ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ವಿದ್ಯಾರ್ಥಿಗಳು ತಮ್ಮ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ವ್ಯಕ್ತಿತ್ವ ತಮ್ಮದಾಗಿಸಿಕೊಳ್ಳಬೇಕು ಎಂದು ವಿಡಿಸಿಸಿ ಬ್ಯಾಂಕಿನ ನಿರ್ದೇಶಕಿ, ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಯುಕ್ತಾ ಪಾಟೀಲ ಹೇಳಿದರು.ಪಟ್ಟಣದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಬಸವೇಶ್ವರ ದೇವಾಲಯ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಂಗಳವಾರ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧನೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲಾ ಹಂತದಲ್ಲಿ ಪ್ರಜಾಪ್ರಭುತ್ವದಲ್ಲಿ ನಡೆಯುವ ಚುನಾವಣೆಯ ಮಾದರಿಯಂತೆ ಚುನಾವಣೆಯ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಯಾವ ರೀತಿ ಆಯ್ಕೆಯಾಗುತ್ತಾರೆ?. ಆಯ್ಕೆಯಾದ ಜನಪ್ರತಿನಿಧಿಗಳು ಯಾವ ರೀತಿಯಾಗಿ ತಮ್ಮ ಕಾರ್ಯ ಮಾಡುತ್ತಾರೆ ಎಂಬ ಕಲ್ಪನೆ ಬರುವಂತೆ ಮಾಡುವುದು ತುಂಬಾ ಮುಖ್ಯವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ವಿಶೇಷತೆ ಗೊತ್ತಾಗುತ್ತದೆ. ವಿದ್ಯಾರ್ಥಿಗಳಿಗೆ ನಾಯಕರಾಗುವ ಗುಣವನ್ನು ಮೈಗೂಡಿಸಿಕೊಳ್ಳಲು ಇದು ಪೂರಕವಾಗುತ್ತದೆ ಎಂದು ತಿಳಿಸಿದರು.ಶಾಲಾ ಸಲಹಾ ಸಮಿತಿಯ ಅಧ್ಯಕ್ಷ ಅನಿಲ ಅಗರವಾಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಸಲಹಾ ಸಮಿತಿಯ ಉಪಾಧ್ಯಕ್ಷ ಎಸ್.ಎಸ್.ಝಳಕಿ, ಶಾಲಾ ಸಲಹಾ ಸಮಿತಿಯ ಸದಸ್ಯರಾದ ಎಂ.ಜಿ.ಆದಿಗೊಂಡ, ಸದಾನಂದ ಯಳಮೇಲಿ, ಸುರೇಶಗೌಡ ಪಾಟೀಲ, ಸೋಮನಾಥ ಪಾಟೀಲ, ಶೈಲಶ್ರೀ ತೇರದಾಳಮಠ, ಪ್ರಭಾವವತಿ ರಾಯಗೊಂಡ, ಲಕ್ಷ್ಮೀ ಮಾಲಗಾರ, ಬೇಬಿ ಗಣಾಚಾರಿ, ಲಕ್ಷ್ಮೀ ಹಿಟ್ನಳ್ಳಿ ಇತರರು ಇದ್ದರು. ಶಾಲೆಯ ಮುಖ್ಯಗುರುಮಾತೆ ಆರ್.ಎಂ.ರೋಣದ ಅವರು ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಎಸ್.ಎಂ.ಬಿಸ್ಟಗೊಂಡ, ಮಂಜುಳಾ ಮುಕಾರ್ತಿಹಾಳ ಪ್ರಾರ್ಥಿಸಿದರು. ಉಮೇಶ ಗೊಳಸಂಗಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಮಹೇಶ ಸಂಗಮ, ವಿಜಯ ರಾಠೋಡ ಅವರು ಪಥಸಂಚಲನ ನಡೆಸಿಕೊಟ್ಟರು. ಶ್ರೀದೇವಿ ಸಾಳುಂಕೆ ನಿರೂಪಿಸಿದರು.