ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಕ್ಕಳು ಮನೆಯಲ್ಲಿ ಓದುವಾಗ, ಬರೆಯುವಾಗ ಪೋಷಕರು ಟಿವಿ, ಮೊಬೈಲ್ ಬಳಸುವುದನ್ನು ಬಿಡಬೇಕು ಎಂದು ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ.ಸತೀಶ್ ಜವರೇಗೌಡ ಕಿವಿಮಾತು ಹೇಳಿದರು.ಪ್ರಾರ್ಥನಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ಪ್ರಾರ್ಥನೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳು ಕ್ರೀಡೆ, ಸಾಹಿತ್ಯ, ಸಂಗೀತ, ಜನಪದ, ರಂಗಭೂಮಿ ವಿಷಯಗಳ ಕಡೆಗೂ ತಮ್ಮ ಆಸಕ್ತಿ ಬೆಳೆಸಿಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಮಕ್ಕಳ ಜೊತೆಗೆ ಕೂತು ಪೋಷಕರು ಕೂಡ ಸಾಹಿತ್ಯದ ಪುಸ್ತಕಗಳನ್ನೋ ಅಥವಾ ಪತ್ರಿಕೆಗಳನ್ನೋ ಓದುವ ಕಾರ್ಯದಲ್ಲಿ ಮಗ್ನರಾದಾಗ, ಮಕ್ಕಳಲ್ಲಿ ಅಧ್ಯಯನದ ಆಸಕ್ತಿ ಮತ್ತಷ್ಟು ಬಲವಾಗುತ್ತದೆ ಎಂದರು.ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವಾಗ ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ವಿಷಯ ಕಲಿಯಬೇಕು. ಅವರಲ್ಲಿ ಸದಭಿರುಚಿಯ ವ್ಯಕ್ತಿತ್ವ ಅರಳಲು ಪಠ್ಯ ಮತ್ತು ಪಠ್ಯೇತರ ವಿಷಯಗಳೆರಡೂ ತುಂಬಾ ಅಗತ್ಯ ಎಂದರು.
ಶಿಕ್ಷಕರು ಮತ್ತು ಪೋಷಕರ ನಡುವೆ ಸದಾ ಸಮನ್ವಯ ಇರಬೇಕು. ಮಕ್ಕಳ ಕಲಿಕೆಯಲ್ಲಿ ಇಬ್ಬರ ಪಾತ್ರವೂ ತುಂಬ ಮುಖ್ಯ. ಮಕ್ಕಳು ಯಾವುದೇ ವಿಷಯ ಕುರಿತು ಪ್ರಶ್ನಿಸಿದಾಗ ಅವರ ಕುತೂಹಲ ತಣಿಯುವ ಹಾಗೆ ಶಿಕ್ಷಕ-ಪೋಷಕರಿಬ್ಬರೂ ಉತ್ತರಿಸಬೇಕು. ಆ ಮುಖೇನ ಮಕ್ಕಳಲ್ಲಿ ಉತ್ತಮ ಗುಣಗಳು ಮತ್ತು ಜೀವನ ಮೌಲ್ಯಗಳನ್ನು ರೂಢಿಸಲು ಶ್ರಮಿಸಬೇಕು ಎಂದರು.
ಸಮಾರಂಭದಲ್ಲಿ ಶಾಲಾ ಟ್ರಸ್ಟ್ ಅಧ್ಯಕ್ಷ ರವಿ ಸಾವಂದಿಪುರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಟ್ರಸ್ಟಿನ ಗೌರವಾಧ್ಯಕ್ಷ ಪಟ್ಟರಾಮು, ಕಾರ್ಯದರ್ಶಿ ಪಿ.ಸೌಮ್ಯ ಕೃಷ್ಣ, ನಿರ್ದೇಶಕರಾದ ಹಾಗಲಹಳ್ಳಿ ಬಸವರಾಜು, ತೊರೆಚಾಕನಹಳ್ಳಿ ಶಂಕರೇಗೌಡ, ವೈ.ಬಿ. ಶ್ರೀಕಂಠಸ್ವಾಮಿ, ಕೆ.ವಿ. ರಘು ಉಪಸ್ಥಿತರಿದ್ದರು.
ಇದೇ ವೇಳೆ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಮಾಂಟೆಸರಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಬಳಿಕ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.