15ರಂದು ಬ್ಯಾಡಗಿ ಮುಖ್ಯರಸ್ತೆಯಲ್ಲಿ ತಗ್ಗು ನಿರ್ಮಾಣ: ಹೋರಾಟ ಸಮಿತಿ ಎಚ್ಚರಿಕೆ

| Published : Aug 09 2024, 12:55 AM IST

ಸಾರಾಂಶ

ಬ್ಯಾಡಗಿ ಮುಖ್ಯರಸ್ತೆ ಅಗಲೀಕರಣಕ್ಕಾಗಿ ಶಾಸಕರು ನೀಡಿದ್ದ ಗಡುವು ಆ. 15ರಂದು ಮುಕ್ತಾಯವಾಗಲಿದ್ದು, ಅಂದಿನಿಂದಲೇ ಮುಖ್ಯರಸ್ತೆಯಲ್ಲಿ ಬೃಹತ್‌ ತಗ್ಗುಗಳನ್ನು ತೆಗೆದು ಶಾಶ್ವತವಾಗಿ ಸ್ಥಗಿತಗೊಳಿಸಲಿದ್ದೇವೆ ಎಂದು ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಎಚ್ಚರಿಕೆ ನೀಡಿದ್ದಾರೆ.

ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣಕ್ಕಾಗಿ ಶಾಸಕರು ನೀಡಿದ್ದ ಗಡುವು ಆ. 15ರಂದು ಮುಕ್ತಾಯವಾಗಲಿದ್ದು, ಅಂದಿನಿಂದಲೇ ಮುಖ್ಯರಸ್ತೆಯಲ್ಲಿ ಬೃಹತ್‌ ತಗ್ಗುಗಳನ್ನು ತೆಗೆದು ಶಾಶ್ವತವಾಗಿ ಸ್ಥಗಿತಗೊಳಿಸಲಿದ್ದೇವೆ ಎಂದು ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 6 ತಿಂಗಳು ಹಿಂದೆಯೇ ಗಡುವು ಪಡೆದರೂ ಪಿಡಬ್ಲೂಡಿ ಅಧಿಕಾರಿಗಳು ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಹೀಗಾಗಿ ಅಗಲೀಕರಣ ವಿಷಯದಲ್ಲಿ ನಾವಿಟ್ಟಿದ್ದ ಭರವಸೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಳ್ಳು ನೀರು ಬಿಟ್ಟಿದ್ದಾರೆ. ಈ ವಿಷಯವನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ. ಅಧಿಕಾರಿಗಳಿಗೆ ಬಿಸಿಮುಟ್ಟಿಸದೇ ಬಿಡುವುದಿಲ್ಲ ಎಂದರು.

15 ವರ್ಷಗಳಿಂದ ಮುಖ್ಯರಸ್ತೆ ಅಗಲೀಕರಣ ಕೆಲಸ ಮರೀಚಿಕೆಯಾಗಿ ಉಳಿದಿದೆ. ಪಟ್ಟಣ ಶಾಪಗ್ರಸ್ತವಾಗಿದೆ. ಸುಸಜ್ಜಿತ ರಸ್ತೆಯಿಲ್ಲದೇ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಮುಖ್ಯರಸ್ತೆಯಲ್ಲಿ ಓಡಾಡಿದವರು ಹಿಡಿಶಾಪ ಹಾಕದೇ ಹೋಗಲು ಸಾಧ್ಯವಿಲ್ಲ. ಜನರ ಭರವಸೆ ಕಳೆದುಕೊಂಡ ಮೇಲೆ ಅಧಿಕಾರಿಗಳು ಇಲ್ಲಿ ಮುಂದುವರಿಯಲು ನೈತಿಕ ಹಕ್ಕು ಕಳೆದುಕೊಂಡಿದ್ದು, ಇಲ್ಲಿಂದ ನಿರ್ಗಮಿಸುವಂತೆ ಆಗ್ರಹಿಸಿದರು.

ಕೋರ್ಟ್‌ ತಡೆಯಾಜ್ಞೆ ಇಲ್ಲ: ಎಂ.ಎಲ್. ಕಿರಣಕುಮಾರ ಮಾತನಾಡಿ, ಮಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಯಾವುದೇ ತಡೆಯಾಜ್ಞೆಗಳಿಲ್ಲ, ಅಗಲೀಕರಣ ವಿಷಯದಲ್ಲಿ ಸರಿಯಾದ ದಾಖಲೆಗಳನ್ನು ನೀಡದೆ ಪಿಡಬ್ಲೂಡಿ ಅಧಿಕಾರಿಗಳು ಪದೇ ಪದೇ ಅಗಲೀಕರಣ ಹಿನ್ನಡೆಗೆ ಕಾರಣವಾಗುತ್ತಿದ್ದಾರೆ. ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಒಂದು ವರ್ಷದ ಒಳಗೆ ಅಂತಿಮ ಅಧಿಸೂಚನೆ ಹೊರಡಿಸಬೇಕು. ಆದರೆ ಪಿಡಬ್ಲೂಡಿ ಅಧಿಕಾರಿಗಳು ಈ ಕೆಲಸವನ್ನು ಮಾಡದೇ 7 ತಿಂಗಳು ಸುಮ್ಮನೇ ಕಾಲಹರಣ ಮಾಡಿದ್ದಾರೆ. ಅಗಲೀಕರಣದ ವಿಷಯದಲ್ಲಿ ಮತ್ತೆ ಹಾದಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಎಇಇ ವರ್ಗಾಯಿಸಿ: ಪಾಂಡುರಂಗ ಸುತಾರ ಮಾತನಾಡಿ, ಪಿಡಬ್ಲೂಡಿ ಎಇಇ ಉಮೇಶ ನಾಯಕ್ ಅಗಲೀಕರಣ ಕುರಿತಂತೆ ಯಾವುದೇ ಸಾಮಾನ್ಯ ಜ್ಞಾನ ಇಲ್ಲದವರಂತೆ ವರ್ತನೆ ಮಾಡುತ್ತಿದ್ದಾರೆ. ಅಗಲೀಕರಣ ಕುರಿತಾದ ಯಾವುದೇ ಪ್ರಕ್ರಿಯೆ ಇಲ್ಲಿಯವರೆಗೂ ಸರಿಯಾಗಿ ಮಾಡದೇ ಜನರ ಹಾಗೂ ಹೋರಾಟಗಾರರ ದಾರಿ ತಪ್ಪಿಸುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ಪಟ್ಟಣದ ಅಭಿವೃದ್ಧಿ ಅಸಾಧ್ಯ. ಕೂಡಲೇ ಇಲ್ಲಿಂದ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.

ಆ. 15ರಂದು ಎರಡೂ ಕಡೆಗಳಲ್ಲಿ ತಗ್ಗು: 15 ವರ್ಷಗಳಿಂದ ಎಲ್ಲ ರೀತಿಯ ಹೋರಾಟ ಮಾಡಿ, ಮನವಿ ಸಲ್ಲಿಸಿದರೂ ಅಗಲೀಕರಣ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ. ಇನ್ನು ಕಾಲವಕಾಶ ನೀಡುವ ಪ್ರಶ್ನೆ ಇಲ್ಲ. ಆ. 15ರಂದು ಮುಖ್ಯರಸ್ತೆಯ ಎರಡು ಕಡೆಗಳಲ್ಲಿ ದೊಡ್ಡ ಪ್ರಮಾಣದ ತಗ್ಗುಗಳನ್ನು ಅಗೆದು ಶಾಶ್ವತವಾಗಿ ರಸ್ತೆ ಬಂದ ಮಾಡಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಅಗಲೀಕರಣ ಹೋರಾಟ ಸಮಿತಿ ಸದಸ್ಯೆ ಫರೀದಾಬಾನು ನದಿಮುಲ್ಲಾ ಹೇಳಿದರು.