ಈ ವರ್ಷ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ವಿನಯದಿಂದ ಸಾಧನೆ ಮಾಡಲು ಉತ್ತೇಜಿಸುತ್ತದೆ ಎಂದು ಹೇಳಿದರು. ಈ ವರ್ಷ ಜನರು ಪರಸ್ಪರ ಅವಮಾನಿಸಿಕೊಳ್ಳುವುದು, ಹಣವನ್ನು ಕಳೆದು ಕೊಳ್ಳುವುದು ಹೆಚ್ಚಾಗಲಿದ್ದು , ಜನರು ತಾಳ್ಮೆ ಮತ್ತು ಸಹಿಷ್ಣುತೆಯನ್ನು ಪ್ರದರ್ಶಿಸಿದರೆ ಉತ್ತಮ ವಿಷಯಗಳು ಸಂಭವಿಸಲಿವೆ,

ಕನ್ನಡ ಪ್ರಭವಾರ್ತೆ, ಮಾಲೂರು

ಪರಾಭವ ಸಂವತ್ಸರದಲ್ಲಿ ಅಹಂಕಾರ ನಿರ್ಮೂಲನೆಯಾಗಲಿದ್ದು, ವಿನಯವಂತರಿಗೆ ಯಶ ಸಿಗಲಿದೆ ಎಂದು ಬ್ರಾಹ್ಮಣ ಸಂಘದ ಅಧ್ಯಕ್ಷ ವಿದ್ವಾನ್ ವೇ.ಬ್ರ. ನಾಗಾರಾಜ ಶಾಸ್ತ್ರಿ ಹೇಳಿದರು.

ತಾಲೂಕು ಬ್ರಾಹ್ಮಣರ ಸಂಘವು ಶ್ರೀ ರಾಘವೇಂದ್ರಸ್ವಾಮಿ ಸೇವಾ ಸಮಿತಿ ಸಹಕಾರದಲ್ಲಿ ಇಲ್ಲಿನ ಶ್ರೀ ಮಠದಲ್ಲಿ ಯುಗಾದಿ ಅಂಗವಾಗಿ ಹಮ್ಮಿಕೊಂಡಿದ್ದ ಪಂಚಾಗ ಶ್ರವಣ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಬಾರಿ ಸಕಾಲದಲ್ಲಿ ಮಳೆ-ಬೆಳೆ ಆಗಲಿದೆ. ಒಂದೇ ಒಂದು ಗ್ರಹಣ ದೇಶದಲ್ಲಿ ಕಾಣುವ ಹಾಗೆ ಸಂಭವಿಸುವುದಿಲ್ಲ. ಪರಾಭವ ಸಂವತ್ಸರದಲ್ಲಿ ಗುರು ಅಧಿಪತಿಯಾಗಿದ್ದು, ಚಂದ್ರ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪರಾಭವ ಸಂವತ್ಸರದಲ್ಲಿ ಅರ್ಥಿಕ ಬೆಳವಣಿಗೆಯೊಂದಿಗೆ ವೆಚ್ಚಗಳು ಹೆಚ್ಚಾಗುವ ಮತ್ತು ಉದ್ಯೋಗದಲ್ಲಿ ಬಡ್ತಿ ಅವಕಾಶ ತರುವ ವರ್ಷವಾಗಲಿದೆ ಎಂದರು.ಪರಾಭವ ಎಂದರೆ ಅಹಂಕಾರದ ಪರಾಜಯ ಅಥವಾ ವಿನಯವನ್ನು ಕಲಿಸುವ ವರ್ಷ ಎಂದು ಕರೆಯಲಾಗುತ್ತಿದೆ ಎಂದ ನಾಗರಾಜ ಶಾಸ್ತ್ರಿಗಳು, ಇದು ಅಹಂಕಾರವನ್ನು ಮೀರಿದ ಜ್ಞಾನದ ಸಂಕೇತವಾಗಿದೆ ಎಂದರು. ಈ ವರ್ಷ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ವಿನಯದಿಂದ ಸಾಧನೆ ಮಾಡಲು ಉತ್ತೇಜಿಸುತ್ತದೆ ಎಂದು ಹೇಳಿದರು. ಈ ವರ್ಷ ಜನರು ಪರಸ್ಪರ ಅವಮಾನಿಸಿಕೊಳ್ಳುವುದು, ಹಣವನ್ನು ಕಳೆದು ಕೊಳ್ಳುವುದು ಹೆಚ್ಚಾಗಲಿದ್ದು , ಜನರು ತಾಳ್ಮೆ ಮತ್ತು ಸಹಿಷ್ಣುತೆಯನ್ನು ಪ್ರದರ್ಶಿಸಿದರೆ ಉತ್ತಮ ವಿಷಯಗಳು ಸಂಭವಿಸಲಿವೆ ಎಂದು ತಿಳಿಸಿದರು.

ಶ್ರೀ ರಾಘವೇಂದ್ರಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಜಯರಾವ್‌ ಮಾತನಾಡಿದರು. ನಂತರ ಶ್ರೀ ರಾಯರ ಪ್ರಕಾರೋತ್ಸವ, ಮಹಾಮಂಗಳಾರತಿ ನಡೆಯಿತು. ಸಮಿತಿಯ ಶ್ರೀಧರ ಮೂರ್ತಿ, ಬ್ರಾಹ್ಮಣ ಸಂಘದ ನಾಗಾನಂದ್‌ , ಸುಧೀಂದ್ರ, ಶೇಷಗಿರಿ, ಚಂದ್ರಶೇಖರ್‌, ರಾಘವೇಂದ್ರ, ಭದ್ರಿನಾಥ್‌, ಚಲಪತಿ, ರಾಧಮ್ಮ, ಗೌರಿ ರಮೇಶ್‌, ಮಾಲಾ ಪ್ರಕಾಶ್‌ , ಬಿಂದುಮಾಧವ ರಾವ್‌, ಮೂರ್ತಿ, ನಗರಸಭೆ ಸದಸ್ಯ ಭಾನುತೇಜಾ ಇನ್ನಿತರರು ಇದ್ದರು.