ಸಾರಾಂಶ
ಈ ವೇಳೆ ಹೆಣ್ಣು ಮಕ್ಕಳು ದೀಪಗಳನ್ನಿಡಿದು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯ ಬಳಿಕ ಗ್ರಾಮದ ವೆಂಕಟೇಶ್ವರ ದೇವಾಲಯದ ಸಮೀಪ ಬಾಳೆ ನಾರಿನಿಂದ ನಿರ್ಮಿಸಿರುವ ಭವ್ಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು.
ಎಚ್.ಡಿ. ಕೋಟೆ: ತಾಲೂಕಿನ ಬೆಳಗನಹಳ್ಳಿಯಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರು ಪಡಿಪೂಜೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಿದರು.
ಅಯ್ಯಪ್ಪಸ್ವಾಮಿಯ ಪ್ರತಿಮೆಯನ್ನು ಬೆಳ್ಳಿ ರಥದಲ್ಲಿರಿಸಿ, ಗ್ರಾಮದ ಸಮೀಪವೇ ಹರಿಯುವ ಹೆಬ್ಬಳ್ಳ ನಾಲೆಯಿಂದ ಕಳಸಗಳನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಈ ವೇಳೆ ಹೆಣ್ಣು ಮಕ್ಕಳು ದೀಪಗಳನ್ನಿಡಿದು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯ ಬಳಿಕ ಗ್ರಾಮದ ವೆಂಕಟೇಶ್ವರ ದೇವಾಲಯದ ಸಮೀಪ ಬಾಳೆ ನಾರಿನಿಂದ ನಿರ್ಮಿಸಿರುವ ಭವ್ಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಹೋಮ ಹವನಗಳು ಸಹ ಜರುಗಿದವು. ಇದೇ ವೇಳೆ ಅಯ್ಯಪ್ಪಸ್ವಾಮಿ ಭಕ್ತರು ಕುದಿಯುತ್ತಿರುವ ಎಣ್ಣೆಯಲ್ಲಿ ಬೇಯಿತ್ತಿರುವ ಕಜ್ಜಾಯವನ್ನು ಬರಿಗೈಯಲ್ಲಿ ಎತ್ತುವುದರ ಮೂಲಕ ಭಕ್ತಿ ಭಾವ ಮೆರೆದರು. ಇದಕ್ಕೂ ಮುನ್ನಾ ಗ್ರಾಮದಲ್ಲೆಲ್ಲ ಹಾಗೂ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಎಲ್ಲ ಭಕ್ತರಿಗೂ ಅನ್ನದಾನ ನಡೆಯಿತು.