ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಖ್ಯಾತ ಸಾಹಿತಿ ಪಂಜೆ ಮಂಗೇಶರಾಯರ ಬದುಕು ಎಲ್ಲರಿಗೂ ಆದರ್ಶವಾಗಬೇಕೆಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಮಡಿಕೇರಿ ನಗರ ಸಭಾ ಸದಸ್ಯ ಬಿ.ವೈ.ರಾಜೇಶ್ ಯಲ್ಲಪ್ಪ ಹೇಳಿದರು.ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಯೋಗದೊಂದಿಗೆ ಪ್ರೌಢಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಂಜೆ ಮಂಗೇಶರಾಯರ ಬದುಕು ಬರಹ ಕುರಿತು ವಿಚಾರ ಸಂಕಿರಣ ಹಾಗೂ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಮಂಗೇಶರಾಯರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅವರ ಕೊಡುಗೆ ಅಪಾರವಾದುದು. ಮಡಿಕೇರಿಯ ಪದವಿ ಪೂರ್ವ ಕಾಲೇಜಿನಲ್ಲೂ ಮುಖ್ಯೋಪಾಧ್ಯಾಯರಾಗಿ ಸೇವೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಅವರು ರಚಿಸಿರುವ ಹುತ್ತರಿ ಹಾಡು ಇಂದಿಗೂ ಪ್ರಸ್ತುತವಾಗಿದೆ. ಅವರ ಸರಳ ಜೀವನ ಆದರ್ಶಪ್ರಾಯವಾಗಿದೆ ಎಂದರು. ಸ್ನೇಹ ಸಿರಿ ಬಳಗದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಹೇಳಿದರು.ಪ್ರಾಸ್ತಾವಿಕ ನುಡಿಗಳೊಂದಿಗೆ ವಿಚಾರ ಮಂಡನೆ ಮಾಡಿದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಸ್.ಲೊಕೇಶ್ ಸಾಗರ್, ಈ ವರ್ಷ ಹಲವು ಸಂಭ್ರಮಗಳಿಗೆ ಸಾಕ್ಷಿಯಾಗಿದೆ. ಕರ್ನಾಟಕಕ್ಕೆ ಸುವರ್ಣ ಸಂಭ್ರಮ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ 200 ನೇ ವರ್ಷ, ಅದೇ ರೀತಿ ಪಂಜೆ ಮಂಗೇಶರಾಯರು ಜನಿಸಿ 150ನೇ ವರ್ಷವಾಗಿದೆ. ಇಂತಹ ಸುಸಂದರ್ಭದಲ್ಲಿ ಮಂಗೇಶರಾಯರು ಸೇರಿದಂತೆ ನಾಡಿಗಾಗಿ ಸೇವೆ ಸಲ್ಲಿಸಿದವರ ನೆನಪಿಸಿಕೊಳ್ಳುವ, ಅವರ ಬಗ್ಗೆ ಇಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ ಕನ್ನಡ ಸ್ನೇಹ ಸಿರಿ ಬಳಗದ ವತಿಯಿಂದ ಒಂದು ವರ್ಷದಲ್ಲಿ 50 ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನಿಟ್ಟುಕೊಂಡಿದ್ದು, ಇದೀಗ ಇಂದು 40ನೇ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜನಿಸಿದ ಮಂಗೇಶರಾಯರು ಮದ್ರಾಸಿನಲ್ಲಿ ಪದವಿ ಮುಗಿಸಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಮಡಿಕೇರಿಯ ಪ್ರೌಢಶಾಲೆಗೆ ನೇಮಕಗೊಳ್ಳುತ್ತಾರೆ. ಆ ಸಂದರ್ಭದಲ್ಲಿ ತೀರ ಸರಳತೆಯಿಂದಿದ್ದ ಅವರನ್ನು ಎಲ್ಲರೂ ತಾತ್ಸಾರದಿಂದ ಕಾಣುತ್ತಾರೆ. ಆದರೆ, ಮಂಗೇಶರಾಯರು ತಮ್ಮ ಬರಹ, ಸಾಹಿತ್ಯದ ಮೂಲಕವೇ ಉತ್ತರ ನೀಡುತ್ತಾ ಕೊಡಗಿನ ಪರಿಸರ, ಇಲ್ಲಿನ ಜನತೆಯ ಶೌರ್ಯದ ಬಗ್ಗೆ ಸಾಹಿತ್ಯ ರಚನೆ ಮಾಡಿ ಜನ ಮನ ಗೆಲ್ಲುತ್ತಾರೆ. ಕೊಡಗಿನಲ್ಲಿ ನೆಲೆಸಿದ್ದ ಸಾಹಿತಿಯೊಬ್ಬರು 1934 ರಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರೆಂದರೆ ನಾವು ಹೆಮ್ಮೆ ಪಡಬೇಕಾದ ವಿಷಯವೆಂದು ಹೇಳಿದರು.ಮಂಗೇಶರಾಯರು ಮುಖ್ಯೋಪಾಧ್ಯಾಯರಾಗಿದ್ದ ಈ ಪ.ಪೂ ಕಾಲೇಜಿನಲ್ಲಿ ಅವರ ಸ್ಮರಣೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶಾಲಾ ಆವರಣದಲ್ಲಿ ಮಂಗೇಶರಾಯರು ಹಾಗೂ ಪಿಯು ಕಾಲೇಜು ಪ್ರಾಂಶುಪಾಲರಾಗಿದ್ದ ಜಿ.ಟಿ.ನಾರಾಯಣ ರಾವ್ ಅವರ ಪುತ್ಥಳಿ ಅಥವಾ ಭಾವಚಿತ್ರ ಅಳವಡಿಸಬೇಕೆಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ನಗರಸಭಾ ಸದಸ್ಯರು ರಾಜೇಶ್ ಯಲ್ಲಪ್ಪ ಹಾಗೂ ಮಹೇಶ್ ಜೈನಿ ಅವರಲ್ಲಿ ಮನವಿ ಮಾಡಿದರು.
ಅತಿಥಿಗಳಾಗಿದ್ದ ನಗರಸಭಾ ಸದಸ್ಯ ಮಹೇಶ್ ಜೈನಿ ಮಾತನಾಡಿ, ಕನ್ನಡ ಸ್ನೇಹ ಸಿರಿ ಬಳಗ ಕನ್ನಡ ನಾಡು, ನುಡಿಗಾಗಿ ಸೇವೆ ಸಲ್ಲಿಸಿದವರ ನೆನಪು ಮಾಡಿಕೊಳ್ಳುವಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಪಂಜೆ ಮಂಗೇಶರಾಯರ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮವಾದುದುದಾಗಿದೆ. ಇನ್ನು ಮುಂದಕ್ಕೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.ಮತ್ತೋರ್ವ ಅತಿಥಿ ಶಕ್ತಿ ದಿನಪತ್ರಿಕೆ ಉಪ ಸಂಪಾದಕ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಹಲವು ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಸರ್ಕಾರಿ ಪ.ಪೂ. ಕಾಲೇಜು ಸಾಧಕರ ಮನೆಯಾಗಿದೆ. ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರೆಂದು ಹೇಳಿದರು. ವಿದ್ಯಾರ್ಥಿಗಳು ಕೇವಲ ಪಠ್ಯ ಮಾತ್ರವಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು, ಓದು, ಬರವಣಿಗೆ ಹವ್ಯಾಸಗಳನ್ನು ಬೆಳೆಸಿಕೊಂಡಲ್ಲಿ ಜ್ನಾನರ್ಜನೆಯೊಂದಿಗೆ ಭವಿಷ್ಯದಲ್ಲಿ ಅಂಕ ಗಳಿಸಲು ಅನುಕೂಲವಾಗುತ್ತದೆ. ಒಳ್ಳೆಯ ವಿಚಾರಗಳತ್ತ ಗಮನ ಹರಿಸಿ, ಕೆಟ್ಟ ವಿಚಾರಗಳನ್ನು ಬದಿಗಿರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು. 1874ರಲ್ಲಿ ಬಂಟ್ವಾಳದಲ್ಲಿ ಜನಿಸಿದ ಪಂಜೆ ಮಂಗೇಶರಾಯರು ವಿವಿಧ ಕಡೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ 1921ರಲ್ಲಿ ಕೊಡಗು ಜಿಲ್ಲೆಯ ಅಂದಿನ ಸೆಂಟ್ರಲ್ ಹೈಸ್ಕೂಲ್‌ಗೆ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡರು. ನಂತರ ಮುಖ್ಯೋಪಾಧ್ಯಾಯರಾಗಿ 22ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಮಕ್ಕಳ ಕತೆ, ನಾಟಕ, ಕಾದಂಬರಿ ಸೇರಿದಂತೆ ಅನೇಕ ಕೃತಿಗಳನ್ನು ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕೊಡಗಿಬಗ್ಗೆ ಬರೆದ ಹುತ್ತರಿ ಹಾಡು ಇಂದಿಗೂ ಜನಜನಿತವಾಗಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಉಪ ಪ್ರಾಂಶುಪಾಲೆ ಶಶಿಕಲಾ ಅವರು ಮಾತನಾಡಿ, ಕನ್ನಡ ಸ್ನೇಹ ಸಿರಿ ಬಳಗದ ವತಿಯಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಬಹಳ ಉಪಯುಕ್ತವಾದುದಾಗಿದೆ, ಇದರಿಂದ ಮಕ್ಕಳಿಗೆ ಉತ್ತಮ ವಿಚಾರಗಳನ್ನು ತಿಳಿದುಕೊಳ್ಳಲು ಒಂದು ವೇದಿಕೆ ಸಿಕ್ಕಂತಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಪಾಠದೊಂದಿಗೆ ಇತರ ಸಾಧಕರ ವಿಚಾರಗಳನ್ನು ಕೂಡ ತಿಳಿದುಕೊಳ್ಳಬೇಕಿದೆ. ಇಂತಹ ಕಾರ್ಯಕ್ರಮಗಳು ನಡೆದಾಗ ಅದರಲ್ಲಿ ಭಾಗವಹಿಸಬೇಕು. ಆವಾಗ ಮಕ್ಕಳಲ್ಲಿರುವ ಪ್ರತಿಭೆ ಹೊರಬರಲು ಸಾಧ್ಯವೆಂದು ಹೇಳಿದರಲ್ಲದೆ, ಬಳಗದ ಮೂಲಕ ಇನ್ನಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಲಿ ಎಂದು ಆಶಿಸಿದರು. ಪಂಜೆ ಮಂಗೇಶರಾಯರ ಬಗ್ಗೆಯೂ ಮಾತನಾಡಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಡಿ.ಶಿವಶಂಕರ್ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಮಂಗೇಶರಾಯರ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಭಾಗವಹಿಸಿದವರೆಲ್ಲರಿಗೂ ಪ್ರಶಂಸನಾ ಪತ್ರ ನೀಡಲಾಯಿತು. ಗೀತ ಗಾಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಂಗೇಶರಾಯರ ಗೀತೆಗಳು ಸೇರಿದಂತೆ ಇತರ ಭಾವಗೀತೆ, ದಾಸರ ಪದಗಳನ್ನು ಹಾಡಿದರು.
ಶಿಕ್ಷಕಿ ಸೌಮ್ಯಲತ ಸ್ವಾಗತಿಸಿದರೆ, ಉಷಾ ನಿರೂಪಿಸಿದರು. ಸುಜಾತ ವಂದಿಸಿದರು. ಇದೇ ಸಂದರ್ಭದಲ್ಲಿ ಅತಿಥಿಗಳಾದ ರಾಜೇಶ್, ಮಹೇಶ್ ಜೈನಿ ಹಾಗೂ ಉಪ ಪ್ರಾಂಶುಪಾಲೆ ಶಶಿಕಲಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.