ಸಾರಾಂಶ
ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಜವಾಬ್ದಾರಿ ಕಳೆದುಕೊಳ್ಳಬೇಕು ಎಂಬ ಮನೋಭಾವದಿಂದ ಬಾಲ್ಯಾವಸ್ಥೆಯಲ್ಲಿಯೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾದನೀಯ. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಬಹುಮುಖ್ಯವಾಗಿದೆ. ಸಮಾಜದ ಯಾವುದೇ ಹೆಣ್ಣು ಮಗು ಮೊದಲು ಶಿಕ್ಷಣವನ್ನು ಪಡೆದು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ಸಮಾಜದ ಎಲ್ಲ ರಂಗಗಳಲ್ಲೂ ತಮ್ಮ ಅಪ್ರತಿಮ ಸಾಧನೆ ತೋರುತ್ತಿರುವ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಪೋಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಹೇಳಿದರು.ಪಟ್ಟಣದ ಕಮಲ ನೆಹರು ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಬಹುಮುಖ್ಯವಾಗಿದೆ. ಸಮಾಜದ ಯಾವುದೇ ಹೆಣ್ಣು ಮಗು ಮೊದಲು ಶಿಕ್ಷಣವನ್ನು ಪಡೆದು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಜವಾಬ್ದಾರಿ ಕಳೆದುಕೊಳ್ಳಬೇಕು ಎಂಬ ಮನೋಭಾವದಿಂದ ಬಾಲ್ಯಾವಸ್ಥೆಯಲ್ಲಿಯೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾದನೀಯ ಎಂದರು.ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾನಸಿಕ ಒತ್ತಡ ನೀಡದೆ ಅವರ ಆರೋಗ್ಯ ಮತ್ತು ದೈಹಿಕ ಸಮಸ್ಯೆಗಳಿಗೆ ಸರಿಯಾದ ರೀತಿಯಲ್ಲಿ ಪೋಷಕರು ಸ್ಪಂದಿಸುವ ಮೂಲಕ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯುವಂತ ವಾತಾವರಣ ಕಲ್ಪಿಸಿ ಕೊಡಬೇಕೆಂದು ಹೇಳಿದರು.
ವಿದ್ಯಾರ್ಥಿಗಳು ಕೂಡ ಉತ್ತಮ ಪೋಷಕಾಂಶಗಳಿರುವಂತಹ ಆಹಾರ ಸೇವಿಸುವುದರ ಮೂಲಕ ದೈಹಿಕ ಹಾಗೂ ಮಾನಸಿಕ ಸಮತೋಲ ಕಾಪಾಡಿಕೊಂಡು ಯಾವುದೇ ಆತಂಕಗೊಳಗಾಗದೆ ಧೈರ್ಯದಿಂದ ಪರೀಕ್ಷೆ ಎದುರಿಸಿ ಉತ್ತಮ ಫಲಿತಾಂಶ ಪಡೆದು ಶಾಲೆ ಮತ್ತೆ ಪೋಷಕರಿಗೆ ಒಳ್ಳೆಯ ಹೆಸರು ತರಬೇಕೆಂದು ಕಿವಿಮಾತು ಹೇಳಿದರು.ಈ ವೇಳೆ ಶಿಕ್ಷಣ ಸಂಯೋಜಕರಾದ ಸುಬ್ರಹ್ಮಣ್ಯ, ಲೋಕೇಶ್, ಮುಖ್ಯ ಶಿಕ್ಷಕ ಎನ್. ಕೃಷ್ಣ, ಎಂ.ಟಿ.ಚಂದ್ರಶೇಖರ್, ಶಿಕ್ಷಕರಾದ ಕೆಂಚೇಗೌಡ, ಅಶ್ವಿನಿ, ಕೀರ್ತಿಕುಮಾರಿ, ನಂದಿನಿ ಸೇರಿದಂತೆ ಇತರರು ಹಾಜರಿದ್ದರು.