ಭಾವಿ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಮ್ಮ ಪ್ರಪ್ರಥಮ ಪರ್ಯಾಯೋತ್ಸವದ ಸಂದರ್ಭದಲ್ಲಿ ಹಸಿರು ಹೊರೆಕಾಣಿಕೆ ಸಂಗ್ರಹಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಉಡುಪಿ: ಭಾವಿ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಮ್ಮ ಪ್ರಪ್ರಥಮ ಪರ್ಯಾಯೋತ್ಸವದ ಸಂದರ್ಭದಲ್ಲಿ ನೆರೆಯುವ ಲಕ್ಷಾಂತರ ಮಂದಿ ಭಕ್ತರಿಗೆ ಅನ್ನದಾನಕ್ಕೆ ಪೂರಕವಾಗಿ ಹಸಿರು ಹೊರೆಕಾಣಿಕೆ ಸಂಗ್ರಹಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶಯದಂತೆ ಮೊದಲ ದಿನ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಉಡುಪಿ ಜಿಲ್ಲೆ ವತಿಯಿಂದ ಬೃಹತ್ ಹೊರೆಕಾಣಿಕೆ ಸಲ್ಲಿಕೆ ನಡೆಯಿತು. ಜೋಡುಕಟ್ಟೆಯಲ್ಲಿ ಈ ಭವ್ಯ ಹೊರೆ ಕಾಣಿಕೆ ಮೆರವಣಿಗೆಗೆ ಪರ್ಯಾಯೋತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.ಶಿರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯರು, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಯದರ್ಶಿಗಳಾದ ಮೋಹನ್ ಭಟ್, ಮಧುಕರ ಮುದ್ರಾಡಿ, ಹೊರೆಕಾಣಿಕೆ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ, ಸ್ವಾಗತ ಸಮಿತಿಯ ಪ್ರಮುಖರಾದ ಶ್ರೀಕಾಂತ್ ನಾಯಕ್ ಅಲೆವೂರು, ಉದಯ ಶೆಟ್ಟಿ ಇನ್ನಾ, ವಿಜಯ ಕುಮಾರ್ ಕೊಡವೂರು, ಶ್ರೀಕಾಂತ್ ಉಪಾಧ್ಯಾಯ, ರೇಷ್ಮಾ ಉದಯ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರಾದ ಸತ್ಯಾನಂದ ನಾಯಕ್, ನೀರೆ ಕೃಷ್ಣ ಶೆಟ್ಟಿ, ಕಟ್ಟಿಂಗೇರಿ ದೇವದಾಸ ಹೆಬ್ಬಾರ್, ಗೀತಾ ವಾಗ್ಳೆ, ಶಿವಕುಮಾರ್ ಅಂಬಲಪಾಡಿ ಮುಂತಾದವರು ಉಪಸ್ಥಿತರಿದ್ದರು.

ಮೊದಲ ದಿನದ ಹೊರೆಕಾಣಿಕೆಯಲ್ಲಿ ಜಿಲ್ಲೆಯ ಮೂಲೆಮೂಲೆಗಳಿಂದ 110 ವಾಹನಗಳಲ್ಲಿ 40,000 ತೆಂಗಿನಕಾಯಿ, 205 ಕ್ವಿಂಟಾಲ್ ಅಕ್ಕಿ, 105 ಕ್ವಿಂಟಾಲ್ ಬೆಲ್ಲ, 10 ಕ್ವಿಂಟಾಲ್ ಸಕ್ಕರೆ, 2.50 ಕ್ವಿಂಟಾಲ್ ಬೇಳೆ, 15 ಕ್ವಿಂಟಾಲ್ ತರಕಾರಿ, 700 ಲೀಟರ್ ಎಣ್ಣೆ - ತುಪ್ಪಗಳನ್ನು ಜೋಡುಕಟ್ಟೆಯಿಂದ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಉಗ್ರಾಣಕ್ಕೆ ಭವ್ಯ ಮೆರವಣಿಗೆಯಲ್ಲಿ ತಂದು ಶಿರೂರು ಮಠಕ್ಕೆ ಒಪ್ಪಿಸಲಾಯಿತು.