ಕರ್ನಾಟಕದ ಪದ್ಮಶ್ರೀ ವಿಜೇತರು

| Published : Jan 26 2025, 01:31 AM IST

ಸಾರಾಂಶ

ವೆಂಕಪ್ಪ ಅಂಬಾಜಿ, ಭೀಮವ್ವ ದೊಡ್ಡಬಾಳಪ್ಪ, ವಿಜಯಲಕ್ಷ್ಮೀ, ರಿಕ್ಕಿ ಕೇಜ್‌ಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ವೆಂಕಪ್ಪ ಅಂಬಾಜಿ ಸುಗತೇಕರ್:

ಕರ್ನಾಟಕದ ಬಾಗಲಕೋಟೆಯ ಗೊಂದಲಿ (ಜನಪದ ಹಾಡುಗಳು) ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ (81) ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ‘ಗೊಂದಲಿ ಭೀಷ್ಮ’ ಎಂದೇ ಖ್ಯಾತರಾಗಿರುವ ವೆಂಕಪ್ಪ ಅವರು ಘುಮಂಟು ಎಂಬ ಹಿಂದುಳಿದ ಸಮಾಜದವರು. ಇದುವರೆಗೆ 1,000ಕ್ಕೂ ಅಧಿಕ ಗೊಂದಲಿ ಹಾಡುಗಳನ್ನು ಹಾಡಿದ್ದು, 150ಕ್ಕೂ ಹೆಚ್ಚು ಗೊಂದಲಿ ಕಥೆಗಳನ್ನು ಹೇಳುವ ಮೂಲಕ ಜನಪದ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಗೊಂದಲಿ ಜಾನಪದ ಕಲೆಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ₹1 ಸಂಭಾವನೆಯನ್ನೂ ಪಡೆಯದೆ, ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ಫೆ.25ರಂದು ತಮ್ಮ 110ನೇ ಮನ್​ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಇವರ ಬಗ್ಗೆ ಗುಣಗಾನ ಮಾಡಿದ್ದರು.

ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ:

ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಭೀಮವ್ವ ಅನಕ್ಷರಸ್ಥೆಯಾಗಿದ್ದರೂ ತಮ್ಮ 14ನೇ ವಯಸ್ಸಿಗೆ ತೊಗಲು ಬೊಂಬೆಯಾಟದಲ್ಲಿ ಪರಿಣತಿ ಪಡೆದಿದ್ದರು. ಕಳೆದ 70 ವರ್ಷಗಳಿಂದ ತೊಗಲು ಗೊಂಬೆಯಾಟವನ್ನು ಕುಲಕಸುಬಾಗಿ ಮಾಡುತ್ತಾ ಬಂದಿರುವ ಇವರು ಅಮೆರಿಕ, ಪ್ಯಾರಿಸ್, ಇಟಲಿ, ಇರಾನ್, ಇರಾಕ್, ಸ್ವಿಟ್ಜರ್ಲೆಂಡ್‌‌ ಮತ್ತು ಹಾಲೆಂಡ್ ಸೇರಿ 12ಕ್ಕೂ ಅಧಿಕ ದೇಶಗಳಲ್ಲಿ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯ ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ತೊಗಲುಗೊಂಬೆಯಾಟದ ಮೂಲಕ ಪ್ರದರ್ಶನ ನೀಡಿ ನಾಡಿನ ಜಾನಪದ ಸಂಸ್ಕೃತಿಯ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. 1993ರಲ್ಲಿ ಇರಾನ್ ಇವರಿಗೆ ಬೊಂಬೆಯಾಟ ಪ್ರಶಸ್ತಿ ನೀಡಿ ಗೌರವಿಸಿತ್ತು.

ವಿಜಯಲಕ್ಷ್ಮೀ ದೇಶಮಾನೆ:

ಕಲಬುರಗಿ ಮೂಲದ ಖ್ಯಾತ ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮೀ ದೇಶಮಾನೆ ಅವರಿಗೆ 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಕಳೆದ 40 ವರ್ಷಗಳಿಂದ ಸಾವಿರಾರು ಕ್ಯಾನ್ಸರ್ ರೋಗಿಗಳಿಗೆ ಜೀವದಾನ ಮಾಡಿದ್ದಾರೆ. ಹಿಂದುಳಿದ ಮಾದಿಗ ಸಮುದಾಯದಿಂದ ಬಂದಿರುವ ಇವರು ಬಾಲ್ಯದಲ್ಲಿ ಅಪಾರ ಬಡತನವನ್ನು ಕಂಡವರು. ತಂದೆ ಜವಳಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲ್ಯದಲ್ಲಿ ತಾಯಿಗೆ ತರಕಾರಿ ಮಾರಲು ಸಹಾಯ ಮಾಡಿ ಛಲ ಬಿಡದೆ ಓದಿ ವೈದ್ಯೆಯಾಗಿ, ತಮ್ಮ ಇಡೀ ಬದುಕನ್ನು ಬಡವರಿಗೆ ಉಚಿತ ಚಿಕಿತ್ಸೆ ನೀಡಲು ಮುಡಿಪಾಗಿಟ್ಟಿದ್ದಾರೆ. ಬೆಂಗಳೂರಿನ ಕಿದ್ವಾಯಿ ಮೆಮೊರಿಯಲ್ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಕ್ಯಾನ್ಸರ್ ಆರೈಕೆ, ಸಂಶೋಧನೆ ಮತ್ತು ಸಮುದಾಯ ಜಾಗೃತಿ ಮೂಡಿಸುವಲ್ಲಿ ಅನುಪಮ ಕೊಡುಗೆ ನೀಡಿದ್ದಾರೆ. ಸ್ತನ ಕ್ಯಾನ್ಸರ್ ಸಂಶೋಧನೆಯಲ್ಲಿ ಪರಿಣಾಮಕಾರಿ ಅಧ್ಯಯನಗಳನ್ನು ನಡೆಸುವ ಮೂಲಕ ಆಂಕೊಲಾಜಿ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ.

ರಿಕ್ಕಿ ಕೇಜ್‌:ಭಾರತೀಯ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರಿಗೆ ಭಾರತ ಸರ್ಕಾರ 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ. 1981ರಲ್ಲಿ ಉತ್ತರ ಕೆರೊಲಿನಾದಲ್ಲಿ ಜನಿಸಿದ ರಿಕ್ಕಿ ತಮ್ಮ 8ನೇ ವಯಸ್ಸಿಗೆ ಬೆಂಗಳೂರಿನ ಆಗಮಿಸಿದರು. ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಅಧ್ಯಯನ ಮಾಡಿ, ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನಲ್ಲಿ ದಂತವೈದ್ಯಶಾಸ್ತ್ರದಲ್ಲಿ ಪದವಿ ಪಡೆದರು. ರಿಕ್ಕಿ ಕೇಜ್ 35 ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. 16 ಅಂತಾರಾಷ್ಟ್ರೀಯ ಸ್ಟುಡಿಯೋ ಆಲ್ಬಮ್‌ಗಳು, 3,500ಕ್ಕೂ ಹೆಚ್ಚು ಜಾಹೀರಾತುಗಳು ಮತ್ತು ವೈಲ್ಡ್ ಕರ್ನಾಟಕ ಸೇರಿ ನಾಲ್ಕು ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ಹಿರಿಮೆ ರಿಕ್ಕಿ ಅವರಿಗಿದೆ. ಸಂಗೀತ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ ಎಂದೇ ಪರಿಗಣಿಸಲ್ಪಡುವ ಗ್ರ್ಯಾಮಿ ಪ್ರಶಸ್ತಿಯನ್ನು 3 ಬಾರಿ ಪಡೆದ ಮೊದಲ ಭಾರತೀಯ ಹಾಗೂ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ರಿಕ್ಕಿ ಪಾತ್ರರಾಗಿದ್ದಾರೆ.