ಚಿಕ್ಕಲ್ಲೂರಲ್ಲಿ ಪಂಕ್ತಿ ಸೇವೆ ಬಾಡೂಟದ ಘಮಲು

| Published : Jan 17 2025, 12:46 AM IST

ಸಾರಾಂಶ

ಶ್ರೀ ಕ್ಷೇತ್ರ ಚಿಕ್ಕಲ್ಲೂರು ಪವಾಡ ಪುರುಷ ಘನ ನೀಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಗುರುವಾರ ಸಹಸ್ರಾರು ಭಕ್ತರ ಸಹಪಂಕ್ತಿ ಭೋಜನ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು

ಶ್ರೀ ಕ್ಷೇತ್ರ ಚಿಕ್ಕಲ್ಲೂರು ಪವಾಡ ಪುರುಷ ಘನ ನೀಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಗುರುವಾರ ಸಹಸ್ರಾರು ಭಕ್ತರ ಸಹಪಂಕ್ತಿ ಭೋಜನ ನಡೆಯಿತು.ಚಿಕ್ಕಲ್ಲೂರು ಜಾತ್ರೆಗೆ 4ನೇ ದಿನ ಸಾಗರೋಪಾದಿಯಲ್ಲಿ ಭಕ್ತರು ಸಿದ್ದಪ್ಪಾಜಿ ಸೇವೆ ಸಲ್ಲಿಸಿ ಸಹಪಂಕ್ತಿ ಭೋಜನ ಕೂಟದಲ್ಲಿ ಭಾಗವಹಿಸುವ ಮೂಲಕ ಜಿಲ್ಲಾಡಳಿತದ ಕಟ್ಟುನಿಟ್ಟಿನ ಪ್ರಾಣಿ ಬಲಿ ನಿಷೇಧ ಕ್ರಮದ ನಡುವೆಯೂ ಹರಕೆ ಹೊತ್ತ ಭಕ್ತರಿಂದ ತಮ್ಮ ನೆಂಟರಿಷ್ಟರಿಗೆ ಸಹಪಂಕ್ತಿ ಭೋಜನ (ಬಾಡೂಟ) ಹಾಕುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.

ಲಕ್ಷಾಂತರ ಭಕ್ತರು ಭೇಟಿ :

5 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಪ್ರಯುಕ್ತ ಲಕ್ಷಾಂತರ ಸಿದ್ದಪ್ಪಾಜಿಯ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಸಿದ್ದಪ್ಪಾಜಿ ದೇವಾಲಯದ ಮುಂಭಾಗ ತಡೆ ಒಡೆಸಿದರು.ಈ ಮೂಲಕ ಮಾಟ ಮಂತ್ರ ಮತ್ತು ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಭಕ್ತರು ಕುಟುಂಬ ಸಮೇತ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ನಿವೇದಿಸಿಕೊಂಡರು.

ಕಂಡಾಯಗಳಿಗೆ ಪೂಜೆ, ಪಂಕ್ತಿಸೇವೆ:

4ನೇ ದಿನ ಅಪಾರ ಸಂಖ್ಯೆಯ ಭಕ್ತಾದಿಗಳು ಬಂದ ಹಿನ್ನೆಲೆಯಲ್ಲಿ ಕೆಲವು ಭಕ್ತಾದಿಗಳು ಜಾತ್ರೆಗೆ ಮುನ್ನವೇ ತಮ್ಮ ಕುರಿ ಮೇಕೆಗಳನ್ನು ತಂದು ಅಕ್ಕ ಪಕ್ಕದ ಜಮೀನುಗಳಲ್ಲಿ ಬಿಡುವ ಮೂಲಕ ನಂತರ ಪಂಕ್ತಿಸೇವೆ ದಿನದಂದು ಭರ್ಜರಿ ಬಾಡೂಟ ತಯಾರಿಸಿದರು. ಜಿಲ್ಲಾಡಳಿತ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕೆಲವರು ಸಿಹಿ ಊಟ ಮಾಡಿ ಬಡಿಸಿದರೆ ಇನ್ನೂ ಕೆಲವರು ಚೆಕ್‌ಪೋಸ್ಟ್‌ನ ಆಚೆ ಮರಿಗಳನ್ನು ಕಟ್ಟಿ ಹಾಕಿ ಸಿದ್ದಪ್ಪಾಜಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ತೀರ್ಥವನ್ನು ತೆಗೆದುಕೊಂಡು ಹೋಗಿ ಅಲ್ಲಿ ಹಾಕಿ ನಂತರ ಅದನ್ನು ಕಡಿದು ಮಾಂಸದ ಅಡಿಗೆ ಮಾಡಿ ನೆಂಟರಿಷ್ಟರಿಗೆ ಬಡಿಸುವ ಮೂಲಕ ಪಂಕ್ತಿ ಸೇವೆ ಸಲ್ಲಿಸಿ ಭಕ್ತರಿಂದ ಹರಕೆ ಸಲ್ಲಿಸಿದರು. ರಾಗಿಮುದ್ದೆ, ಅವರೆ ಕಾಳು ಸಾಂಬಾರ್‌ಗೆ ಕೆಲವರು ಮೊರೆ ಹೋದರೆ, ಇನ್ನೂ ಕೆಲವರು ಸಿಹಿ ಪೊಂಗಲ್ ಮಾಡಿ ಕಂಡಾಯಗಳಿಗೆ ನೈವೇದ್ಯ ಮಾಡಿ ಪೂಜೆ ಸಲ್ಲಿಸಿದರು.

ಹೊಸಮಠದಲ್ಲಿ ವಿಶೇಷ ಪೂಜೆ:

ಚಿಕ್ಕಲೂರು ಜಾತ್ರೆಗೆ ಬರುವ ಸಿದ್ದಪ್ಪಾಜಿ ಭಕ್ತರು ಹಳೆ ಮಠದಲ್ಲಿ ಪೂಜೆ ಸಲ್ಲಿಸಿ, ನಂತರ ಹೊಸಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕಳೆದ ನಾಲ್ಕು ದಿನಗಳಿಂದ ನಡೆದ ಪೂಜಾ ಕಾರ್ಯಕ್ರಮಗಳು ಹಾಗೂ ಉತ್ಸವಗಳ ನಡುವೆ ಐದನೇ ದಿನ ನಡೆಯುವ ಶುಕ್ರವಾರದ ಪ್ರಯುಕ್ತ ಚಿಕ್ಕಲೂರು ಜಾತ್ರೆಯಲ್ಲಿ ಘನ ನೀಲಿ ಸಿದ್ದಪ್ಪಾಜಿ ಹಾಗೂ ಮುತ್ತತ್ತಿರಾಯನ ಸ್ನೇಹದ ಸಂಕೇತವಾಗಿ ಮುತ್ತತ್ತಿ ರಾಯನ ಸೇವೆ ಜರುಗಲಿದೆ. ಜಾತ್ರೆಗೆ ಬರುವ ಭಕ್ತಾದಿಗಳು ಕೊನೆಯ ದಿನ ಸಿದ್ದಪ್ಪಾಜಿಗೆ ಪೂಜೆ ಸಲ್ಲಿಸಿ ಮುಂದಿನ ವರ್ಷದವರೆಗೆ ಯಾವುದೇ ಕುಟುಂಬದವರಿಗೆ ತೊಂದರೆ ಆಗದಂತೆ ಕಷ್ಟಕಾರ್ಪಣ್ಯಗಳಿಂದ ದೂರ ಮಾಡುವಂತೆ ನಿವೇದನೆ ಮಾಡಿಕೊಳ್ಳುವ ಮೂಲಕ ಮುತ್ತತ್ತಿರಾಯನ ಸೇವೆಯ ಜೊತೆ ಜಾತ್ರೆಗೂ ಸಹ ತೆರೆ ಎಳೆಯಲಾಗುತ್ತದೆ.

ಪ್ರಾಣಿ ಬಲಿ ಜಟಾಪಟಿ:ಪ್ರಾಣಿ ದಯಾ ಸಂಘಟನೆ ಸ್ವಾಮೀಜಿ ದಯಾನಂದ ಸ್ವಾಮೀಜಿ ಅವರು ಜಾತ್ರೆಯಲ್ಲಿ ಪ್ರಾಣಿ-ಬಲಿಯನ್ನು ಚಿಕ್ಕಲ್ಲೂರು ಜಾತ್ರೆಯಲ್ಲಿ ನಡೆಯುವುದನ್ನು ತಡೆಯಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಆದರೆ ಸಿದ್ದಪ್ಪಾಜಿ ಪರಂಪರೆಯ ಭಕ್ತರು ಕ್ಷೇತ್ರದಲ್ಲಿ ಬಲಿಪೀಠ ಇಲ್ಲ ಪ್ರಾಣಿ ಬಲಿ ಕೊಡುವುದಿಲ್ಲ ಆಹಾರ ಪದ್ಧತಿ ಸಂಸ್ಕೃತಿಯಾಗಿದ್ದು ಮಾಂಸದ ಭಕ್ಷ್ಯ ಎಡೆ ಇಟ್ಟು ಬಳಿಕ ಸಹಪಂಕ್ತಿ ಭೋಜನ ನಡೆಸುತ್ತೇವೆ ಎಂದಿದ್ದರು. ಜಿಲ್ಲಾಡಳಿತವು ಪ್ರಾಣಿ ಪಕ್ಷಿ ಬಲಿ ನಿಷೇಧಿಸಿ ಆದೇಶ ಹೊರಡಿಸಿ ಚೆಕ್‌ಪೋಸ್ಟ್‌ ಗಳನ್ನು ಸಹ ಸ್ಥಾಪಿಸಿತ್ತು. ಜಿಲ್ಲಾಡಳಿತದ ಕಟ್ಟುನಿಟ್ಟಿನ ಪ್ರಾಣಿಬಲಿ ನಿಷೇಧ ಕ್ರಮದ ನಡುವೆಯೂ ಹರಕೆ ಹೊತ್ತ ಭಕ್ತರು ತಮ್ಮ ನೆಂಟರಿಷ್ಟರಿಗೆ ಸಹಪಂಕ್ತಿ ಭೋಜನ ಹಾಕುವ ಮೂಲಕ ಸಿದ್ದಪ್ಪಾಜಿಗೆ ಜೈ ಎಂದು ಘೋಷಣೆ ಕೂಗಿದ್ದಾರೆ.

ಸೂಕ್ತ ಬಂದೋಬಸ್ತ್:

ಪೋಲಿಸ್ ಇಲಾಖೆ ಚಿಕ್ಕಲ್ಲೂರು ಜಾತ್ರೆಯಲ್ಲಿ ನಡೆಯುತ್ತಿರುವ ಬಹು ಮುಖ್ಯ ಪಂಕ್ತಿ ಸೇವೆ ದಿನದಂದು ಲಕ್ಷಾಂತರ ಭಕ್ತರು ಹಗಲು ರಾತ್ರಿ ಎನ್ನದೆ ನಿರಂತರವಾಗಿ ಬರುತ್ತಿರುವುದರಿಂದ ಜಾತ್ರೆಯಲ್ಲಿ ಯಾವುದೇ ಲೋಪದೋಷಗಳು ಕಂಡು ಬರದಂತೆ ಹಾಗೂ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆಗೊಳಿಸಲಾಗಿತ್ತು.

ನೂರಾರು ವರ್ಷಗಳಿಂದ ಇತಿಹಾಸ ಹೊಂದಿರುವ ಚಿಕ್ಕಲೂರು ಸಿದ್ದಪ್ಪಾಜಿ ಜಾತ್ರೆಗೆ ಹರಕೆ ಹೊತ್ತು ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಹೊರಗೆ ಎಲ್ಲೋ ಕುರಿ ಕೋಳಿ ಮೇಕೆಗಳನ್ನು ಹರಕೆಯ ರೂಪದಲ್ಲಿ ಅರ್ಪಿಸುವುದನ್ನು ಬಲಿ ಎಂದು ಬಿಂಬಿಸಿ ಪಂಕ್ತಿ ಸೇವೆ ಆಹಾರ ಪದ್ಧತಿಯನ್ನು ತಡೆಗಟ್ಟುತ್ತಿರುವುದು ಸರಿಯಾದ ಕ್ರಮವಲ್ಲ. ಸಾಂಪ್ರದಾಯದಂತೆ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿರುವ ಪದ್ದತಿಯನ್ನು ಮುರಿಯಲು ಹೊರಟಿರುವುದು ಸಿದ್ದಪ್ಪಾಜಿಯ ಭಕ್ತರನ್ನು ನಿರಾಸೆಗೊಳಿಸಿದೆ.

ಚಿಕ್ಕಮಂಚಯ್ಯ, ಸಿದ್ದಪ್ಪಾಜಿ ಭಕ್ತ