ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಗ್ಯಾರಂಟಿ ಯೋಜನೆಗಳಿಂದ ಮತಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅನುದಾನ ಬರುತ್ತಿಲ್ಲ ಎನ್ನುವ ವಿರೋಧಿಗಳ ಮಾತನ್ನು ನಾನು ಒಪ್ಪುವುದಿಲ್ಲ. ಗ್ಯಾರಂಟಿಗಳ ಮಧ್ಯೆ ಅಥಣಿ ಮತಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವ ಮೂಲಕ ಪೂರ್ವ ಭಾಗದ ರೈತರ ಬಹುದಿನಗಳ ಕನಸಿನ ನೀರಾವರಿ ಯೋಜನೆಯಿಂದ 75 ಸಾವಿರ ಎಕರೆ ಪ್ರದೇಶಕ್ಕೆ ಬರುವ ಜನವರಿ ಒಳಗಾಗಿ ನೀರು ಒದಗಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ತಾಲೂಕಿನ ಝಂಜರವಾಡ ಗ್ರಾಮದಲ್ಲಿ ಕೊಟ್ಟಲಗಿ- ಅಮ್ಮಾಜೇಶ್ವರಿ ಏತ ನೀರಾವರಿ- ಯೋಜನೆಯ ಜಾಕ್‌ವೆಲ್ ಕಮ್ ಪಂಪ್‌ಹೌಸ್ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ ಪಶು ವೈದ್ಯಕೀಯ ಮಹಾವಿದ್ಯಾಲಯದ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ರೈತರ ಪರವಾಗಿ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದೆ. ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನಂತರ ಯಾವುದೇ ಅಧಿಕಾರ, ಮಂತ್ರಿ ಸ್ಥಾನಕ್ಕಾಗಿ ಕರಾರು ಮಾಡದೆ, ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಮತ್ತು ಪ್ರಮುಖ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಮನವಿ ಮಾಡಿದ್ದೆ. ನನ್ನ ಮನವಿಗೆ ಸಿಎಂ, ಡಿಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚಿನ ಅನುದಾನ ನೀಡಿದ್ದಾರೆ. ಮೊದಲ ಹಂತವಾಗಿ ಬಂದಿರುವ ಅನುದಾನದಿಂದ ಈಗ ಕಾಮಗಾರಿ ಪ್ರಗತಿ ಹಂತದಲ್ಲಿವೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಸುಮಾರು 75 ಸಾವಿರ ಎಕರೆ ಪ್ರದೇಶ ನೀರಾವರಿ ಸೌಲಭ್ಯ ಹೊಂದುವ ಮೂಲಕ ರೈತರ ಜಮೀನುಗಳು ಹಸಿರಾಗಲಿದೆ ಎಂದರು.ಕಳೆದ ಬಜೆಟ್‌ನಲ್ಲಿ ಕೃಷಿ ಮಹಾವಿದ್ಯಾಲಯ ಮಂಜೂರು ಮಾಡಿದ್ದಾರೆ. ಶೀಘ್ರದಲ್ಲಿಯೇ ಕೃಷ್ಣಾನದಿ ತೀರದ ಅನೇಕ ಗ್ರಾಮಗಳ ರೈತರ ಬಹುದಿನಗಳ ಬೇಡಿಕೆಯಾಗಿರುವ ಸವಳು-ಜವಳು ಭೂಮಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರೈತರ ಸಮಸ್ಯೆಗೆ ಸರ್ಕಾರ ಅನುದಾನ ಒದಗಿಸಲಿದೆ. ತಾಲೂಕಿನ ಪೂರ್ವ ಭಾಗದ 9 ಕೆರೆ ತುಂಬುವ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ 2 ಕೆರೆ ತುಂಬುವ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಅಂತರ್ಜಲಮಟ್ಟ ಹೆಚ್ಚಾಗಲಿದೆ. ನಮ್ಮ ರೈತರ ಬಾವಿ ಮತ್ತು ಬೋರ್ವೆಲ್‌ಗಳಿಗೆ ನಿರಂತರ ನೀರಿನ ಸೌಲಭ್ಯ ದೊರಕಲಿದೆಂದರು. ಇದಲ್ಲದೆ ರೈತರ ಜಮೀನುಗಳಲ್ಲಿ ಪ್ರತಿ 1 ಕಿ.ಮೀ. ವ್ಯಾಪ್ತಿಯಲ್ಲಿ ಒಂದರಂತೆ ಬೋರ್‌ವೆಲ್ ಕೊರೆಸುವ ಪೈಲೆಟ್ ನೀರಾವರಿ ಯೋಜನೆಯನ್ನು ಕೇಂದ್ರ ಸರ್ಕಾರದ ಶೇ.60 ಮತ್ತು ರಾಜ್ಯ ಸರ್ಕಾರದ ಶೇ.40ರಷ್ಟು ಅನುದಾನದಲ್ಲಿ ತಾಲೂಕಿನ 2.25ಲಕ್ಷ ಎಕರೆ ಪ್ರದೇಶದಲ್ಲಿ ಬೋರ್‌ವೆಲ್ ಕೊರೆಸುವ ಯೋಜನೆ ಅನುಷ್ಠಾನಗೊಳಿಸಲಾಗುವುದು. ಇದರಿಂದ ಅಂತರ್ಜಲಮಟ್ಟ ಹೆಚ್ಚಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಜಾಕ್ ವೆಲ್ ಮತ್ತು ಪಂಪ ಹೌಸ್ ನಿರ್ಮಾಣಕ್ಕೆ ಜಮೀನು ಒದಗಿಸಿದ ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಿಸಿದರು. ಯುವ ಮುಖಂಡ ಚಿದಾನಂದ ಸವದಿ, ಅಮೋಘ ಕೊಬ್ರಿ, ಸಿ.ಎಸ್.ನೇಮಗೌಡ, ಸಿದ್ರಾಯ ಯಲಡಗಿ, ಶಾಂತಿನಾಥ ನಂದೇಶ್ವರ, ಶಿವು ಗುಡ್ಡಾಪುರ, ಗುರಪ್ಪ ದಾಶ್ಯಾಳ, ಮಲ್ಲು ಡಂಗಿ, ಕುಮಾರ ನೇಮಗೌಡ, ಶ್ರೀಶೈಲ ಶೆಲೇಪ್ಪಗೋಳ, ಶಾಮರಾವ ಪುಜಾರಿ, ನೀರಾವರಿ ಯೋಜನಾಧಿಕಾರಿ ಎ.ನಾಗರಾಜ, ಪ್ರವೀಣ ಹುಣಶಿಕಟ್ಟಿ, ಭರತೇಶ ಮಹಿಷವಾಡಗಿ, ಗುತ್ತಿಗೆದಾರ ಸುರೇಶ ಪನ್ನೀಕರ, ರವೀಂದ್ರ ಮುರಗಾಲಿ, ವಿರಣ್ಣಾ ವಾಲಿ ಅನೇಕರಿದ್ದರು.