ಪರಶುರಾಮ ವಿಗ್ರಹದ ಅವಶೇಷ ತೆರವು: ಉದಯಕುಮಾರ ಶೆಟ್ಟಿ ಆರೋಪ

| Published : May 05 2024, 02:05 AM IST

ಪರಶುರಾಮ ವಿಗ್ರಹದ ಅವಶೇಷ ತೆರವು: ಉದಯಕುಮಾರ ಶೆಟ್ಟಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಿದ್ದು, ತನಿಖೆ ಪೂರ್ಣಗೊಳ್ಳುವ ಮೊದಲೇ ವಿಗ್ರಹದ ಅವಶೇಷಗಳನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ ಮತ್ತು ಸಿಓಡಿ ತನಿಖೆಗೆ ಸಾಕ್ಷ್ಯ ಸಿಗದಂತೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಳೆದೊಂದು ವರ್ಷದಿಂದ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿರುವ ಕಾರ್ಕಳ ತಾಲೂಕಿನ ಬೈಲೂರಿಲ್ಲಿ ಉಮಿಕಲ್ ಬೆಟ್ಟದಲ್ಲಿ ಸ್ಥಾಪಿಸಲಾಗಿದ್ದ 33 ಅಡಿ ಎತ್ತರದ ಪರಶುರಾಮನ ವಿಗ್ರಹ ಮತ್ತೆ ವಿವಾದಕ್ಕೆ ಕಾರಣವಾಗಿದೆ.ರಾಜ್ಯ ಸರ್ಕಾರ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಿದ್ದು, ತನಿಖೆ ಪೂರ್ಣಗೊಳ್ಳುವ ಮೊದಲೇ ವಿಗ್ರಹದ ಅವಶೇಷಗಳನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ ಮತ್ತು ಸಿಓಡಿ ತನಿಖೆಗೆ ಸಾಕ್ಷ್ಯ ಸಿಗದಂತೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.ಹಿಂದಿನ ಬಿಜೆಪಿ ಸರ್ಕಾರವು ಕೊನೆಯ ಅವಧಿಯಲ್ಲಿ ಸುಮಾರು 20 ಕೋಟಿ ರು. ವೆಚ್ಚದ ಈ ಪರಶುರಾಮ ಥೀಮ್ ಪಾರ್ಕನ್ನು ಸ್ಥಾಪಿಸಿ ಉದ್ಘಾಟಿಸಿತ್ತು. ಗುತ್ತಿಗೆ ಪಡೆದಿದ್ದ ಉಡುಪಿ ನಿರ್ಮಿತಿ ಕೇಂದ್ರ ನಂತರ ದುರಸ್ತಿಗೆಂದು ಪರಶುರಾಮ ವಿಗ್ರಹವನ್ನು ಕಳಚಿತ್ತು. ಈ ಸಂದರ್ಭ ವಿಗ್ರಹವನ್ನು ಯೋಜನೆಯಂತೆ ಕಂಚಿನಿಂದ ರಚಿಸದೇ ಫೈಬರ್‌ನಿಂದ ರಚಿಸಿ ಕೋಟ್ಯಾಂತರ ರು. ಅವ್ಯಹಾರ ನಡೆಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.ಈಗ ವಿಗ್ರಹದ ತಳಭಾಗದ ಅವಶೇಷಗಳ‍ನ್ನೂ ನಿರ್ಮಿತಿ ಕೇಂದ್ರವು ನ್ಯಾಯಾಲಯದ ಆದೇಶ ಇದೆ ಎಂದು ಸುಳ್ಳು ಹೇಳಿ ತೆರವುಗೊಳಿಸುತ್ತಿದೆ. ಇದು ಉಳಿದ ಸಾಕ್ಷ್ಯಗಳನ್ನು ನಾಶ ಮಾಡುವ ಹುನ್ನಾರವಾಗಿದೆ ಉದಯಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.ಈ ಥೀಮ್ ಪಾರ್ಕ್ ನಿರ್ಮಾಣಕ್ಕೆ ಮೊದಲೇ ರಾಜ್ಯ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಅವರು ಈ ಪ್ರಸ್ತಾವವನ್ನೇ ತಿರಸ್ಕರಿಸಿದ್ದರು. ಆದರೂ ಉಡುಪಿ ಜಿಲ್ಲಾಧಿಕಾರಿ, ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ಅನುಮತಿ ನೀಡಿದ್ದರು, ಮಾತ್ರವಲ್ಲ ಥೀಮ್ ಪಾರ್ಕ್ ನಿರ್ಮಾಣದ ಗುತ್ತಿಗೆಯನ್ನೂ ವಿವಾದಿತ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಟ್ಟಿತು. ಈಗ ಮತ್ತೆ, ಸಿಓಡಿ ತನಿಖೆ ಪೂರ್ಣಗೊಳ್ಳುವ ಮೊದಲೇ ಜಿಲ್ಲಾಧಿಕಾರಿ ಅವರೇ ಅಧ್ಯಕ್ಷರಾಗಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಮೂರ್ತಿ ತೆರವು ಮಾಡುತ್ತಿರುವುದು ಸಾಕ್ಷ್ಯನಾಶದ ಸಂಶಯಕ್ಕೆ ಕಾರಣವಾಗಿದೆ ಎಂದವರು ಹೇಳಿದ್ದಾರೆ.ಪರಶುರಾಮ ನಕಲಿ ಮೂರ್ತಿಯ ಸತ್ಯಾಸತ್ಯತೆ ಪತ್ತೆಹಚ್ಚಿ, ಥೀಮ್ ಪಾರ್ಕ್ ಹೆಸರಿನಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ವಂಚಿಸಿದ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ರಾಜ್ಯ ಸರ್ಕಾರ ಹಾಗೂ ಉಸ್ತುವಾರಿ ಸಚಿವರು ಬದ್ಧರಿದ್ದು, ಪರಶುರಾಮನ ಅಸಲಿ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗುತ್ತದೆ ಎಂದು ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.