ಯಲ್ಲಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಸಂಘಟನೆ ಸಹಯೋಗದಲ್ಲಿ ಬೃಹತ್‌ ರಕ್ತದಾನ ಶಿಬಿರ ನಡೆಯಿತು. ಶಿಬಿರದಲ್ಲಿ ೩೬ ಜನ ರಕ್ತದಾನ ಮಾಡಿದರು.

ಯಲ್ಲಾಪುರ: ಪ್ರತಿಯೊಬ್ಬ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವ ಉಳಿಸುವ ಪುಣ್ಯದ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಯಲ್ಲಾಪುರದ ಕ್ರಿಯೇಟಿವ್ ಕಂಪ್ಯೂಟರ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ತಾಂತ್ರಿಕ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಯುವಜನತೆ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ, ಕ್ರಿಯೇಟಿವ್ ಕಂಪ್ಯೂಟರ್ಸ್‌ ನಿರ್ದೇಶಕ ಶ್ರೀನಿವಾಸ ಮುರ್ಡೇಶ್ವರ ಮಾತನಾಡಿ, ಶಿಕ್ಷಣದ ಜತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಇಂದಿನ ದಿನಗಳಲ್ಲಿ ಅಪಘಾತಗಳು ಹಾಗೂ ತುರ್ತು ಚಿಕಿತ್ಸೆಗಳ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಎಷ್ಟೋ ಜೀವಗಳು ಅಪಾಯಕ್ಕೆ ಸಿಲುಕುತ್ತಿವೆ. ಅಂತಹ ಸಂದರ್ಭಗಳಲ್ಲಿ ಈ ಶಿಬಿರದ ಮೂಲಕ ಸಂಗ್ರಹವಾಗುವ ರಕ್ತ ಆಸರೆಯಾಗಲಿದೆ ಎಂದರು.

ಕಿಮ್ಸ್‌ ವೈದ್ಯಕೀಯ ಅಧಿಕಾರಿ ಡಾ. ಮಾಲಿನಿ ಮಾತನಾಡಿ, ರಕ್ತದಾನದ ಕುರಿತಾದ ತಪ್ಪುಕಲ್ಪನೆಗಳನ್ನು ಹೋಗಲಾಡಿಸಿ, ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲಾಗುವ ಧನಾತ್ಮಕ ಪರಿಣಾಮಗಳ ಕುರಿತು ಮಾಹಿತಿ ನೀಡಿದರು.

ಐಕ್ಯೂಎಸಿ ಸಂಚಾಲಕ ಡಾ. ಓಂಪ್ರಕಾಶ್ ನಾಯಕ್ ಮಾತನಾಡಿದರು. ಯೂತ್ ರೆಡ್‌ಕ್ರಾಸ್ ಸಂಚಾಲಕ ಡಾ. ರವಿ ಶೇಷಗಿರಿ ಸ್ವಾಗತಿಸಿ, ವಂದಿಸಿದರು. ಶಿಬಿರದಲ್ಲಿ ೩೬ ಜನ ರಕ್ತದಾನ ಮಾಡಿದರು. ಕಿಮ್ಸ್ ಆಸ್ಪತ್ರೆಯ ನುರಿತ ತಜ್ಞರ ತಂಡವು ರಕ್ತ ಸಂಗ್ರಹಣೆಯ ಮೇಲ್ವಿಚಾರಣೆ ನಡೆಸಿತು. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು.

ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎನ್.ಎಸ್.ಎಸ್. ಸ್ವಯಂಸೇವಕರು ಹಾಗೂ ಕ್ರಿಯೇಟಿವ್ ಕಂಪ್ಯೂಟರ್ ಇನ್‌ಸ್ಟಿಟ್ಯೂಟ್‌ನ ಸಿಬ್ಬಂದಿ ಪಾಲ್ಗೊಂಡಿದ್ದರು.