ಸಾರಾಂಶ
ಎಲ್‌ಕೆಜಿ, ಯುಕೆಜಿ ಮಾದರಿಯ ಮಕ್ಕಳ ಕೊಠಡಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪೋಷಕರ ನೆಮ್ಮದಿಯ ಜೀವನವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ‘ನಮ್ಮ ಮಕ್ಕಳು ನಮ್ಮ ಮನೆ ಮುಂದೆ ಕಲಿಯುತ್ತಿದ್ದಾರೆ’ ಎಂಬ ಪರಿಕಲ್ಪನೆಯೊಂದಿಗೆ ‘ಮಕ್ಕಳ ಮನೆ’ ಎಂಬ ಎಲ್‌ಕೆಜಿ ಹಾಗೂ ಯುಕೆಜಿ ತೆರೆಯಲಾಗಿದ್ದು, ಇದರ ಸದುಪಯೋಗವನ್ನು ಪೋಷಕರು ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹೋಬಳಿಯ ಇತರೆ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಮಕ್ಕಳ ಮನೆ ತೆರೆಯುವ ಉದ್ದೇಶ ಹೊಂದಿರುವುದಾಗಿ ಶಾಸಕ ಎ.ಮಂಜು ತಿಳಿಸಿದರು.
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಬಿದರಕ್ಕ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ‘ಮಕ್ಕಳ ಮನೆ’ ಎಂಬ ಎಲ್‌ಕೆಜಿ ಹಾಗೂ ಯುಕೆಜಿ ಕೊಠಡಿ ಉದ್ಘಾಟಿಸಿ ಮಾತನಾಡಿದರು. ‘ಅರಕಲಗೂಡು ಕ್ಷೇತ್ರದಲ್ಲಿ ೧೨ ‘ಮಕ್ಕಳ ಮನೆ’ ತೆರೆಯಲಾಗುತ್ತಿದ್ದು, ಅದರಲ್ಲಿ ಹಳ್ಳಿಮೈಸೂರು ಹೋಬಳಿಯ ಬಿದರಕ್ಕ ಹಾಗೂ ಓಡನಹಳ್ಳಿಯಲ್ಲಿ ‘ಮಕ್ಕಳ ಮನೆ’ ತೆರೆಯಲಾಗುತ್ತಿದೆ. ಮುಖ್ಯವಾಗಿ ಸರ್ಕಾರದ ಅನುದಾನವಿಲ್ಲದೇ ತೆರಯಲಾಗಿರುವ ಈ ಶಾಲೆಗೆ ಶಾಲೆಯ ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು, ಮುಖ್ಯ ಶಿಕ್ಷಕರ ಜತೆಗೆ ನಾನು, ನನ್ನ ಪತ್ನಿಗೆ ಬರುವ ಸಂಬಳ ಪೂರ್ತಿ ಅಂದರೆ ೨೦ ಲಕ್ಷ ರು. ಮಕ್ಕಳ ಶ್ರೇಯಸ್ಸಿಗೆ ಮೂಲ ಸೌಕರ್ಯ ಕಲ್ಪಿಸುವ ಸಲುವಾಗಿ ನೀಡುತ್ತೇವೆ’ ಎಂದು ಹೇಳದರು.ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಉತ್ತೇಜಿಸುವ ಸಲುವಾಗಿ ಈ ಯೋಜನೆಯನ್ನು ವೈಯಕ್ತಿಕವಾಗಿ ರೂಪಿಸಲಾಗಿದೆ. ಶಿಕ್ಷಕರು ೯.೪೫ ರಿಂದ ೧ ಗಂಟೆ ತನಕ ಬೋಧನೆ ನೀಡುತ್ತಾರೆ. ಮುಂದಿನ ದಿನಗಳಲ್ಲಿ ನಾಲ್ಕನೇ ತರಗತಿ ತನಕ ಪಾಠ ಮಾಡಿ, ಶಾಲೆಯಲ್ಲಿ ಬೇರೆ ತರಗತಿಯಲ್ಲಿ ಬೋಧಿಸಲು ತೆರಳುತ್ತಾರೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರವು ಪಂಚಾಯಿತಿ ಒಂದಕ್ಕೆ ಸಮುದಾಯ ಶಾಲೆ ತೆರೆಯುವುದು ಮತ್ತು ಒಂದನೇ ತರಗತಿಯಿಂದ ಹತ್ತನೇ ತರಗತಿ ತನಕ ಸಲಕ ಸೌಕರ್ಯ ಒದಗಿಸಬೇಕು. ಈ ಉದ್ದೇಶದಿಂದ ಸರ್ಕಾರದ ಗಮನ ಸೆಳೆಯುವ ಸಲುವಾಗಿ ರಾಜ್ಯದಲ್ಲಿ ಪ್ರಥಮವಾಗಿ ಈ ರೀತಿಯ ಶಾಲೆ ತೆರಯಲಾಗಿದ್ದು, ಬೋರ್ಡ್, ಚೇರ್, ಡೆಸ್ಕ್ ಹಾಗೂ ಶಿಕ್ಷಕರಿಗೆ ಟೇಬಲ್ ಹಾಗೂ ಚೇರ್ ಒದಗಿಸಿದ್ದು, ಈ ಯೋಜನೆ ಸಕಾರಗೊಂಡಲ್ಲಿ ರಾಜ್ಯಕ್ಕೆ ಮಾದರಿ ಕ್ಷೇತ್ರವಾಗಲಿದೆ ಎಂದರು.ಶಾಲಾ ಕಟ್ಟಡಗಳು ಶಿಥಿಲಗೊಂಡ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು ಮತ್ತು ಅನುದಾನ ಬಿಡುಗಡೆಯಾಗಿದ್ದು, ಮಕ್ಕಳ ಸಂಖ್ಯೆ ಹೆಚ್ಚಿರುವ ಶಾಲೆಗಳ ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ಶಿಥಿಲಗೊಂಡ ಕಟ್ಟಡಗಳ ದುರಸ್ತಿ ಕಾರ್ಯ ಮಾಡಿಸುವುದಾಗಿ ತಿಳಿಸಿದರು.
ಬಿದರಕ್ಕ ಗ್ರಾಪಂ ಅಧ್ಯಕ್ಷೆ ಹೇಮಲತಾ, ಬಿಇಒ ಸೋಮಲಿಂಗೇಗೌಡ, ಜಿಪಂ ಎಂಜಿನಿಯರ್ ಪ್ರಶಾಂತ್, ಮುಖ್ಯ ಶಿಕ್ಷಕ ಜವರಾಯಿ, ಇಸಿಒ ಶಿವಸ್ವಾಮಿ ಹಾಗೂ ಕಾಂತರಾಜು, ಬಿಆರ್‌ಪಿ ಪರಮೇಶ್, ಸಿಆರ್‌ಪಿ ನಟೇಶ್, ಶಿಕ್ಷಕರಾದ ರವಿಕುಮಾರ್, ದೇವಮ್ಮ, ಇತರರು ಇದ್ದರು.