ಬೇಸಿಗೆ ಶಿಬಿರಗಳು ಮಕ್ಕಳ ಮನೋವಿಕಾಸಕ್ಕೆ ಪೂರಕ- ಅರಸೀಕೆರೆ ಯೋಗಾನಂದ

| Published : May 02 2024, 12:20 AM IST

ಸಾರಾಂಶ

ಶಿಬಿರದಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಅಂತರ್ ದೃಷ್ಟಿ, ಯೋಗ, ಸಂಗೀತ, ನೃತ್ಯ, ನಾಟಕ ಕಲಿಸಲಾಗಿದೆ. ಪಠ್ಯದ ಜೊತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಕೂಡ ಮುಖ್ಯ. ಆದ್ದರಿಂದ ಪೋಷಕರು ಮಕ್ಕಳ ಆಸಕ್ತಿಯನ್ನು ಗುರುತಿಸಿ, ಆವರ ಆಸಕ್ತಿಯ ಕ್ಷೇತ್ರದಲ್ಲೂ ಪ್ರೋತ್ಸಾಹ ನೀಡಬೇಕು

- ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಬೇಸಿಗೆ ಶಿಬಿರ

ಕನ್ನಡಪ್ರಭ ವಾರ್ತೆ ಮೈಸೂರು

ಬೇಸಿಗೆ ಶಿಬಿರಗಳು ಮಕ್ಕಳ ಮನೋವಿಕಾಸಕ್ಕೆ ಪೂರಕ ಎಂದು ರಂಗಕರ್ಮಿ ಅರಸೀಕೆರೆ ಯೋಗಾನಂದ ಹೇಳಿದರು.

ರಾಮಕೃಷ್ಣನಗರದ ಪರಮಹಂಸ ಯೋಗಾ ಮಹಾವಿದ್ಯಾಲಯವು ಇಂಟರ್ ನ್ಯಾಷನಲ್ ಯೋಗ ಸ್ಕೂಲ್, ಇಂಟರ್ ನ್ಯಾಷನಲ್ ಯೋಗ ಆರ್ಗನೈಜೇಷನ್ ಸಹಯೋಗದಲ್ಲಿ ಏರ್ಪಡಿಸಿದ್ದ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ಈ ಶಿಬಿರದಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಅಂತರ್ ದೃಷ್ಟಿ, ಯೋಗ, ಸಂಗೀತ, ನೃತ್ಯ, ನಾಟಕ ಕಲಿಸಲಾಗಿದೆ. ಪಠ್ಯದ ಜೊತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಕೂಡ ಮುಖ್ಯ. ಆದ್ದರಿಂದ ಪೋಷಕರು ಮಕ್ಕಳ ಆಸಕ್ತಿಯನ್ನು ಗುರುತಿಸಿ, ಆವರ ಆಸಕ್ತಿಯ ಕ್ಷೇತ್ರದಲ್ಲೂ ಪ್ರೋತ್ಸಾಹ ನೀಡಬೇಕು ಎಂದು ಅವರು ಸಲಹೆ ಮಾಡಿದರು.

ಮೊದಲೆಲ್ಲಾ ಬೇಸಿಗೆ ರಜೆ ಬಂದಾಗ ಮಕ್ಕಳು ಅಜ್ಜಿ ಮನೆಗೆ ಹೋಗುತ್ತಿದ್ದವು. ಆ ರೀತಿಯ ಕೂಡು ಕುಟುಂಬ ವ್ಯವಸ್ಥೆ ಇತ್ತು. ಈಗ ಮಕ್ಕಳಿಗೆ ಆ ರೀತಿಯ ಜೀವನಾನುಭವವೇ ಸಿಗುತ್ತಿಲ್ಲ ಎಂದು ಅವರು ವಿಷಾದಿಸಿದರು.

ಬೇಸಿಗೆ ಶಿಬಿರದ ಎರಡನೇ ತಂಡಕ್ಕೆ ಚಾಲನೆ ನೀಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮಕ್ಕಳನ್ನು ಟಿವಿ ಮತ್ತು ಮೊಬೈಲ್ನಿಂದ ಆಚೆ ತರಲು ಈ ರೀತಿಯ ಶಿಬಿರಗಳು ನೆರವಾಗುತ್ತವೆ ಎಂದರು.

ಮೈಸೂರು ರಾಜಮಹಾರಾಜರ ಕಾಲದಿಂದಲೂ ಯೋಗಕ್ಕೆ ಪ್ರಸಿದ್ಧಿ. ದೇಶ - ವಿದೇಶಗಳಿಂದ ಯೋಗ ಕಲಿಕೆಗೆ ಮೈಸೂರಿಗೆ ನೂರಾರು ಮಂದಿ ಬರುತ್ತಿದ್ದಾರೆ. ಮಕ್ಕಳಿಗೆ ಯೋಗ ಕಲಿಸಿದರೆ ಏಕಾಗ್ರತೆ ಸಾಧ್ಯವಾಗುತ್ತದೆ. ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಅವರು ಹೇಳಿದರು.

ಪರಮಹಂಸ ಯೋಗ ಮಹಾವಿದ್ಯಾಲಯದ ಅಧ್ಯಕ್ಷ ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಯೋಗ ಒಕ್ಕೂಟದ ಉಪಾಧ್ಯಕ್ಷ ರಮೇಶ್ ಕುಮಾರ್ ಮಾತನಾಡಿದರು. ಅಂತಾರಾಷ್ತ್ರೀಯ ಯೋಗ ತರಬೇತುದಾರ ಎಚ್.ಎಂ. ರವಾಣಿಕರ್ ಮುಖ್ಯಅತಿಥಿಯಾಗಿದ್ದರು. ಸುಬ್ರಹ್ಮಣ್ಯಂ, ವಸಂತಲಕ್ಷ್ಮಿ ಇದ್ದರು.

ಒಂದನೇ ತಂಡದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಅರ್ಹತಾಪತ್ರ ವಿತರಿಸಲಾಯಿತು. ಹನ್ನೊಂದನೇ ತಂಡದ ಇಂಟರ್ ನ್ಯಾಷನಲ್ ಯೋಗ ಟೀಚರ್ ಟ್ರೈನಿಂಗ್ ಕೋರ್ಸಿನ ರಾಣಿ, ಎಚ್. ನಾಗರಾಜಪ್ಪ, ಎಚ್.ಎನ್. ಪ್ರಸಾದ್, ಎಲ್. ಜಗದೀಶ್, ಎಸ್. ರವಿಶಂಕರ್, ಎ.ಎಸ್. ರಕ್ಷಿತಾ, ಎ.ಎಂ. ಸೌಮ್ಯಾ, ಎಂ.ಎಸ್. ಮರುಳೀಧರ್, ಟಿ.ಯು. ಕಾವ್ಯಾ, ಜಿ.ಎನ್. ಸುವರ್ಣ ಅವರಿಗೆ ಯೋಗಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿರುವ ರಾಣಿ ಸ್ವಾಮಿಗೌಡ ಅವರನ್ನು ಅಭಿನಂದಿಸಲಾಯಿತು. ವಿದ್ಯಾ ಸ್ವಾಗತಿಸಿದರು. ಮಕ್ಕಳು ಯೋಗ, ಸಂಗೀತ, ನೃತ್ಯ, ನಾಟಕ, ಅಂತರ್ ದೃಷ್ಠಿ ಕಲೆಗಳನ್ನು ಪ್ರದರ್ಶಿಸಿದರು.