಟಿ. ಅಶೋಕ ಸೋಗಿ, ಕೆ. ಲಕ್ಷ್ಮಣ ಮುದೇನೂರು, ಪ್ರಧಾನ ಕಾರ್ಯದರ್ಶಿ ವಿ. ದುರುಗಪ್ಪ, ಯುವ ಪ್ರಮುಖರಾಗಿ ಕೆ. ಸುರೇಶ ವರಕನಹಳ್ಳಿ, ಸಾವಯವ ಪ್ರಮುಖ ಶಿವಪ್ರಕಾಶಯ್ಯ ಹನುಕನಹಳ್ಳಿ, ಮಹಿಳಾ ಪ್ರತಿನಿಧಿ ಬಿ.ಎಂ. ನಾಗರಾತ್ನ, ಸಹ ಕಾರ್ಯದರ್ಶಿ ಚಿಂಚಲಿ ಪರಶುರಾಮ ಅಂಗೂರು, ಮೂಡಲಿ ತಿರುಕಪ್ಪ ಸೋಗಿ ಅವರನ್ನು ವಿಜಯನಗರ ಜಿಲ್ಲಾಧ್ಯಕ್ಷ ಬಿ.ಎಂ. ಮಹೇಶ್ವರಯ್ಯ ಸ್ವಾಮಿ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.