ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಾಂಗ್ರೆಸ್ ಅನ್ನು ತಳಮಟ್ಟದಿಂದ ಸದೃಢವಾಗಿ ಕಟ್ಟುವ ಕಾರ್ಯದಲ್ಲಿ ಕಾರ್ಯಕರ್ತರು ಸಕ್ರಿಯರಾಗಬೇಕು. ಇದಕ್ಕಾಗಿಜಿಲ್ಲೆ ಮತ್ತು ತಾಲೂಕು ಘಟಕಗಳ ಅಧ್ಯಕ್ಷರ ಆಯ್ಕೆಯನ್ನು ಕಾರ್ಯಕರ್ತರೇ ನೇರವಾಗಿ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಎಐಸಿಸಿ ವೀಕ್ಷಕ ಸೈಮನ್ ಅಲೆಕ್ಸ್ ತಿಳಿಸಿದರು.
ಪಟ್ಟಣದ ಹೋಟೆಲ್ ರಾಮದಾಸ್ ಸುಲೋಚನಮ್ಮ ಪಾರ್ಟಿ ಹಾಲ್‌ನಲ್ಲಿ ಪಕ್ಷದಿಂದ ಆಯೋಜಿಸಿದ್ದ ಸಂಘಟನ ಸೃಜನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಎಲ್ಲಾ ರಾಜ್ಯಗಳಲ್ಲೂ ಕಾರ್ಯಕರ್ತರ ಮೂಲಕ ಪಕ್ಷವನ್ನು ಸಂಘಟಿಸುವ ಏಕೈಕ ಉದ್ದೇಶ ಮಾಡಲಾಗಿದೆ. ಅಹಮಾದಬಾದ್ ಸಭೆಯಲ್ಲಿ ಕಾಂಗ್ರೆಸ್ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು.ಕಾರ್ಯಕರ್ತರ ಮೂಲಕ ಪಕ್ಷದ ನಾಯಕತ್ವ ರೂಪುಗೊಳ್ಳಬೇಕು ಎನ್ನುವುದು ನಮ್ಮ ಮೂಲ ಆಶಯ. ನಾಯಕರನ್ನು ಆಧರಿಸಿ ಪಕ್ಷ ಕಟ್ಟಿದರೆ ಅವರು ಪಕ್ಷಾಂತರ ಮಾಡಿದರೆ ಅವರ ಹಿಂದೆ ಅವರ ಹಿಂಬಾಲಕರೂ ಪಕ್ಷ ತೊರೆಯುತ್ತಾರೆ. ಅದಕ್ಕಾಗಿ ಕಾರ್ಯಕರ್ತರು ನಾಯಕತ್ವದ ಶಕ್ತಿಯಾಗಬೇಕು ಎಂದರು.
ನಾಯಕನಾದವನು ಪಕ್ಷ ತೊರೆದರೂ ಕಾರ್ಯಕರ್ತರು ಪಕ್ಷದಲ್ಲಿ ಉಳಿಯುತ್ತಾರೆ. ಪ್ರಸ್ತುತ ಕಾರ್ಯಕರ್ತರ ಮೂಲಕ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸುವ ಜವಾಬ್ದಾರಿಯನ್ನು ಪಕ್ಷ ನನಗೆ ವಹಿಸಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಯಾರಾಗಬೇಕು ಎನ್ನುವ ಅಭಿಪ್ರಾಯವನ್ನು ಕಾರ್ಯಕರ್ತರೇ ನೀಡುವಂತೆ ಮನವಿ ಮಾಡಿದರು.
ಪಕ್ಷದ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಇದು ಅಭಿಪ್ರಾಯ ಸಂಗ್ರಹಿಸುವ ಕಾರ್ಯವಾಗಿದೆ. ಈ ಅಭಿಪ್ರಾಯವನ್ನು ಗೌಪ್ಯವಾಗಿಡಲಾಗುವುದು. ಕಾರ್ಯಕರ್ತರು ಮುಕ್ತವಾಗಿ ತಮ್ಮ ಅಭಿಪ್ರಾಯ ನೀಡಬೇಕು ಎಂದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಕಾರ್ಯಕರ್ತರ ಅಭಿಪ್ರಾಯ ಪಡೆದು ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಸಾಮಾನ್ಯ ಕಾರ್ಯಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟಿಸಬಲ್ಲ ವ್ಯಕ್ತಿಗಳ ಬಗ್ಗೆ ಪೂರ್ಣ ಅರಿವು ಇರುವುದಿಲ್ಲ. ಜಿಲ್ಲಾ ಅಧ್ಯಕ್ಷರಾಗಲು ಬಯಸುವ ವ್ಯಕ್ತಿಗಳ ಹೆಸರನ್ನು ಪಡೆದು ಅವರಲ್ಲಿ ಅರ್ಹರನ್ನು ಆಯ್ಕೆ ಮಾಡುವಂತೆ ಕಾರ್ಯಕರ್ತರಿಗೆ ಆಯ್ಕೆ ಹಕ್ಕು ಕೊಟ್ಟಿದ್ದರೆ ಚೆನ್ನಾಗಿತ್ತು ಎಂದು ಸಲಹೆ ನೀಡಿದರು.ಸಭೆಯಲ್ಲಿ ಎಐಸಿಸಿ ಪ್ರತಿನಿಧಿಗಳಾದ ಗೋಪಾಲಕೃಷ್ಣ, ಸಿದ್ದರಾಜು, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಮುಖಂಡ ಚಿದಂಬರ್, ಮುಖಂಡರಾದ ಬಿ.ಎಲ್.ದೇವರಾಜು, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಕುಮಾರ್, ಮಹಿಳಾ ಘಟಕದ ಆದಿಹಳ್ಳಿ ಮೀನಾಕ್ಷಿ ಇದ್ದರು.