ಸಾರಾಂಶ
ಚೆನ್ನೈನಲ್ಲಿ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಪಾಕಿಸ್ತಾನಿ ಮಹಿಳೆಯು ದಾವಣಗೆರೆಯ ವ್ಯಕ್ತಿಯನ್ನು ಮದುವೆ ಆಗಿರುವುದು ಬೆಳಕಿಗೆ ಬಂದಿದೆ.
ದಾವಣಗೆರೆ : ಚೆನ್ನೈನಲ್ಲಿ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಪಾಕಿಸ್ತಾನಿ ಮಹಿಳೆಯು ದಾವಣಗೆರೆಯ ವ್ಯಕ್ತಿಯನ್ನು ಮದುವೆ ಆಗಿರುವುದು ಬೆಳಕಿಗೆ ಬಂದಿದೆ.
ಪಾಕ್ ಮೂಲದ ಫಾತಿಮಾ ದಾವಣಗೆರೆಯ ಅಲ್ತಾಫ್ ಎಂಬಾತನನ್ನು ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ವಿವಾಹ ಆಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ನಗರದ ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತದ 2ನೇ ಮುಖ್ಯ ರಸ್ತೆ 8ನೇ ಕ್ರಾಸ್ ನಿವಾಸಿ, ಆರೋಗ್ಯ ಇಲಾಖೆ ನಿವೃತ್ತ ನೌಕರ ಖಲಂದರ್ ಎಂಬವರ ಮೊದಲ ಮಗ ಅಲ್ತಾಫ್‌ನನ್ನು ಫಾತಿಮಾ ಮದುವೆಯಾಗಿದ್ದಾಳೆ.
ಖಲಂದರ್ ನಿವೃತ್ತಿ ನಂತರ ಬೆಂಗಳೂರಿಗೆ ಕುಟುಂಬ ಸಮೇತ ಶಿಫ್ಟ್ ಆಗಿದ್ದರು. ಅಲ್ಲಿಯೇ ಅಲ್ತಾಫ್ ಮತ್ತು ಫಾತಿಮಾ ನಿಖಾ (ಮದುವೆ) ನಡೆದಿತ್ತು. ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯ ಮನೆಯನ್ನು ಖಲಂದರ್ ಬಾಡಿಗೆ ನೀಡಿದ್ದಾರೆ. ಅಲ್ತಾಫ್‌ನನ್ನು ವಿವಾಹವಾಗಿದ್ದ ಫಾತಿಮಾ ಆಗಾಗ ದಾವಣಗೆರೆಗೆ ಬಂದು, ಹೋಗುತ್ತಿದ್ದಳು. ಕಳೆದ ವರ್ಷ ಖಲಂದರ್ ಪತ್ನಿ ಮೃತಪಟ್ಟಿದ್ದಾಗ ಕೂಡ ಫಾತಿಮಾ ದಾವಣಗೆರೆಗೆ ಬಂದಿದ್ದಳು ಎನ್ನಲಾಗಿದೆ.