ಶಾಲಾ ಅಭಿವೃದ್ಧಿಗೆ ಪೋಷಕರ ಸಹಕಾರ ಅಗತ್ಯ: ಕೆ.ಎಚ್.ಗಿರೀಶ್

| Published : Nov 12 2025, 01:30 AM IST

ಶಾಲಾ ಅಭಿವೃದ್ಧಿಗೆ ಪೋಷಕರ ಸಹಕಾರ ಅಗತ್ಯ: ಕೆ.ಎಚ್.ಗಿರೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಶಾಲೆ ಅಭಿವೃದ್ಧಿ ಹೊಂದಬೇಕಾದರೆ ಪಾಲಕ/ಪೋಷಕರ ಸಹಕಾರ ಅತ್ಯಗತ್ಯ ಎಂದು ಪ್ರಾಂಶುಪಾಲ ಕೆ.ಎಚ್.ಗಿರೀಶ್ ತಿಳಿದರು.

ಕನ್ನಡಪ್ರಭ ವಾರ್ತೆ ಕಡೂರು

ಯಾವುದೇ ಶಾಲೆ ಅಭಿವೃದ್ಧಿ ಹೊಂದಬೇಕಾದರೆ ಪಾಲಕ/ಪೋಷಕರ ಸಹಕಾರ ಅತ್ಯಗತ್ಯ ಎಂದು ಪ್ರಾಂಶುಪಾಲ ಕೆ.ಎಚ್.ಗಿರೀಶ್ ತಿಳಿದರು.

ತಾಲೂಕಿನ ಜೋಡಿಹೋಚಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ 6ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ದೀನ ದಲಿತ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾರಂಭಗೊಂಡಿರುವ ವಸತಿ ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಅವರನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಈ ವಸತಿ ಶಾಲೆಯಲ್ಲಿ ಶಿಕ್ಷಣದ ಜೊತೆ ಕ್ರೀಡೆಗೂ ಆದ್ಯತೆ ನೀಡುವ ಮೂಲಕ ರಾಜ್ಯ ಮತ್ತು ಜಿಲ್ಲಾ ವಿಭಾಗ ಮಟ್ಟದಲ್ಲಿಯೂ ಕೂಡ ಮಕ್ಕಳಿಂದ ಸಾಧನೆ ಮಾಡಿಸುವ ಮೂಲಕ ಹೆಸರುಗಳಿಸಿದೆ ಎಂದರು.

ನಿಮ್ಮ ಮಕ್ಕಳನ್ನು ವಸತಿ ಶಾಲೆಗಳಲ್ಲಿ ಬಿಡುವ ನಂತರ ಸಾಮಾನ್ಯವಾಗಿ ಪೋಷಕರಲ್ಲಿ ಆತಂಕವಿರುವ ಸಾಧ್ಯತೆಗಳೆ ಹೆಚ್ಚು. ಆದರೆ ಇಲ್ಲಿ ದಿನದ 24 ಗಂಟೆಯು ಕೂಡ ಪ್ರಾಂಶುಪಾಲರಾಗಲೀ, ಬೋದಕೇತರ ಸಿಬ್ಬಂದಿ ಕೂಡ ನಿಮ್ಮ ಮಕ್ಕಳ ಶೈಕ್ಷಣಿಕ ವಿದ್ಯಾಬ್ಯಾಸ ಸೇರಿ ಅವರ ಪ್ರತಿ ಚಟುವಟಿಕೆಗಳ ಮೇಲೆ ಸದಾ ಹದ್ದಿನ ಕಣ್ಣಿದ್ದು, ಪ್ರತಿ ಮಗು ಯಾವ ರೀತಿ ವರ್ತಿಸುತ್ತಾನೆಂಬುದರ ಮೇಲೆ ಅವನ ಬದಲಾವಣೆಯನ್ನು ನಮ್ಮ ಶಾಲೆಯ ಶಿಕ್ಷಕರು ಬಯಸಲು ಪ್ರಯತ್ನಿಸುತ್ತಿರುತ್ತಾರೆ. ಪೋಷಕರಲ್ಲಿ ಆತಂಕ ಬೇಡ, ನಿಮ್ಮ ರೀತಿ ನಾವು ಪ್ರೀತಿ ಕೊಡಲು ಸಾಧ್ಯವಾಗದಿದ್ದರು ಅವರನ್ನು ಉತ್ತಮ ವ್ಯಕ್ತಿಯನ್ನಾಗಿಸುವ ಗುರಿ ನಮ್ಮದು ಎಂದರು.

6ನೇ ತರಗತಿಯಲ್ಲಿ ಗ್ರಾಮೀಣ , ನಗರ ಪ್ರದೇಶದ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಇಲ್ಲಿಗೆ ಹೆಚ್ಚಿಗೆ ಆಗಮಿಸಿದ್ದಾರೆ, ಅವರಲ್ಲಿ ಮನೋಭಾವ ವಿಭಿನ್ನವಾಗಿದ್ದು, ಅವರನ್ನು ಸಮತೋಲಿತವಾಗಿ ಅಭ್ಯಾಸ ಮಾಡಿಸುವ ಸವಾಲನ್ನು ನಾವು ಎದುರಿಸಬೇಕಾಗಿದ್ದು ನಿಮ್ಮ ಮಕ್ಕಳ ಸಂಪೂರ್ಣ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಪೋಷಕ ಕಡೂರಹಳ್ಳಿ ಪ್ರಶಾಂತ್ ಮಾತನಾಡಿ, ಕಡೂರು ತಾಲ್ಲೂಕಿನಲ್ಲಿ ವಿದ್ಯಾಭ್ಯಾಸ ಮತ್ತು ವಸತಿ ಶಾಲೆಯನ್ನು ಅಚ್ಚುಕಟ್ಟಾಗಿ ಇಟ್ಟಿರುವ ಪರಿಣಾಮ ನಮ್ಮ ಮಗು ಪ್ರಸಕ್ತ ಪ್ರತಿಷ್ಠಿತ ಶಾಲೆಯಲ್ಲಿ ಆಯ್ಕೆಗೊಂಡಿದ್ದರು ಸಹ ಸರ್ಕಾರಿ ಶಾಲೆಯಲ್ಲಿಯೇ ಕಲಿಯಬೇಕೆಂಬ ಹಂಬಲದಿಂದ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡು ಸೇರಿಸಲಾಗಿದೆ ಎಂದರು.

ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕೆ.ಹೊನ್ನಪ್ಪ, ಶಿಕ್ಷಕರಾದ ಕೆಂಚಪ್ಪ, ಶ್ರೀಗಂಧ, ಶ್ರೀನಿವಾಸ್, ಉಷಾ, ಲಾವಣ್ಯ, ಲತಾ ಸೀನಪ್ಪ, ಯಶಸ್ವಿನಿ, ಶಿಲ್ಪ ಹಾಗೂ ಎನ್.ಗಿರೀಶ್, ರೋಜಾ .ಟಿ, ವೇದಾವತಿ, ಪೋಷಕರು, ಶಾಲಾ ಸಿಬ್ಬಂದಿ ಇದ್ದರು.