ಸಾರಾಂಶ
ಏಕೀಕರಣ ಹೋರಾಟದಲ್ಲಿ ಕನ್ನಡ ನಾಡಿಗೋಸ್ಕರ ಪ್ರಾಣತ್ಯಾಗ ಮಾಡಿದ ಏಕೈಕ ವ್ಯಕ್ತಿ ಬಳ್ಳಾರಿಯ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ಅವರ ಸ್ವಾಭಿಮಾನದ ಹೋರಾಟವನ್ನು ಮರೆಯಬಾರದು.
ಕನ್ನಡಪ್ರಭ ವಾರ್ತೆ ಕುರುಗೋಡು
ಏಕೀಕರಣ ಹೋರಾಟದಲ್ಲಿ ಕನ್ನಡ ನಾಡಿಗೋಸ್ಕರ ಪ್ರಾಣತ್ಯಾಗ ಮಾಡಿದ ಏಕೈಕ ವ್ಯಕ್ತಿ ಬಳ್ಳಾರಿಯ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ಅವರ ಸ್ವಾಭಿಮಾನದ ಹೋರಾಟವನ್ನು ಮರೆಯಬಾರದು. ಪ್ರತಿಯೊಬ್ಬ ಕನ್ನಡಿಗರು ಅವರನ್ನು ಸ್ಮರಿಸಿ ಗೌರವಿಸಬೇಕು ಎಂದು ಲೇಖಕ ಸಿದ್ದರಾಮ ಕಲ್ಮಠ ಹೇಳಿದರು.ಇಲ್ಲಿನ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ಏಕೀಕರಣಕ್ಕೆ ಮುನ್ನುಡಿ ಬರೆದ ಜಿಲ್ಲೆಯೆಂದರೆ ಅದು ಬಳ್ಳಾರಿ. ಒಬ್ಬ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿಯು ತನ್ನ ಅಸಾಮಾನ್ಯ ಕನ್ನಡ ಪ್ರೀತಿಯಿಂದ ನಾಡ ಕಟ್ಟುವ ಕಾರ್ಯದಲ್ಲಿ ನಿರತನಾದನು. ಬಳ್ಳಾರಿಯು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡ ಸಂಭ್ರಮದ ವಿಜಯೋತ್ಸವದ ವೇದಿಕೆಗೆ ಬೆಂಕಿಹಾಕಲು ದುಷ್ಕರ್ಮಿಗಳು ಹೊಂಚುಹಾಕಿದ್ದರು. ವೇದಿಕೆ ನಿರ್ಮಾಣದಲ್ಲಿ ತೊಡಗಿದ್ದ ರಂಜಾನ್ ಸಾಬ್ ಆ್ಯಸಿಡ್ ದಾಳಿಗೆ ತುತ್ತಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದರು ಎಂದು ಭಾವುಕರಾದರು.ಒಬ್ಬ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಪೈಲ್ವಾನ್ ರಂಜಾನ್ ಸಾಬ್ ಅವರಲ್ಲಿನ ಅಸಾಮಾನ್ಯ ಕನ್ನಡ ಪ್ರೀತಿಯಿಂದ ನಾಡುಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ಪ್ರಾಚಾರ್ಯ ಎಚ್. ರಾಮಕೃಷ್ಣ ಮಾತನಾಡಿ, ಪದವಿ ಪಠ್ಯಪುಸ್ತಕದಲ್ಲಿನ ಲೇಖಕರನ್ನು ವಿದ್ಯಾರ್ಥಿಗಳನ್ನು ನೇರವಾಗಿ ಪರಿಚಯಿಸುವ ಉದ್ದೇಶದಿಂದ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿದೆ. ವಿದ್ಯಾರ್ಥಿಗಳು ಮುಕ್ತವಾಗಿ ಲೇಖಕರೊಂದಿಗೆ ಸಂವಾದದಲ್ಲಿ ತೊಡಗಿದ್ದು ಖುಷಿ ತಂದಿದೆ ಎಂದರು.ಅಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಶಾಂತಲಾ, ಕನ್ನಡ ವಿಭಾಗದ ಮುಖ್ಯಸ್ಥ ತಿಪ್ಪೇರುದ್ರ, ಶಶಿಕಾಂತ್, ಎನ್.ಮಧುಸೂಧನ, ಮಂಜುನಾಥ ಸ್ವಾಮಿ, ಎಚ್.ಹುಲುಗಪ್ಪ, ಆರ್.ರುದ್ರಮುನಿ ಮತ್ತು ಕನಕರಾಯ ಇದ್ದರು.