ಸಾರಾಂಶ
ಶಿರಸಿ: ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಪ್ರಾಧಿಕಾರ ರಚನೆ ಮಾಡಿ ಅಧಿಕೃತ ಚಾಲನೆ ನೀಡಿದ್ದು, ಇದು ಅಪಪ್ರಚಾರ ಮಾಡುವವರಿಗೆ ಸ್ಪಷ್ಟ ಸಂದೇಶ ನೀಡಿದಂತಾಗಿದೆ. ಕೇವಲ ಮತಕ್ಕಾಗಿ ಅಲ್ಲ. ಬಡವರ ಅನುಕೂಲಕ್ಕಾಗಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪ್ರಾಧಿಕಾರ ರಚನೆ ಮಾಡಿ ಮಾರ್ಚ್ ತಿಂಗಳಿನಲ್ಲಿ ಆದೇಶ ಮಾಡಿತ್ತು. ನಂತರ ಲೋಕಸಭಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಪ್ರಾಧಿಕಾರದ ಕಾರ್ಯವ್ಯಾಪ್ತಿಯನ್ನು ನಿಗದಿ ಮಾಡಿ ಅನುಷ್ಠಾನ ಮಾಡಲು ವಿಳಂಬವಾಗಿತ್ತು. ಈಗ ರಾಜ್ಯ ಸರ್ಕಾರ ಗ್ಯಾರಂಟಿ ಪ್ರಾಧಿಕಾರಕ್ಕೆ ಕಚೇರಿ ಮತ್ತು ಅವರ ಕಾರ್ಯವ್ಯಾಪ್ತಿಯ ಕುರಿತು ತಿಳಿಸಿದೆ. ಗ್ಯಾರಂಟಿ ಯೋಜನೆಯಿಂದ ಪ್ರತಿ ಬಡ ಕುಟುಂಬಕ್ಕೆ ಪ್ರತಿ ತಿಂಗಳ ₹6- 7 ಸಾವಿರ ಉಳಿತಾಯವಾಗುತ್ತಿರುವುದರಿಂದ ಅವರಲ್ಲಿ ಖರೀದಿಸುವ ಸಾಮರ್ಥ್ಯ ವೃದ್ಧಿಯಾಗುತ್ತಿರುವುದರ ಜತೆಗೆ ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದೆ ಎಂದರು.
ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಕಚೇರಿ ಆರಂಭಗೊಂಡಿದೆ. ತಾಲೂಕಾಧ್ಯಕ್ಷರಿಗೆ ಆಯಾ ತಾಲೂಕು ಪಂಚಾಯಿತಿಯಲ್ಲಿ ಕಚೇರಿ ಆರಂಭಿಸಲಾಗಿದೆ. ಆ. 15 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಲಿದ್ದು, ಕಾರವಾರ ಶಾಸಕ ಸತೀಶ ಸೈಲ್ ಹಾಗೂ ಶಾಸಕರು ಹಾಗೂ ಮಾಜಿ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಪ್ರಾಧಿಕಾರದ ಸಿದ್ದಾಪುರ ತಾಲೂಕಾಧ್ಯಕ್ಷ ಕೆ.ಜಿ. ನಾಗರಾಜ, ಯಲ್ಲಾಪುರ ಅಧ್ಯಕ್ಷ ಉಲ್ಲಾಸ ಶಾನಭಾಗ, ಶಿರಸಿ ತಾಲೂಕಾಧ್ಯಕ್ಷೆ ಸುಮಾ ಉಗ್ರಾಣಕರ, ಮುಂಡಗೋಡ ತಾಲೂಕಾಧ್ಯಕ್ಷ ರಾಜಶೇಖರ ಹಿರೇಮಠ, ಪ್ರಮುಖರಾದ ರಾಘು ಶೆಟ್ಟಿ, ಶ್ರೀಧರ ನಾಯ್ಕ ಮತ್ತಿತರರು ಇದ್ದರು.
ಗ್ಯಾರಂಟಿ ಅದಾಲತ್: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಒಂದು ವರ್ಷ ಅವಧಿಯೊಳಗಡೆ ಅನುಷ್ಠಾನ ಮಾಡಲಾಗಿದೆ. ಫಲಾನುಭವಿಗಳ ತೊಂದರೆ ಬಗೆಹರಿಸಲು ಪ್ರತಿ ತಾಲೂಕಿನಲ್ಲಿ ಗ್ಯಾರಂಟಿ ಅದಾಲತ್ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ತಿಳಿಸಿದರು.