ಸಂಭ್ರಮದಿಂದ ನಡೆದ ಪಾಲಹಳ್ಳಿ ಶಂಭುಲಿಂಗೇಶ್ವರಸ್ವಾಮಿ ಉತ್ಸವ

| Published : Nov 19 2025, 12:30 AM IST

ಸಾರಾಂಶ

ರಾತ್ರಿಯಿಡಿ ಗ್ರಾಮದ ಪೇಟೆ ಬೀದಿ, ಕರಿಮಂಠಿ ಬೀದಿ, ಹಳ್ಳದಕೇರಿ, ಕುಂಬಾರಗೇರಿ, ಕ್ರಿಶ್ಚಿಯನ್ ಬೀದಿ, ಕಳ್ಳಿಕೊಪ್ಪಲು ಬೀದಿಗಳಲ್ಲಿ ಉತ್ಸವ ಮೆರವಣಿಗೆ ಜರುಗಿತು. ಮನೆ ಬಾಗಿಲಿಗೆ ಉತ್ಸವ ಬಂದ ವೇಳೆ ಭಕ್ತರು ಹಣ್ಣು, ಕಾಯಿ ಒಡೆದು, ಆರತಿ ಎತ್ತಿ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಪಾಲಹಳ್ಳಿ ಶಂಭುಲಿಂಗೇಶ್ವರಸ್ವಾಮಿ ಉತ್ಸವ ಸಡಗರ, ಸಂಭ್ರಮದಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಪಟ್ಟಣದ ಪಶ್ಚಿಮವಾನಿ ಬಳಿಯ ಕಾವೇರಿ ನದಿಯಿಂದ ಉತ್ಸವ ಮೂರ್ತಿಯನ್ನು ಮಡಿ ಮಾಡಿ ನಂತರ ಮಂಗಳವಾದ್ಯ ಸಮೇತ ಗ್ರಾಮದ ಶ್ರೀಶಂಭುಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಈಡುಗಾಯಿ ಹೊಡೆದು ಭಕ್ತರು ಪೂಜೆ ಸಲ್ಲಿಸಿದರು.

ರಾತ್ರಿಯಿಡಿ ಗ್ರಾಮದ ಪೇಟೆ ಬೀದಿ, ಕರಿಮಂಠಿ ಬೀದಿ, ಹಳ್ಳದಕೇರಿ, ಕುಂಬಾರಗೇರಿ, ಕ್ರಿಶ್ಚಿಯನ್ ಬೀದಿ, ಕಳ್ಳಿಕೊಪ್ಪಲು ಬೀದಿಗಳಲ್ಲಿ ಉತ್ಸವ ಮೆರವಣಿಗೆ ಜರುಗಿತು. ಮನೆ ಬಾಗಿಲಿಗೆ ಉತ್ಸವ ಬಂದ ವೇಳೆ ಭಕ್ತರು ಹಣ್ಣು, ಕಾಯಿ ಒಡೆದು, ಆರತಿ ಎತ್ತಿ ಪೂಜೆ ಸಲ್ಲಿಸಿದರು.

ಮುಂಜಾನೆ ಶ್ರೀಶಂಭುಲಿಂಗೇಶ್ವರಸ್ವಾಮಿ ದೇವಾಲಯಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ಉತ್ಸವಕ್ಕೆ ದೇವಾಲಯದ ಅರ್ಚಕರು ಅಗ್ರ ಪೂಜೆ ಸಲ್ಲಿಸಿದರು.

ಕೊಂಡೋತ್ಸವ:

ನಂತರ ಮಂಗಳವಾರ ಮುಂಜಾನೆ ದೇಗುಲದ ಮುಂದೆ ಸಿದ್ಧಪಡಿಸಿದ್ದ ಬೆಂಕಿ ಕೊಂಡವನ್ನು ದೇವರ ಗುಡ್ಡಪ್ಪ ಸೇರಿದಂತೆ ಹರಿಕೆ ಹೊತ್ತ ಭಕ್ತರು ಸೇರಿದಂತೆ ಗ್ರಾಮಸ್ಥರು ಕೊಂಡಹಾಯ್ದರು. ಕೊಂಡ ಹಾಯುವ ವೇಳೆ ನೆರೆದಿದ್ದವರು ಉಘೇ ಶಂಭುಲಿಂಗಪ್ಪ ಎಂಬ ಘೋಷಣೆ ಕೂಗಿ ದೇವರ ಪ್ರಾರ್ಥನೆ ಸಲ್ಲಿಸಿದರು.

ಪಾಲಹಳ್ಳಿಯಲ್ಲಿ ಸವರ್ಣೀಯರು ಹೆಚ್ಚಾಗಿದ್ದು, ಶಂಭುಲಿಂಗೇಶ್ವರ ದೇವಾಲಯದಲ್ಲಿ ದಲಿತ ಜನಾಂಗದ ವ್ಯಕ್ತಿ ಪ್ರಧಾನ ಅರ್ಚಕರಾಗಿ ಪೂಜೆ ಸಲ್ಲಿಸುವುದು ಹಿಂದಿನಿಂದ ಬಂದ ಪದ್ದತಿ ಈ ಗ್ರಾಮದಲ್ಲಿ ವಿಶೇಷವಾಗಿದೆ.

ಕಾರೆಮೆಳೆ ಸಿಂಗಮ್ಮ ಜಾತ್ರೆಗೆ ಕಾಡಿದ ಕಗ್ಗತ್ತಲು

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹೋಬಳಿಯ ಪ್ರಸಿದ್ಧ ಕಾರೆಮೆಳೆ ಸಿಂಗಮ್ಮನ ಜಾತ್ರೆಗೆ ವಿದ್ಯುತ್ ಇಲ್ಲದೆ ಇಡೀ ದಿನ ಕಗ್ಗತ್ತಲಿನಲ್ಲಿ ಭಕ್ತರು ಕಾಯುವಂತಾಯಿತು.

ಕಾರ್ತಿಕ ಮಾಸ ಮುಗಿದ ಮರು ದಿನ ಊಗಿನಹಳ್ಳಿಯ ಹೊರಭಾಗದಲ್ಲಿನ ಕಾರೆಮೆಳೆ ಸಿಂಗಮ್ಮ ಗುಡಿ ಬಳಿ ಜಾತ್ರೆ ನಡೆದು ದೇಗುಲದಲ್ಲಿ ಕತ್ತಲೆ ಆವರಿಸಿ ದೇವರ ಮೂರ್ತಿ ಕಾಣದೆ ಭಕ್ತರು ದೇವರ ದರ್ಶನ ಪಡೆಯಲು ಪರದಾಡಿದರು.

ಬೋರೆ ದೇವಿಯಮ್ಮ ಎಂದು ಕರೆಯುವ ಕಾರೆಮೆಳೆ ಸಿಂಗಮ್ಮನ ಜಾತ್ರೆಗೆ ಹೋಬಳಿಯಲ್ಲದೆ ತಾಲೂಕಿನ ವಿವಿಧ ಮೂಲೆಗಳಿಂದ ಸಾವಿರಾರು ಮಂದಿ ಭಾಗವಹಿಸಿದ್ದರು.

ಜಾನುವಾರುಗಳ ಜಾತ್ರೆ ಎಂದೇ ಪ್ರತೀತಿಯಿರುವ ಜಾತ್ರೆಗೆ ರೈತಾಪಿ ಜನತೆ ತಮ್ಮ ಜಾನುವಾರು, ಕುರಿಗಳನ್ನು ತಂದು ದೇವಿಯ ಗುಡಿ ಸುತ್ತ ಪ್ರದಕ್ಷಿಣೆ ಹಾಕಿಸಿದರು. ಜಾನುವಾರುಗಳಿಗೆ ಚಕ್ಕುಲಿ, ಕೋಡಂಬಳೆ, ಕಜ್ಜಾಯದಂತಹ ತಿನಿಸುಗಳನ್ನು ಕೊರಳಿಗೆ ಹಾಕಿ ರೋಗ ರುಜಿನ ಬಾರದಂತೆ ಸಿಂಗಮ್ಮದೇವಿಯಲ್ಲಿ ಪ್ರಾರ್ಥಿಸಿದರು.

ಪ್ರತಿ ವರ್ಷದಂತೆ ದೇವಿಯ ಗುಡಿ ಮುಂದೆ ಗುಮಚಿಕಟ್ಟೆಯ ಬಳಿ ಕೋಳಿ ಬಲಿ ಯಾವುದೇ ಅಡೆತಡೆ ಇಲ್ಲದೆ ನಡೆಯಿತು.