ಗ್ರಾಮ ಪಂಚಾಯಿತಿ ಹಲವು ಸೇವೆಗಳಿಗೆ ಪಂಚಮಿತ್ರ ಪೋರ್ಟಲ್

| Published : Mar 07 2024, 01:45 AM IST

ಗ್ರಾಮ ಪಂಚಾಯಿತಿ ಹಲವು ಸೇವೆಗಳಿಗೆ ಪಂಚಮಿತ್ರ ಪೋರ್ಟಲ್
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು ಸೇವೆಗಳು ಒಂದೇ ವೇದಿಕೆಯಲ್ಲಿ ಲಭಿಸುವ ನೂತನ ಪಂಚಮಿತ್ರ ವೆಬ್ ಪೋರ್ಟಲ್ ಅನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಲೋಕಾರ್ಪಣೆಗೊಳಿಸಿದರು.

ಚಿತ್ರದುರ್ಗ: ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು ಸೇವೆಗಳು ಒಂದೇ ವೇದಿಕೆಯಲ್ಲಿ ಲಭಿಸುವ ನೂತನ ಪಂಚಮಿತ್ರ ವೆಬ್ ಪೋರ್ಟಲ್ ಅನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಲೋಕಾರ್ಪಣೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರು ತಮಗೆ ಅವಶ್ಯವಿರುವ ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು ವಿವರಗಳನ್ನು ಪಡೆಯಲು ಮತ್ತು ಗ್ರಾಮ ಪಂಚಾಯತಿಗಳ ಸೇವೆಗಳಿಗೆ ಅರ್ಜಿ ಸಲ್ಲಿಸಲು ಪಂಚಮಿತ್ರ ನೂತನ ಪೋರ್ಟಲ್ ಅತ್ಯಂತ ಜನಸ್ನೇಹಿಯಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಗ್ರಾಮೀಣ ಭಾಗದವರು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಹಲವು ಮಾಹಿತಿ ಮತ್ತು ವಿವರ ಪಡೆಯುವ ಸಲುವಾಗಿ ಹಲವಾರು ವೆಬ್ ಸೈಟ್ ಮತ್ತು ಪೋರ್ಟಲ್‌ಗಳಿಗೆ ಭೇಟಿ ನೀಡಬೇಕಾಗಿತ್ತು. ಅಲ್ಲದೇ, ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಎಲ್ಲಾ ಬಗೆಯ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಲು ಯಾವುದೇ ನಿರ್ದಿಷ್ಟವಾದ ವೆಬ್ ಸೈಟ್ ಅಥವಾ ಪೋರ್ಟಲ್ ಇದ್ದಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯಡಿ ಬರುವ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು ವಿವರಗಳನ್ನು ಪಡೆಯಲು, ದಾಖಲಿಸಲು, ಪಂಚಮಿತ್ರ ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಚುನಾಯಿತ ಪ್ರತಿನಿಧಿಗಳು, ಸಿಬ್ಬಂದಿ ವಿವರಗಳು, ಪೂರ್ಣಗೊಂಡ ಗ್ರಾಮ ಪಂಚಾಯಿತಿ ಸಭೆಗಳ ನಡಾವಳಿಗಳು, ಗ್ರಾಮ ಪಂಚಾಯತಿಗಳ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ, ಸೇವೆಗಳ ವಿವರಗಳು, ಸ್ವ ಸಹಾಯ ಗುಂಪಿನ ವಿವರಗಳು, ಗ್ರಾಮ ಪಂಚಾಯತಿಗಳ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು ಸೇರಿದಂತೆ ವಿವಿಧ ಮಾಹಿತಿಗಳು ಲಭ್ಯವಿದೆ. ಅಲ್ಲದೆ ಪೋರ್ಟಲ್ ಮೂಲಕ ಕ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ಪಡೆಯಬಹುದಾಗಿದೆ. ಅರ್ಜಿ ಯಾವ ಹಂತದಲ್ಲಿದೆ ಎಂಬುದ ಪರಿಶೀಲಿಸಬಹುದಾಗಿದೆ ಎಂದರು.

ಕಟ್ಟಡ ನಿರ್ಮಾಣ ಲೈಸೆನ್ಸ್, ಹೊಸ ನೀರು ಸರಬರಾಜು ಸಂಪರ್ಕ, ನೀರು ಸರಬರಾಜಿನ ಸಂಪರ್ಕ ಕಡಿತ, ಕುಡಿಯುವ ನೀರು, ಬೀದಿ ದೀಪ, ಗ್ರಾಮ ನೈರ್ಮಲ್ಯದ ನಿರ್ವಹಣೆ, ವ್ಯಾಪಾರ ಪರವಾನಗಿ, ಸ್ವಾಧೀನ ಪ್ರಮಾಣಪತ್ರ, ರಸ್ತೆ ಅಗೆವುದಾಕ್ಕಾಗಿ ಅನುಮತಿ, ಕೈಗಾರಿಕಾ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ನಿರಾಕ್ಷೇಪಣಾ ಪತ್ರ, ನರೇಗಾದಡಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ, ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು. ಹೊಸ ಅಥವಾ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ ನೀಡುವ ಎಲ್ಲ ವಿವರಗಳು ಲಭ್ಯವಿವೆ. ನಮೂನೆ 11ಎ, ನಮೂನೆ 11ಬಿ ಸೇರಿದಂತೆ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆಗಳ ದುರಸ್ತಿ, ನರೇಗಾ ಯೋಜನೆಗೆ ಮತ್ತು ಪಂಚಾಯಿತಿ ರಾಜ್ ವಿಷಯಗಳಿಗೆ ಸಂಬಂಧಿತ ಹಲವು 78 ಬಗೆಯ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಬಹುದಾಗಿದೆ ಎಂದರು.

ಉಪವಿಭಾಗಾಧಿಕಾರಿ ಕಾರ್ತಿಕ್, ಜಂಟಿಕೃಷಿ ನಿರ್ದೇಶಕ ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್ ಸೇರಿದಂತೆ ತಾಲೂಕುಗಳ ತಹಸಿಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.