ಸಾರಾಂಶ
ಜಮ್ಮು-ಕಾಶ್ಮೀರದ ಕುಪ್ವಾರದ ಅನುಭವ ತೆರೆದಿಟ್ಟ ನಿವೃತ್ತ ಯೋಧ ನರೇಶ್ ಪೈ
ಆತ್ಮಭೂಷಣ್ಕನ್ನಡಪ್ರಭ ವಾರ್ತೆ ಮಂಗಳೂರು
‘ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ಕಾಯುತ್ತಿರುವ ಸೈನಿಕರು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಇಫ್ತಾರ್ ಕೂಟ ಆಯೋಜಿಸುವುದು ಕ್ರಮ. ಹಾಗೆ ಒಂದು ದಿನ ಇಫ್ತಾರ್ ಕೂಡ ಆಯೋಜಿಸಿದ್ದೆವು. ಇಫ್ತಾರ್ ಕೂಟ ಮುಗಿಸಿ ಎಲ್ಲರೂ ತೆರಳಿದ ಬಳಿಕ ಅಗಂತುಕರಿಂದ ಕರೆಯೊಂದು ಬಂದಿತ್ತು. ಆ ಕರೆಯಲ್ಲಿ, ನಾವು ಪಾಕಿಸ್ತಾನಿ ಸೈನಿಕರು. ನಾವಿಬ್ಬರು ಇಫ್ತಾರ್ ಕೂಟಕ್ಕೆ ಬಂದು ಹೋಗಿದ್ದೆವು. ನಿಮಗೆ ನಮ್ಮನ್ನು ಪತ್ತೆ ಮಾಡಲೂ ಸಾಧ್ಯವಾಗಿಲ್ಲವಲ್ಲ ಎಂದು ಮೂದಲಿಸಿ ಮಾತನಾಡಿ ಕರೆ ಕಡಿತಗೊಳಿಸಿದ್ದರು.’‘ಗಡಿ ಕಾಯುತ್ತಿರುವ ಭಾರತೀಯ ಸೈನಿಕರಾದ ನಮಗೆ ಅಷ್ಟೇ ಸಾಕಿತ್ತು. ಕೂಡಲೇ ಸಿಸಿ ಕ್ಯಾಮರಾ ಪರಿಶೀಲಿಸಿ ಯಾರೆಲ್ಲ ಇಫ್ತಾರ್ ಕೂಟಕ್ಕೆ ಬಂದುಹೋಗಿದ್ದಾರೆ ಎಂದು ಪರಿಶೀಲಿಸಿದೆವು. ಸೂಕ್ಷ್ಮವಾಗಿ ನೋಡಿದಾಗ ಇಬ್ಬರು ಉಗ್ರರು ಸ್ಥಳೀಯರ ಪೊಷಾಕಿನಲ್ಲಿ ಬಂದುಹೋಗಿರುವುದು ಗೊತ್ತಾಯಿತು. ನಾವು ಸ್ಥಳೀಯರ ದಿರಿಸಿನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರ ಜೊತೆಯಲ್ಲಿ ಇನ್ನೊಬ್ಬ ಉಗ್ರನನ್ನೂ ಕೇವಲ 72 ಗಂಟೆಯಲ್ಲಿ ಕೊಂದು ಹಾಕಿದೆವು.’
2012ರಲ್ಲಿ ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಗಡಿ ಕಾಯುತ್ತಿದ್ದ ರಾಷ್ಟ್ರೀಯ ರೈಫಲ್ಸ್ ಯೋಧ, ನಿವೃತ್ತ ಎಸಿಪಿ ಹವಾಲ್ದಾರ್ ಮಂಗಳೂರಿನ ನರೇಶ್ ಪೈ ತಮ್ಮ ಪಾಕ್ ಸೈನಿಕರ ಕೊಂದ ಅನುಭವ ಕಥನವನ್ನು ‘ಕನ್ನಡಪ್ರಭ’ ಜೊತೆ ಬಿಚ್ಚಿಟ್ಟ ಬಗೆ ಇದು.ತಾಂತ್ರಿಕತೆಯ ಜೊತೆ ಯೋಧನಾಗಿ ಕಾರ್ಯ:
ಭಾರತೀಯ ಭೂಸೇನೆಯ ಎಲೆಕ್ಟ್ರಾನಿಕ್ಸ್ ಅಂಡ್ ಮೆಕಾನಿಕಲ್ ಎಂಜಿನಿಯರ್ಸ್ ವಿಭಾಗಕ್ಕೆ ಸೇರ್ಪಡೆಯಾದ ನರೇಶ್ ಪೈ ಅವರು ಭೂಪಾಲ್‌ನಲ್ಲಿ ತರಬೇತಿ ಪಡೆದರು. ಇವರ ಪ್ರಥಮ ನೇಮಕಾತಿ ಜಮ್ಮು ಮತ್ತು ಕಾಶ್ಮೀರಕ್ಕೆ. ಅಲ್ಲಿನ ಉಗ್ರಪೀಡಿತ ಪ್ರದೇಶ ಕಾಲುಚೆಕ್ ಎಂಬಲ್ಲಿಗೆ. ಅದು ಯಾವಾಗ ಬೇಕಾದರೂ ಉಗ್ರರ ದಾಳಿಯಾಗುವ ಪ್ರದೇಶ. ಕೌಂಟರ್ ಇಂಟರ್‌ಜೆನ್ಸಿ ಆಪರೇಷನ್(ಸಿಐ ಓಪ್ಸ್) ಎಂದೇ ಕರೆಯಲ್ಪಡುವ ಈ ಪ್ರದೇಶದಲ್ಲಿ ನರೇಶ್ ಪೈ ಮೂರು ವರ್ಷ ಯೋಧನಾಗಿ ಕಾರ್ಯನಿರ್ವಹಿಸಿದ್ದರು.ಇಲ್ಲಿ ಕಾರ್ಯನಿರ್ವಹಿಸುವಾಗ ನರೇಶ್ ಪೈ ಅವರು ಸೇನೆಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೂ ಯೋಧನಾಗಿಯೂ ಎರಡೂ ಕಾರ್ಯವನ್ನು ನಡೆಸಬೇಕಾಗುತ್ತಿತ್ತು. ಮಿಲಿಟರಿ ಟ್ಯಾಂಕರ್ ನಿರ್ವಹಣೆ ಜೊತೆಗೆ ಸೇನಾ ಕಾರ್ಯಚರಣೆಗೂ ಕಳುಹಿಸುತ್ತಿದ್ದರು. ಉತ್ತರ ಕಾಶ್ಮೀರದ ಕುಪ್ವಾರದಂತಹ ಉಗ್ರರ ಉಪಟಳ ಪ್ರದೇಶಗಳಲ್ಲೂ ಇವರು ಕಾರ್ಯನಿರ್ವಹಿಸಿದ್ದಾರೆ.
2007ರಲ್ಲಿ ಮೀರತ್‌ನಲ್ಲಿ ರಾಡಾರ್ ವಿಭಾಗಕ್ಕೆ ವರ್ಗಾವಣೆಗೊಂಡರು. ಪಾಕಿಸ್ತಾನ ಗಡಿಗುಂಟ ಪ್ರದೇಶವಾದ ಅಲ್ಲಿ ಮೂರು ವರ್ಷಗಳ ಕಾಲ ಪಾಕ್ ಮೇಲೆ ಕಣ್ಗಾವಲಲ್ಲಿ ಕೆಲಸ ಮಾಡಿದರು. ರಾಜಸ್ತಾನ, ಪಂಜಾಬ್ ಗಡಿಭಾಗಗಳಲ್ಲೂ ಕಾರ್ಯನಿರ್ವಹಿಸಬೇಕಾಗುತ್ತಿತ್ತು.ನಂತರ ರಾಷ್ಟ್ರೀಯ ರೈಫಲ್ಸ್ ಯೋಧನಾಗಿ ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಎರಡೂವರೆ ವರ್ಷ ಕಾರ್ಯನಿರ್ವಹಿಸಿದರು. ಯಾವಾಗಲೂ ಪಾಕಿಸ್ತಾನದಿಂದ ಗ್ರೆನೇಡ್ ದಾಳಿ ನಡೆಯುತ್ತಿತ್ತು. ಅಲ್ಲಿರುವಾಗಲೇ ಇಫ್ತಾರ್ ಕೂಟಕ್ಕೆ ಪಾಕಿಸ್ತಾನ ಉಗ್ರರು ಆಗಮಿಸಿದ ಘಟನೆ ನಡೆದದ್ದು ಎಂದು ಅನುಭವ ಹೇಳುತ್ತಾರೆ ಅವರು.
ಸೈನಿಕರ ಮೇಲೆ ಸ್ಥಳೀಯರ ಆಕ್ರಮಣ!:ಕುಪ್ವಾರದಲ್ಲಿ ಗಡಿ ಕಾಯುತ್ತಿದ್ದಾಗ ಅಲ್ಲಿನ ಸ್ಥಳೀಯರು ಸೈನಿಕರ ಮೇಲೆ ರೇಗುತ್ತಿದ್ದರು. ಮಕ್ಕಳು ಕೂಡ ಸೈನಿಕರಿಗೆ ಕಲ್ಲು ಬಿಸಾಡುತ್ತಿದ್ದರು. ಪ್ರಥಮ ಬುಲೆಟ್ ಗುಂಡು ಬೀಳುವ ವರೆಗೆ ಸೈನಿಕರು ಪ್ರತ್ಯಾಕ್ರಮಣ ನಡೆಸುವಂತಿಲ್ಲ. ಅದು ಕೂಡ ಯಾರು ಗುಂಡೇಟು ಹಾಕುತ್ತಾನೆಯೇ ಆತನ ಮೇಲೆ ಮಾತ್ರ ಪ್ರತಿಯಾಗಿ ಗುಂಡು ಹಾರಾಟ ನಡೆಸಬೇಕು ಎಂಬ ನಿಯಮ ಇತ್ತು. ಇದರಿಂದಾಗಿ ಸ್ಥಳೀಯ ದೇಶ ವಿರೋಧಿಗಳು ಸೈನಿಕರನ್ನು ಕಂಡಾಗ ಅಟ್ಟಹಾಸದಿಂದ ಮೆರೆಯುತ್ತಿದ್ದರು ಎಂಬುದನ್ನು ಮೆಲುಕು ಹಾಕುತ್ತಾರೆ ನರೇಶ್ ಪೈ. 370ನೇ ವಿಧಿಯನ್ನು ಈಗ ತೆಗೆದು ಹಾಕಿದ ಕಾರಣ ಅಲ್ಲಿನ ಸ್ಥಳೀಯರು ಸ್ವಲ್ಪ ಬದಲಾದಂತೆ ಕಂಡುಬರುತ್ತಿದೆ. ಈಗ ಸೈನಿಕರ ಮೇಲೆ ಅಷ್ಟಾಗಿ ಆಕ್ರಮಣಗಳು ಆಗುತ್ತಿಲ್ಲ ಎನ್ನುತ್ತಾರೆ.
ನಂತರ ಪೃಥ್ವಿ ಕ್ಷಿಪಣಿ ಘಟಕಕ್ಕೆ ವರ್ಗಾವಣೆಗೊಳಿಸಲಾಯಿತು. ಕ್ಷಿಪಣಿ ಬಗ್ಗೆ ಆರು ತಿಂಗಳ ತರಬೇತಿ ಪಡೆದರು. ಒಡಿಶಾದಲ್ಲಿ ಕ್ಷಿಪಣಿ ಪರೀಕ್ಷೆಯಲ್ಲೂ ಇವರು ಪಾಲ್ಗೊಂಡಿದ್ದರು. ಈ ವೇಳೆ ಮನೆಯ ಸಂಪರ್ಕ ಇರಲಿಲ್ಲ. ತಿಂಗಳುಗಟ್ಟಲೆ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಅಲ್ಲದೆ ಇತರರಿಗೆ ತರಬೇತಿಯನ್ನೂ ನೀಡಬೇಕಾಗುತ್ತಿತ್ತು.ಮಣ್ಣಿನಡಿ ಸಿಲುಕಿ ಬಚಾವ್ ಆದದ್ದು...:
ಅಲ್ಲಿಂದ ಕ್ಷಿಪಣಿ ಕಮಾಂಡಿಂಗ್ ಕೇಂದ್ರಕ್ಕೆ ವರ್ಗಾಯಿಸಲಾಯಿತು. ಬಳಿಕ ಅಸ್ಸಾಂನ ಮದ್ದುಗುಂಡು ಸಂಗ್ರಹ ಕೇಂದ್ರದಲ್ಲೂ ಕೆಲಸ ಮಾಡಿದ್ದೆ. ಅರುಣಾಚಲ ಪ್ರದೇಶದಲ್ಲೂ ಕಾರ್ಯನಿರ್ವಹಿಸಿದ ಅನುಭವ ಪಡೆದರು. ಅರುಣಾಚಲ ಪ್ರದೇಶದಲ್ಲಿ ರಾತ್ರಿ ಸಂಚರಿಸುತ್ತಿದ್ದಾಗ ಮಳೆಗೆ ಏಕಾಏಕಿ ಬೆಟ್ಟ ಕುಸಿದು ನಮ್ಮ ಬೆಟಾಲಿಯನ್ ಅಪಾಯಕ್ಕೆ ಸಿಲುಕಿತ್ತು. ನಾಲ್ಕು ಗಂಟೆಗಳ ಬಳಿಕ ಸೇನೆಯ ರಕ್ಷಣಾ ಪಡೆಗಳು ಮಣ್ಣಿನಡಿ ಸಿಲುಕಿದ ನಮ್ಮನ್ನು ಅಪಾಯದಿಂದ ಪಾರು ಮಾಡಿದರು ಎನ್ನುತ್ತಾರೆ ನರೇಶ್ ಪೈ.------------------ಸೇನೆಯಲ್ಲಿ 18 ವರ್ಷದ ಸೇವೆ
ಮಂಗಳೂರು ಮೂಲದ ನರೇಶ್ ಪೈ ಅವರು 2003ರಲ್ಲಿ ಭಾರತೀಯ ಭೂಸೇನೆಗೆ ಸೇರ್ಪಡೆಯಾಗಿ ತಾಂತ್ರಿಕ ವಿಭಾಗದಲ್ಲಿ ಸುಮಾರು 18 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದು, ಕ್ಷಿಪಣಿ ವಿಭಾಗದಲ್ಲೂ ಕೆಲಸ ಮಾಡಿದ ಅನುಭವಿ. ಜಮ್ಮು ಕಾಶ್ಮೀರದ ವಿವಿಧ ಕಡೆ, ಮೀರತ್ ರಾಡಾರ್ ಸೆಕ್ಷನ್, ಅಸ್ಸಾಂಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 2022ರಲ್ಲಿ ಸ್ವಯಂ ನಿವೃತ್ತರಾದರು.ಇವರ ತಂದೆ ಗಂಗೊಳ್ಳಿಯ ಉಮೇಶ್ ಪೈ, ತಾಯಿ ಜ್ಯೋತಿ ಪೈ. ಮಂಗಳೂರಿನ ಕೆಪಿಟಿಯಲ್ಲಿ ಎಲೆಕ್ಟ್ರಾನಿಕ್ ಡಿಪ್ಲೊಮಾ ಕಲಿಯುತ್ತಿದ್ದಾಗ ಎರಡು ವರ್ಷದಲ್ಲೇ ಸ್ನೇಹಿತರೊಂದಿಗೆ ಭೂಸೇನೆ ಸೇರ್ಪಡೆಗೆ ಅರ್ಜಿ ಹಾಕಿದ್ದರು. ಪರೀಕ್ಷೆ ಬಳಿಕ ಸ್ನೇಹಿತರ ಬದಲು ಇವರೇ ಆಯ್ಕೆಯಾಗಿದ್ದರು. ಒಬ್ಬನೇ ಪುತ್ರನಾದ ಕಾರಣ ಮನೆಯವರು ಸೇನೆಗೆ ಸೇರುವುದು ಬೇಡ ಎನ್ನುವ ಭೀತಿಯಲ್ಲಿ ತಿಳಿಸಿರಲಿಲ್ಲ. ಸೇನಾ ತರಬೇತಿಗೆ ತೆರಳುವ ವೇಳೆ ರೈಲು ನಿಲ್ದಾಣದಿಂದಲೇ ಕರೆ ಮಾಡಿ ತಿಳಿಸಿದ್ದರು. ಸೇನೆಯಲ್ಲಿದ್ದಾಗ ಪಿಯುಸಿ, ದೂರಶಿಕ್ಷಣದಲ್ಲಿ ಪದವಿ ತೇರ್ಗಡೆಯಾದರು. ಸಿಕಂದರಾಬಾದ್‌ನಲ್ಲಿ ಆರ್ಮಿ ಟೆಕ್ನಿಕಲ್ ಡಿಪ್ಲೊಮಾ ಉತ್ತೀರ್ಣರಾದರು.
ನರೇಶ್ ಪೈ ಅವರು ಮಂಗಳೂರಿನ ಮಾಜಿ ಸೈನಿಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು. ಬಿಜೆಪಿ ಮಾಜಿ ಸೈನಿಕರ ಸಂಘ ಪ್ರಕೋಷ್ಠದ ಸಹ ಸಂಚಾಲಕ. ಪ್ರಸ್ತುತ ಶಕ್ತಿ ಶಿಕ್ಷಣ ಸಂಸ್ಥೆಯ ಭದ್ರತಾ ಅಧಿಕಾರಿ. ಪತ್ನಿ, ಇಬ್ಬರು ಮಕ್ಕಳೊಂದಿಗೆ ಮಂಗಳೂರಿನ ಕೊಂಚಾಡಿಯಲ್ಲಿ ವಾಸವಿದ್ದಾರೆ.