ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಮಕ್ಕಳ ಸರ್ವಾಂಗಿಣ ಪ್ರಗತಿಯಲ್ಲಿ ತಾಯಂದಿಯರ ಪಾತ್ರ ಪ್ರಮುಖ ವಹಿಸುತ್ತದೆ ಎಂದು ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರ ಹೇಳಿದರು.ಪಟ್ಟಣದ ಹಾಲಟ್ಟಿಯಲ್ಲಿ ನೂತನವಾಗಿ ಪ್ರಾರಂಭಿಸಿದ ಸರ್ವೋದಯ ಶಿಕ್ಷಣ ಸಂಸ್ಥೆಯ ನಾಗಪ್ಪ ಲಕ್ಷ್ಮಣ ಗುಡಮಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರೇ ತಮ್ಮ ಜವಾಬ್ದಾರಿ ಮುಗಿಯಿತು ಎಂದು ತಿಳಿದುಕೊಳ್ಳದೇ ಅವರನ್ನು ಸುಸಂಸ್ಕೃತರನ್ನಾಗಿ ಮಾಡುವ ಕೆಲಸ ತಮ್ಮದು ಆಗಬೇಕು ಎಂದರು.
ಮಗುವಿನಲ್ಲಿ ಪಾಲಕರು ಮತ್ತು ಶಿಕ್ಷಕರು ಕಲಿಕೆಯ ಬಗ್ಗೆ ಕಳಕಳಿ ಮತ್ತು ಆಸಕ್ತಿ ಹುಟ್ಟಿಸುವ ಕೆಲಸ ಮಾಡಬೇಕು. ಮಕ್ಕಳು ಪ್ರಾರಂಭದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಕಲಿತರೆ ಮಾತ್ರ ಜೀವನದಲ್ಲಿ ಮುಂದೆ ಬಂದು ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ.ಮೆಕಣಮರಡಿ ಮಾತನಾಡಿ, ಈ ಶಾಲೆಯ ಪ್ರಗತಿಗೆ ಶಿಕ್ಷಣ ಇಲಾಖೆಯಿಂದ ಬೇಕಾಗುವ ಎಲ್ಲ ಸಹಾಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಅರಭಾಂವಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡುವ ಮುಖಾಂತರ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುವ ಕೆಲಸ ಶಿಕ್ಷಣ ಸಂಸ್ಥೆಗಳು ಮಾಡಬೇಕೆಂದು ಸಲಹೆ ನೀಡಿದರು.ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಸ್.ಮಾಲಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ಕಲಿಕಾ ಆಸಕ್ತಿ ಬೆಳೆಸುವ ಕೆಲಸ ಪಾಲಕರು ಮಾಡಬೇಕು. ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕು ಎಂದರು.ಚಿಕ್ಕೋಡಿ ಸಂಪಾದನಾ ಚರಮೂರ್ತಿಮಠದ ಸಂಪಾದನಾ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿದರು. ನ್ಯಾಯವಾದಿ ಎಸ್.ಎಂ.ಚೌಗಲಾ, ಮಲ್ಲೇಶ ಲಿಂಬಿಗಿಡದ, ರವಿ ಮಾಳಿ, ಡಾ.ಸುರೇಶ ಹುಂಬರವಾಡಿ, ಸುರೇಶ ಕಾಳಿಂಗೆ, ಕಾಶಿನಾಥ ಮಾಳಿ, ಅಶೋಕ ಬೈರುಮಾಳಿ, ಗೋಪಾಲ ಗುಡಮಿ, ಶಿವರಾಯಿ ಮಾಳಿ ಮುಂತಾದವರು ಉಪಸ್ಥಿತರಿದ್ದರು. ಶಾಲೆಯ ಸಂಸ್ಥಾಪಕ ಎಸ್.ಎನ್.ಗುಡಮಿ ಸ್ವಾಗತಿಸಿದರು