ಪಂಚಾಚಾರ್ಯರು ಶರಣ ಧರ್ಮದಲ್ಲಿ ಮಧ್ಯಪ್ರವೇಶಿಸಬಾರದು: ಮಹಾದೇವಪ್ಪ

| Published : Mar 15 2025, 01:03 AM IST

ಪಂಚಾಚಾರ್ಯರು ಶರಣ ಧರ್ಮದಲ್ಲಿ ಮಧ್ಯಪ್ರವೇಶಿಸಬಾರದು: ಮಹಾದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತಾವು ಸ್ವರ್ಗದಿಂದ ನೇರವಾಗಿ ಭೂಮಿಗೆ ಇಳಿದು ಬಂದವರೆಂದು ಹೇಳಿಕೊಳ್ಳುವ ಈ ಪಂಚಾಚಾರ್ಯರು ಲಿಂಗಾಯತ ಧರ್ಮದಲ್ಲಿ ಹಸ್ತಕ್ಷೇಪ ಮಾಡುವುದನ್ನು ಮತ್ತು ಅದನ್ನು ವಿರೂಪಗೊಳಿಸುವ ಕೆಲಸ ಮಾಡಬಾರದು. ಇದನ್ನು ಲಿಂಗಾಯತರು ಸಹಿಸುವುದಿಲ್ಲ. ಪಂಚಾಚಾರ್ಯರು ಶರಣ ತತ್ವಗಳನ್ನು ವಿರೂಪಗೊಳಿಸುವುದು, ತಪ್ಪಾಗಿ ಅರ್ಥೈಸುವುದು ಮತ್ತು ಶರಣ ಧರ್ಮದಲ್ಲಿ ಮಧ್ಯ ಪ್ರವೇಶಿಸುವುದನ್ನು ನಿಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪಂಚಾಚಾರ್ಯರು ಶರಣ ತತ್ವಗಳನ್ನು ವಿರೂಪಗೊಳಿಸುವುದು, ತಪ್ಪಾಗಿ ಅರ್ಥೈಸುವುದು ಮತ್ತು ಶರಣ ಧರ್ಮದಲ್ಲಿ ಮಧ್ಯ ಪ್ರವೇಶಿಸುವುದನ್ನು ನಿಲ್ಲಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವಪ್ಪ ತಾಕೀತು ಮಾಡಿದರು.

ತಾವು ಸ್ವರ್ಗದಿಂದ ನೇರವಾಗಿ ಭೂಮಿಗೆ ಇಳಿದು ಬಂದವರೆಂದು ಹೇಳಿಕೊಳ್ಳುವ ಈ ಪಂಚಾಚಾರ್ಯರು ಲಿಂಗಾಯತ ಧರ್ಮದಲ್ಲಿ ಹಸ್ತಕ್ಷೇಪ ಮಾಡುವುದನ್ನು ಮತ್ತು ಅದನ್ನು ವಿರೂಪಗೊಳಿಸುವ ಕೆಲಸ ಮಾಡಬಾರದು. ಇದನ್ನು ಲಿಂಗಾಯತರು ಸಹಿಸುವುದಿಲ್ಲ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಂಚಾಚಾರ್ಯರು ಮತ್ತು ಅವರ ಅನುಯಾಯಿಗಳು ವೈದಿಕ ಧರ್ಮದ ಎಲ್ಲಾ ನಂಬಿಕೆಯನ್ನೂ ನಂಬಲು ಮತ್ತು ಆಚರಿಸಲು ಸ್ವತಂತ್ರರು. ಯಾವುದೇ ವೈದಿಕ ಗ್ರಂಥ ಓದಲು, ಪ್ರಸ್ತಾಪಿಸಲು ಅವರು ಸಂಪೂರ್ಣ ಅಧಿಕಾರ ಹೊಂದಿದ್ದಾರೆ. ಆದರೆ, ಶರಣ ತತ್ವ ವಿರೂಪಗೊಳಿಸುವುದು, ತಪ್ಪಾಗಿ ಅರ್ಥೈಸುವುದು ಹಾಗೂ ಶರಣ ಧರ್ಮದಲ್ಲಿ ಮಧ್ಯ ಪ್ರವೇಸಿಸುವುದನ್ನು ನಿಲ್ಲಿಸಬೇಕು ಎಂದರು.

ವೀರಶೈವರ ಐವರು ಪಂಚಾಚಾರ್ಯರಲ್ಲಿ ರಮಭಾಪುರಿ ಶ್ರೀಗಳು ಮತ್ತು ಕೇದಾರ ಶ್ರೀಗಳು ಒಂದು ಬಣವನ್ನು ಕಟ್ಟಿಕೊಂಡಿದ್ದು, ಉಳಿದ ಮೂವರು ಈ ಬಣಕ್ಕೆ ವಿರುದ್ಧವಾಗಿದ್ದಾರೆ. ರಂಭಾಪುರಿ ಶ್ರೀಗಳು ಮತ್ತು ಕೇದಾರ ಶ್ರೀಗಳು ಇತ್ತೀಚೆಗೆ ಲಿಂಗಸಗೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಮಸ್ತ ಲಿಂಗಾಯತ ಸಂಘಟನೆಗಳು ಒಂದಾಗಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೇಳುತ್ತಿರುವುದು ತಪ್ಪು ಎಂದು ಟೀಕಿಸಿದ್ದಾರೆ. ಎರಡನೇ ಗುಂಪಿಗೆ ಸೇರಿದ ಶ್ರೀಶೈಲ, ಕಾಶಿ ಮತ್ತು ಉಜ್ಜಯಿನಿ ಮಠಗಳ ಶ್ರೀಗಳು ಲಿಂಗಾಯತ ಧರ್ಮದ ಬೇಡಿಕೆಯನ್ನು ವಿರೋಧಿಸುತ್ತಾ ತಮ್ಮ ವೀರಶೈವ ಧರ್ಮದ ಶ್ರೇಷ್ಠತೆಯ ಬಗ್ಗೆ ಹೇಳಿಕೊಂಡಿದ್ದಾರೆ ಎಂದರು.

ಬಸವಣ್ಣನ ಅವರನ್ನು ಅನುಸರಿಸುವ ಬಹುಪಾಲು ಲಿಂಗಾಯತರು ಪಂಚಾಚಾರ್ಯರನ್ನು ತೊರೆದಿದ್ದಾರೆ. ವಿಶೇಷವಾಗಿ ಕಳೆದ ಹತ್ತು ವರ್ಷಗಳಲ್ಲಿ ಅಂತವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಆದ್ದರಿಂದ ಪಂಚಾಚಾರ್ಯರ ಜೀವನೋಪಯಕ್ಕೆ ತೊಂದರೆಯಾಗಿದೆ. ಅವರ ಕಟ್ಟು ಕತೆ ಪ್ರಶ್ನಿಸಲಾಗುತ್ತಿದೆ. ಹೀಗಾಗಿ ಅವರಲ್ಲಿ ಹತಾಶ ಭಾವನೆ, ಸೇಡು ತೀರಿಸಿಕೊಳ್ಳುವ ಮನೋಭಾವ ಬೆಳೆಯುತ್ತಿರುವುದನ್ನು ಅವರ ಹೇಳಿಕೆಗಳೇ ಬಹಿರಂಗಡಿಸಿವೆ ಎಂದು ದೂರಿದರು.

2002ರಲ್ಲಿ ಅಂದಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರಿಗೆ ಎಲ್ಲಾ ಐವರು ಪಂಚಾಚಾರ್ಯರು ಪತ್ರ ಬರೆದು ಎಲ್ಲಾ ಜಂಗಮರನ್ನು ಪ.ಪಂಗಡದ ಬೇಡ ಜಂಗಮ ಗುಂಪಿಗೆ ಸೇರಿಸಿ ಎಂದು ವಿನಂತಿಸಿದ್ದರು. ಪಂಚಾಚಾರ್ಯರೆಲ್ಲ ಕರ್ನಾಟಕದವರೇ ಆಗಿದ್ದು, ಅವರೆಲ್ಲರೂ ಜಾತಿಯಿಂದ ಜಂಗಮರಾಗಿದ್ದಾರೆ. ಆದರೆ, ಸೋಜಿಗವೆನ್ನುವಂತೆ ಈಗ ಪಂಚಾಚಾರ್ಯರು ಮೀಸಲಾತಿಯ ಹೋರಾಟವನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಪದಾಧಿಕಾರಿಗಳಾದ ಜಯಶಂಕರ್, ಗಂಗಾಧರ ಸ್ವಾಮಿ, ನಂಜುಂಡಸ್ವಾಮಿ ಹಾಗೂ ಎಂ. ಶಿವಲಿಂಗಪ್ಪ ಇದ್ದರು.