ಮತದಾನದಲ್ಲಿ ಪಾಲ್ಗೊಳ್ಳಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸಿ

| Published : Apr 30 2024, 02:11 AM IST

ಸಾರಾಂಶ

ಅಭ್ಯರ್ಥಿಗಳು ತಮ್ಮ ನಾಮ ನಿರ್ದೇಶನದ ಸ್ಥಿತಿ, ಚುನಾವಣಾ ಪ್ರಚಾರಕ್ಕಾಗಿ ಕೋರಿರುವ ಅನುಮತಿಗಳ ಕುರಿತು ಮಾಹಿತಿ

ರಿಯಾಜಅಹ್ಮದ ಎಂ. ದೊಡ್ಡಮನಿ ಡಂಬಳ

ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮತಗಟ್ಟೆಯ ವಿವರ, ಚುನಾವಣಾ ವೇಳಾಪಟ್ಟಿ, ಅಭ್ಯರ್ಥಿಗಳ ವಿವರ ಬೆರಳ ತುದಿಯಲ್ಲೇ ಪಡೆಯಬಹುದು. ಚುನಾವಣೆಗೆ ಸಂಬಂಧಿಸಿದ ವಿವಿಧ ಆ್ಯಪ್‌ಗಳ ಮೂಲಕ ಎಲ್ಲ ಮಾಹಿತಿ ಪಡೆಯಬಹುದು.

ಚುನಾವಣಾ ಆಯೋಗವು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಾಗೂ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವುದಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಕಟ್ಟುನಿಟ್ಟಾಗಿ ನೀತಿಸಂಹಿತೆ ಪಾಲನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಆ್ಯಪ್‌ಗಳನ್ನು ಸಿದ್ಧಪಡಿಸಲಾಗಿದೆ.ಈ ಆ್ಯಪ್‌ಗಳು ಮತದಾನ ಪ್ರಕ್ರಿಯೆ ಸುಗಮಗೊಳಿಸಲು ಹಾಗೂ ಅಕ್ರಮ ತಡೆಯಲು ನೆರವಾಗುತ್ತಿವೆ.

ಅಂಗವಿಕಲರು ಹಾಗೂ ಹಿರಿಯರಿಗೆ ಗಾಲಿಕುರ್ಚಿ ವ್ಯವಸ್ಥೆ, ಆಸ್ಪತ್ರೆ, ಪೊಲೀಸ್ ಠಾಣೆ ಈ ಎಲ್ಲ ಇಲಾಖೆಗಳ ಮಾಹಿತಿ ಈ ಆ್ಯಪ್‌ಗಳಲ್ಲಿ ದೊರೆಯುತ್ತವೆ. ಚುನಾವಣೆಯ ಬಳಿಕವು ಆಸ್ಪತ್ರೆ, ಪೊಲೀಸ್‌ ಠಾಣೆ ವಿವರ ಸೇರಿ ಎಲ್ಲ ಉಪಯುಕ್ತವಾದ ಮಾಹಿತಿಗಳು ಸುಲಭವಾಗಿ ದೊರೆಯುತ್ತವೆ.

ಗೂಗಲ್ ಪ್ಲೇಸ್ಟೋರ್: ಗೂಗಲ್ ಪ್ಲೇಸ್ಟೋರ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಲಭ್ಯವಿರುವ ಆ್ಯಪ್‍ಗಳು- ಸಿವಿಜಿಲ್, ಸುವಿಧಾ ಕ್ಯಾಂಡಿಡೇಟ್, ಕೆವೈಸಿ, ವೋಟರ್‌ ಹೆಲ್ಪ್‌ಲೈನ್‌, ವೋಟರ್‌ ಟರ್ನ್‌ಔಟ್‌, ಸಕ್ಷಮ ಮತ್ತು ಇಸಿಐ, ವೋಟರ್‌ ಆ್ಯಪ್‌ಗಳು ಮತದಾರರು ತಮ್ಮ ಕ್ಷೇತ್ರ, ಮತದಾನದ ಬೂತ್, ತಲುಪುವ ಕುರಿತು ಮಾಹಿತಿ ಪಡೆದುಕೊಳ್ಳಲು ಎಲ್ಲ ರೀತಿಯಿಂದ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ ಚುನಾವಣಾ ಅಧಿಕಾರಿಗಳು.

ಸಿವಿಜಿಲ್‌ ಆ್ಯಪ್: ಇದರ ಸಹಾಯದಿಂದ ಮತದಾರರು ಮತಗಟ್ಟೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಮತ್ತು ಅಕ್ರಮ ನಡೆಯುತ್ತಿದ್ದರೆ ಸುಲಭವಾಗಿ ದೂರು ನೀಡಬಹುದು. ಅಭ್ಯರ್ಥಿ ಯಾರನ್ನಾದರೂ ಮತದಾನಕ್ಕಾಗಿ ಆಮಿಷ ಒಳಪಡುಸುತ್ತಿರುವುದು ಕಂಡುಬಂದರೆ ಅದನ್ನು ಬಹಿರಂಗಪಡಿಸಬಹುದು. ಪೋಟೋ, ವಿಡಿಯೋ, ಆಡಿಯೋ ಅಪ್‌ಲೋಡ್ ಮಾಡುವುದು, ತಕ್ಷಣ ದೂರು ದಾಖಲಿಸುವ ಫೀಚರ್ಸ್ ಸೌಲಭ್ಯ ಇದರಲ್ಲಿ ಇದೆ. ಇದರಲ್ಲಿ ದೂರು ಸಲ್ಲಿಸಿದ 100 ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡಲಾಗುತ್ತದೆ.

ಸುವಿಧಾ ಆ್ಯಪ್: ಚುನಾವಣಾ ಆಯೋಗ ಸುವಿಧಾ ಅಭ್ಯರ್ಥಿ ಆ್ಯಪ್ ಮೂಲಕ ಬಿಡುಗಡೆ ಮಾಡಿದೆ. ಈ ಆ್ಯಪ್‌ನಲ್ಲಿ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನಾಮಪತ್ರ ಸಲ್ಲಿಸುವ ಅವಕಾಶ ನೀಡಲಾಗಿದೆ. ಅಲ್ಲದೆ ಅಪ್ಲಿಕೇಶನ ಲಾಗ್‍ಇನ್ ಆದ ಮೇಲೆ ಅಭ್ಯರ್ಥಿಗಳು ಅಫಿಡವಿಟ್, ನಾಮನಿರ್ದೇಶನ, ಪ್ರಪೋಸರ್ ಮಾಹಿತಿ, ಅಭ್ಯರ್ಥಿಗಳು ತಮ್ಮ ನಾಮ ನಿರ್ದೇಶನದ ಸ್ಥಿತಿ, ಚುನಾವಣಾ ಪ್ರಚಾರಕ್ಕಾಗಿ ಕೋರಿರುವ ಅನುಮತಿಗಳ ಕುರಿತು ಮಾಹಿತಿ ತಿಳಿಯಬಹುದು.

ನೋ ಯುವರ್ ಕ್ಯಾಂಡಿಡೇಟ್ ಎಂಬ ಹೆಸರಿನ ಈ ಅಪ್ಲಿಕೇಶನ್ ಮೂಲಕ ಮತದಾರರು ಅಭ್ಯರ್ಥಿ ಕುರಿತು ಎಲ್ಲ ಮಾಹಿತಿ ಪಡೆಯಬಹುದು. ಅಭ್ಯರ್ಥಿ ಚುನಾವಣಾ ಅಧಿಕಾರಿಗೆ ನೀಡಿದ ಮಾಹಿತಿಯನ್ನು ಈ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿರುತ್ತದೆ. ಅಭ್ಯರ್ಥಿಯ ಅಪರಾಧ ಇತಿಹಾಸ, ಆಸ್ತಿ ವಿವರ, ಶಿಕ್ಷಣ ಈ ಮಾಹಿತಿಯನ್ನು ಸಾಮಾನ್ಯ ನಾಗರಿಕರು ಈ ಆ್ಯಪ್ ಮೂಲಕ ಮತದಾರರು ಅಭ್ಯರ್ಥಿಯ ಮಾಹಿತಿ ಪಡೆಯಬಹುದು.

ವೋಟರ್ ಹೆಲ್ಪ್‌ಲೈನ್‌ : ಈ ಆ್ಯಪ್ ಪ್ಯೂಚರ್ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಮತ್ತು ಆಧಾರ ನೋಂದಣಿಯ ಮೂಲಕ ಮತದಾರರ ಐಡಿ ಲಿಂಕ್ ಮಾಡಬಹುದು.

ಈ ಆ್ಯಪ್‌ ಮೂಲಕ ಸಾಮಾನ್ಯ ಜನರು ಮತದಾನದಂದು ಮತದಾನದ ಶೇಕಡಾವಾರು ಪ್ರಮಾಣ ಪರಿಶೀಲಿಸಬಹುದು. ಇದರಿಂದ ಮತದಾನದ ಮಾದರಿ ತಿಳಿಯಲಿದೆ.

ಅಂಗವಿಕಲ ಮತದಾರರು ಈಗ ಸುಲಭವಾಗಿ ಮತ ಚಲಾಯಿಸಬಹುದು. ಈ ಅಪ್ಲಿಕೇಶನ್ ಅಂಗವಿಕಲರಿಗೆ ಸಹಾಯ ಮಾಡುತ್ತದೆ. ಈ ಮೂಲಕ ಅಂಗವಿಕಲರು ನೋಂದಾಯಿಸಿಕೊಳ್ಳಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಆ್ಯಪ್ ಮೂಲಕ ಅಂಗವಿಕಲರು ತಮ್ಮ ಮನೆಯಲ್ಲಿಯೇ ಕುಳಿತು ತಮ್ಮ ಹಕ್ಕಾದ ಮತದಾನ ಮಾಡುವ ಸೌಲಭ್ಯ ಪಡೆಯಬಹುದು.

ವೋಟರ್‌ ಅಪ್ಲಿಕೇಶನ್: ಈ ಆ್ಯಪ್‌ ಬಳಸಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು, ಮತದಾನ ಕೇಂದ್ರದ ವಿವರಗಳನ್ನು ಹುಡುಕಬಹುದು. ಮತದಾರರು ತಮ್ಮ ಇ-ಎಪಿಕ್ ಕಾರ್ಡ್‌ ಡೌನ್‌ಲೋಡ್‌ ಮಾಡಬಹುದು. ಈ ಅಪ್ಲಿಕೇಶನ್ ಮೂಲಕ ಒಬ್ಬ ವ್ಯಕ್ತಿ ತನ್ನ ವೋಟರ್ ಐಡಿಯನ್ನು ಮನೆಯಲ್ಲಿಯೆ ಕುಳಿತು ಪಡೆಯಬಹುದು.

ಮನುಷ್ಯನಿಗೆ ಗಿಡದಿಂದ ಹೊರಸೂಸುವ ಆಮ್ಲಜನಕ ಎಷ್ಟು ಮುಖ್ಯವೋ ಪ್ರಜಾಪ್ರಭುತ್ವದ ನೆಲೆಗಟ್ಟನ್ನು ಗಟ್ಟಿಗೊಳಿಸುವ ಚುನಾವಣೆ ಅಷ್ಟೇ ಮುಖ್ಯ. ಮತದಾನದ ಪವಿತ್ರ ಹಬ್ಬದಲ್ಲಿ ಯುವಕರು, ಕಾರ್ಮಿಕರು, ರೈತರು, ಉದ್ಯೋಗಿಗಳು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಆಫ್‌ಎಫ್‌ಒ ವೀರೇಂದ್ರ ಮರಿಬಸನ್ನವರ ಹೇಳಿದರು.