ಆಕಸ್ಮಿಕ ಬೆಂಕಿಗೆ ಭತ್ತದ ಫಸಲು ಸಂಪೂರ್ಣ ಭಸ್ಮ..!

| Published : Dec 20 2023, 01:15 AM IST

ಸಾರಾಂಶ

ಕೊಯ್ಲು ಮಾಡಿ ಮೆದೆ ಹಾಕಿದ್ದ ಭತ್ತದ ಫಸಲಿಗೆ ಬೆಂಕಿ, ಬೆಂಕಿಯಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ನಷ್ಟ. ಸ್ಥಳಕ್ಕೆ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ, ಪರಿಹಾರ ನೀಡುವ ಭರವಸೆ

ಕನ್ನಡಪ್ರಭ ವಾರ್ತೆ ಮಂಡ್ಯ

ಕೊಯ್ಲು ಮಾಡಿ ಮೆದೆ ಹಾಕಿದ್ದ ಭತ್ತದ ಫಸಲಿಗೆ ಆಕಸ್ಮಿಕ ಬೆಂಕಿ ಬಿದ್ದು ಸುಟ್ಟುಹೋಗಿರುವ ಘಟನೆ ತಾಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಿದ್ದರಾಮು ಅವರಿಗೆ ಸೇರಿದ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಭತ್ತದ ಫಸಲು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಸ.ನಂ106 ಮತ್ತು 88/1 ರಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇರುವ ಮೀನಾಕ್ಷಿ ತಳಿಯ ಭತ್ತವನ್ನು ಬೆಳೆದಿದ್ದರು. ಕೆಲ ದಿನಗಳ ಹಿಂದಷ್ಟೇ ಫಸಲನ್ನು ಕೊಯ್ಲು ಮಾಡಿ ಜಮೀನಿನಲ್ಲಿ ಮೆದೆ ಹಾಕಿದ್ದರು. ಭತ್ತ ಬಡಿಯಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಭತ್ತದ ಫಸಲಿಗೆ ಬೆಂಕಿ ಬಿದ್ದು ನಷ್ಟ ಉಂಟುಮಾಡಿದೆ.

ಸ್ಥಳೀಯರು ಬೆಂಕಿ ನಂದಿಸಲು ತೀವ್ರ ಪ್ರಯತ್ನ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಬೆಂಕಿ ನಂದಿಸುವಷ್ಟರಲ್ಲಿ ಫಸಲು ಸಂಪೂರ್ಣವಾಗಿ ಭಸ್ಮವಾಗಿತ್ತು. ಆಕಸ್ಮಿಕ ಬೆಂಕಿಯಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗ. ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೆಳೆದಿದ್ದ ಫಸಲು ಮನೆಯವರ ಕೈ ಸೇರದೆ ಬೆಂಕಿಗಾಹುತಿಯಾಗಿ ಲಕ್ಷಾಂತರ ರು.ನಷ್ಟ ಸಂಭವಿಸಿರುವುದರಿಂದ, ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌: ಕಬ್ಬಿನ ಬೆಳೆ ಹಾನಿ

ಮಂಡ್ಯ: ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಕಬ್ಬು ಬೆಳೆ ಹಾನಿಗೊಳಗಾಗಿರುವ ಘಟನೆ ತಾಲೂಕಿನ ಮರಲಿಂಗನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ 4 ರಿಂದ 5 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆ ನಷ್ಟವಾಗಿದೆ ಎಂದು ಹೇಳಲಾಗಿದೆ. ಗ್ರಾಮದ ನಾಗರಾಜು, ನಿಂಗೇಗೌಡ, ಪಂಚಲಿಂಗ ಸೇರಿದಂತೆ ಐದಾರು ಜನರಿಗೆ ಸೇರಿದ ಕಬ್ಬು ಬೆಳೆ ಹಾನಿಯಾಗಿದೆ. ಕಬ್ಬಿನ ಗದ್ದೆ ಪಕ್ಕದಲ್ಲೇ ವಿದ್ಯುತ್‌ ಟ್ರಾನ್ಸ್‌ ಫಾರ್ಮರ್‌ ಇದ್ದು, ಟ್ರಾನ್ಸ್‌ ಫಾರ್ಮರ್‌ನಲ್ಲಿ ಉಂಟಾದ ಶಾರ್ಟ್‌ ಸರ್ಕ್ಯೂಟ್‌ನಿಂದ ಹಾರಿದ ಬೆಂಕಿ ಕಿಡಿ ಕಬ್ಬು ಬೆಳೆ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಬೆಂಕಿಯ ಜ್ವಾಲೆಗೆ ಕಬ್ಬು ಬೆಳೆ ಸಿಲುಕಿ ಸಾಕಷ್ಟು ಹಾನಿ ಸಂಭವಿಸಿದೆ. ಬೆಂಕಿ ಹೊತ್ತಿಕೊಂಡಿರುವ ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಮೂಲಕ ಹೆಚ್ಚಿನ ಹಾನಿ ಸಂಭವಿಸುವುದನ್ನು ತಪ್ಪಿಸಿದ್ದಾರೆ. ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.