ಸಾರಾಂಶ
ಯಳಂದೂರಿನಲ್ಲಿ ಮುಖಂಡ ಯರಿಯೂರು ಸಿ.ರಾಜಣ್ಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಯಳಂದೂರು
ಮೇ ೧೭ರಂದು ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಜಯಂತಿಯನ್ನು ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಎಲ್ಲ ಸಂಘ ಸಂಸ್ಥೆ ಪದಾಧಿಕಾರಿಗಳು, ಗ್ರಾಮಸ್ಥರು ಈ ಉತ್ಸವದಲ್ಲಿ ಭಾಗವಹಿಸಬೇಕು ಎಂದು ಯರಿಯೂರು ಸಿ.ರಾಜಣ್ಣ ಕರೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಒಂದಲ್ಲಾ ಒಂದು ಕಾರಣದಿಂದ ಅಂಬೇಡ್ಕರ್ ಜಯಂತಿ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ವರ್ಷ ಡಾ.ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಅದ್ಧೂರಿ ಜಯಂತಿ ಆಚರಣೆ ನಡೆಯಲಿದೆ. ಈಗಾಗಲೇ ತಾಲೂಕಿನ ಪ್ರತಿ ಗ್ರಾಮಗಳ ದಲಿತ ಮುಖಂಡರು, ಯಜಮಾನರು, ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರಿಗೆ ಆಮಂತ್ರಣ ನೀಡಲಾಗಿದ್ದು ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.ಸೇವಾ ಸಮಿತಿಯ ಕೆಸ್ತೂರು ಸಿದ್ದರಾಜು ಮಾತನಾಡಿ, ಬೆಳಿಗ್ಗೆ ೯ ಗಂಟೆಗೆ ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಷಡಕ್ಷರ ದೇವರ ಗದ್ದುಗೆಯಿಂದ ಅಂಬೇಡ್ಕರ್ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ಮಧ್ಯಾಹ್ನ ೧ ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಾನ್ನಿಧ್ಯವನ್ನು ನಳಂದ ಬುದ್ಧವಿಹಾರದ ಬೋಧಿರತ್ನ ಬಂತೇಜಿ ವಹಿಸಲಿದ್ದಾರೆ. ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಸುನೀಲ್ ಬೋಸ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ದರ್ಶನ್‌ಧ್ರುವನಾರಾಯಣ, ಮಾಜಿ ಶಾಸಕ ಎನ್. ಮಹೇಶ್, ಜಿ.ಎನ್. ನಂಜುಂಡಸ್ವಾಮಿ, ಎಸ್. ಬಾಲರಾಜು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಪಪಂ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಕೊಮಾರನಪುರ ಪುಟ್ಟರಾಜು, ಅಗರ ಲಿಂಗರಾಜು, ಯರಗಂಬಳ್ಳಿ ಮಲ್ಲು, ಗಂಗವಾಡಿ ನಾರಾಯಣ, ದುಗ್ಗಹಟ್ಟಿ ಮಾದೇಶ್, ರೇವಣ್ಣ, ನಂಜುಂಡಸ್ವಾಮಿ, ಉಮಾಶಂಕರ್, ಯರಿಯೂರು ಎನ್. ನಾಗೇಂದ್ರ ಇದ್ದರು.