ಸಾರಾಂಶ
ರಾಮನಗರ: ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಹತ್ಯೆ ಮಾಡಿದ ಪ್ರಕರಣವನ್ನು ಸುಪ್ರಿಂಕೋರ್ಟಿನ ನಿವೃತ್ತ ನ್ಯಾಯಾಧೀಶರ ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗಳು ಹತ್ತಿರ ಬಂದಾಗಲೆಲ್ಲ ಭಯೋತ್ಪಾದಕರ ದಾಳಿಗಳು ನಡೆಯುತ್ತವೆ. ಪುಲ್ವಾಮ ಸೇರಿ ಸಾಕಷ್ಟು ಭಯೋತ್ಪಾದಕ ದಾಳಿಗಳು ನಡೆದಿವೆ. ಪಹಲ್ಗಾಮ್ ದುರ್ಘಟನೆಯ ಸತ್ಯಾಂಶ ಹೊರ ಬರಬೇಕಾದರೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದರು.ಆಪರೇಷನ್ ಸಿಂದೂರದ ಬಗ್ಗೆ ದೇಶಕ್ಕೆ ಅನುಮಾನ ಇದೆ. ಪಹಲ್ಗಾಮ್ ಗೆ 6 ಉಗ್ರರು ಬಂದು 25 ಪ್ರವಾಸಿಗರನ್ನು ಹತ್ಯೆ ಮಾಡಿ ಸುಸೂತ್ರವಾಗಿ ವಾಪಸ್ ಹೋಗಿದ್ದಾರೆ. ದೇಶದ ಭದ್ರತಾ ವ್ಯವಸ್ಥೆ ಏನು ಮಾಡುತ್ತಿತ್ತು. ಅವರು ದೇಶದ ಒಳಗೆ ಹೇಗೆ ಬಂದರು. ಕಾಶ್ಮೀರದ ಭದ್ರತಾ ವ್ಯವಸ್ಥೆ ಕಾಶ್ಮೀರಿ ಪೊಲೀಸರ ಕೈಯಲಿಲ್ಲ, ಲೆಫ್ಟಿನೆಂಟ್ ಗವರ್ನರ್ ಕೈಯಲ್ಲಿದೆ. ಇದಕ್ಕೆ ಲೆಫ್ಟಿನೆಂಟ್ ಗವರ್ನರ್ ಉತ್ತರ ಕೊಡಬೇಕು ಎಂದರು.
ಯುದ್ಧ ಆರಂಭವಾದಾಗ ಇಡೀ ದೇಶದ ಜನರು ಪ್ರಧಾನಿ ಮೋದಿ ಅವರಿಗೆ ಸಂಪೂರ್ಣ ಬೆಂಬಲ ನೀಡಿದರು. ಆದರೆ, ಇದ್ದಕ್ಕಿದ್ದಂತೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಹೇಳಿದರೆಂದು ಯುದ್ಧ ನಿಲ್ಲಿಸಿದರು. ಟ್ರಂಪ್ ಯಾರು? ನಮ್ಮ ದೊಡ್ಡಪ್ಪನೇ, ಚಿಕ್ಕಪ್ಪನೇ, ನಮ್ಮ ದೇಶದ ವಿಚಾರಕ್ಕೆ ಕೈ ಹಾಕಲು ಟ್ರಂಪ್ ಯಾರೆಂದು ಇಬ್ರಾಹಿಂ ಪ್ರಶ್ನಿಸಿದರು.ಇಂದಿರಾಗಾಂಧಿ 93 ಸಾವಿರ ಪಾಕಿಸ್ತಾನದ ಸೈನಿಕರನ್ನು ಸೆರೆಹಿಡಿದಿದ್ದರು. ವಾಜಪೇಯಿ ನಮ್ಮ ದೇಶದ ವಿಚಾರಕ್ಕೆ ಮೂರನೇ ವ್ಯಕ್ತಿಗಳ ಪ್ರವೇಶ ಬೇಡ ಅಂದಿದ್ದರು. ಆದರೆ, ಈಗಿನ ಪ್ರಧಾನಿ ಮೋದಿಗೆ ಇಚ್ಛಾಶಕ್ತಿಯ ಕೊರತೆ ಇದೆ. ಮೊದಲು ಇತಿಹಾಸ ನೋಡಿಕೊಂಡು ಬರಲಿ. ಟ್ರಂಪ್ ಬಳಿ ಅಚ್ಚೇ ದಿನ ಪಡೆಯುವ ಪರಿಸ್ಥಿತಿ ಬಂದಿದೆ. ಯುದ್ಧ ನಿಲ್ಲಿಸಿದರೆ ಟೆರರಿಸ್ಟ್ ಸಿಗುತ್ತಾರಾ ? ಉಗ್ರರನ್ನು ನಮಗೆ ಒಪ್ಪಿಸಿ ಅಂತ ಪಾಕಿಸ್ತಾನಕ್ಕೆ ಕೇಳಬೇಕಲ್ಲ. ಏಕೆ ಹಾಗೆ ಮಾಡಲಿಲ್ಲ, ನಮ್ಮ 25 ಮಂದಿ ಸಾವಿಗೆ ನ್ಯಾಯ ಕೊಟ್ಟರಾ ಎಂದು ಪ್ರಶ್ನಿಸಿದರು.
ಮೋದಿಯವರು ನವಾಜ್ ಶರೀಫ್ ಮನೆಗೆ ಹೋಗಿ ಬಿರಿಯಾನಿ ತಿನ್ನುತ್ತಾರೆ. ಅವರನ್ನು ಯಾರು ಕರೆದಿದ್ದರು. ಕರೆಯದೆಯೂ ಹೋಗಿ ಬಂದಿದ್ದಾರೆ. ಪಹಲ್ಗಾಮ್ ದಾಳಿ ಆದ ಮೇಲೆ ಮೋದಿ ಬಿಹಾರಕ್ಕೆ ಹೋದರು. ಮೃತಪಟ್ಟ ಪ್ರವಾಸಿಗರ ಮನೆಗೆ ಏಕೆ ಹೋಗಲಿಲ್ಲ. ಪಾಕಿಸ್ತಾನವನ್ನು 24 ಗಂಟೆಯಲ್ಲಿ ಒದ್ದು ಒಳಗೆ ಹಾಕಬಹುದು. ಈಗ ಒಬ್ಬ ನರಪಿಳ್ಳೆಯನ್ನೂ ಹಿಡಿದಿಲ್ಲ. ಅವರ ಹೆಸರು ಕೂಡ ಗೊತ್ತಾಗಲಿಲ್ಲ ಎಂದು ಇಬ್ರಾಹಿಂ ವಾಗ್ದಾಳಿ ನಡೆಸಿದರು.-----------------------------
18ಕೆಆರ್ ಎಂಎನ್ 3.ಜೆಪಿಜಿಮಾಜಿ ಸಚಿವ ಸಿ.ಎಂ.ಇಬ್ರಾಹಿಂ
------------------------------