ಸಾರಾಂಶ
ಶಿರಾಳಕೊಪ್ಪ: ಬೆನ್ನುಹುರಿಯು ಮನುಷ್ಯನ ದೇಹದ ಪ್ರಮುಖ ಅಂಗ. ಇದು ಬೆನ್ನಿನ ಮಧ್ಯ ಭಾಗದಲ್ಲಿ ಮೆದುಳಿನಿಂದ ಗುದದ್ವಾರವರೆಗೆ ೩೩ ಹುರಿಗಳ ಜೋಡಣೆಯೊಂದಿಗೆ ಬೆಸೆದಿದೆ ಎಂದು ಶಿರಾಳಕೊಪ್ಪ ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹಲಿಂಗ ಕೊಳ್ಳೆ ಹೇಳಿದರು.
ಪಟ್ಟಣದ ಸಾವರ್ಜನಿಕ ಸಮುದಾಯ ಆಸ್ಪತ್ರೆಯಲ್ಲಿ ಗುರುವಾರ ಸ್ಥಳೀಯ ಸಮುದಾಯ ಆಸ್ಪತ್ರೆ, ಶಿಕಾರಿಪುರ ತಾಲೂಕು ವೈದ್ಯಾಧಿಕಾರಿಗಳ ಕಚೇರಿ, ಎಚ್‌ಸಿಎಲ್ ಫೌಂಡೇಷನ್ ಮತ್ತು ರಾಣೇಬೆನ್ನೂರಿನ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಆಶ್ರಯದಲ್ಲಿ ಬೆನ್ನುಹುರಿ ಅಪಘಾತದ ವ್ಯಕ್ತಿಗಳಿಗೆ ಸಾಮಾನ್ಯ ಆರೋಗ್ಯ ತಪಾಸಣೆ, ದೈಹಿಕ ವ್ಯಾಯಾಮ ಕುರಿತ 3 ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬೆನ್ನು ಹುರಿಗಳ ಮಧ್ಯಭಾಗದಲ್ಲಿ ಹಗ್ಗದ ರೀತಿಯಲ್ಲಿ ಜ್ಞಾನವಾಹಿನಿ, ಕ್ರಿಯಾವಾಹಿನಿ ಮತ್ತು ಸ್ವಇಚ್ಛೆ ನರಗಳು ದೇಹದ ಇತರ ಎಲ್ಲ ಭಾಗಗಳಿಗೆ ಹರಡಿದೆ. ಇವು ದೇಹದ ಎಲ್ಲ ಭಾಗದಿಂದ ಸಂದೇಶಗಳನ್ನು ತೆಗೆದುಕೊಂಡು ಮೆದುಳಿಗೆ ತಲುಪಿಸಿ, ಪುನಃ ಮೆದುಳಿನಿಂದ ಕಾರ್ಯರೂಪಕ್ಕೆ ತರುವಂತೆ ಮಾಡುತ್ತವೆ. ಅಪಘಾತವಾದಾಗ ಬೆನ್ನುಹುರಿ ನರಗಳಿಗೂ ಹಾನಿಯಾಗುತ್ತದೆ. ಇದರಿಂದ ಮೆದುಳಿಗೆ ಬರುವ ಮತ್ತು ಹೋಗುವ ಸಂಪರ್ಕ ತಪ್ಪಬಲ್ಲದು. ದೇಹದ ಕೆಳಭಾಗದ ಎಲ್ಲ ಕಾರ್ಯಗಳು ಸ್ಥಗಿತಗೊಳ್ಳಬಲ್ಲವು ಎಂದರು.
ಈ ಹಿನ್ನೆಲೆ ಆಸ್ಪತ್ರೆಯಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ ಫಿಜಿಯೋಥೆರಪಿ ಮತ್ತು ಆಪ್ತಸಮಾಲೋಚನೆ, ಒತ್ತಡ ನಿರ್ವಹಣೆ, ಗಾಯಾಳುಗಳಿಗೆ ಡ್ರೆಸ್ಸಿಂಗ್ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶವಿದ್ದು, ಅರ್ಹರು ಸದುಪಯೋಗಕ್ಕೆ ಮುಂದಾಗಬೇಕು ಎಂದರು.ಡಾ. ಸಂತೋಷಕುಮಾರ ಮಾತನಾಡಿ, ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ಪಾಲಿಸಿ ಸಾಮಾನ್ಯ ಜನರಂತೆ ಆತ್ಮವಿಶ್ವಾಸದಿಂದ ಜೀವನ ಸಾಗಿಸಲು ಈ ಕಾರ್ಯಾಗಾರವು ಸಹಾಯಕವಾಗಲಿದೆ ಎಂದು ತಿಳಿಸಿದರು.
ಡಾ. ಸೌಮ್ಯ ಮಾತನಾಡಿ, ಅಪಘಾತಕ್ಕೆ ಒಳಗಾದ ವ್ಯಕ್ತಿಗಳು ಮಾನಸಿಕವಾಗಿ ಎದೆಗುಂದದೇ ಆತ್ಮಸ್ಥೈರ್ಯದಿಂದ ಜೀವನ ಸಾಗಿಸಬೇಕು ಎಂದು ಹೇಳಿದರು.ಕಾರ್ಯಾಗಾರದಲ್ಲಿ ೧೬ ಜನ ಅಪಘಾತವಾದವರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಸಂಸ್ಥೆಯ ಸಂಯೋಜಕ ನಿಂಗಪ್ಪ ಕೆ. ದೊಡ್ಮನಿ ಸಂಸ್ಥೆಯ ಕಾಯರ್ಕ್ರಮದ ಪರಿಚಯ ಮಾಡಿಕೊಟ್ಟರು. ಕುಮಾರಿ ಗೀತಾ ಸ್ವಾಗತಿಸಿ, ಪುಷ್ಪಾವತಿ ನಿರೂಪಿಸಿದರು, ಪ್ರಶಾತ ವಂದಿಸಿದರು.
- - - -೧ಕೆಎಸ್‌ಎಚ್‌ಆರ್೧:ಶಿರಾಳಕೊಪ್ಪ ಸಮುದಾಯ ಆಸ್ಪತ್ರೆಯಲ್ಲಿ ನಡೆದ ಬೆನ್ನುಹುರಿ ಅಪಘಾತವಾದ ವ್ಯಕ್ತಿಗಳಿಗೆ ನಡೆಸಲಾದ ಕಾರ್ಯಾಗಾರವನ್ನು ಸಮುದಾಯ ಅಸ್ಪತ್ರೆ ವೈದ್ಯಾಧಿಕಾರಿ ಡಾ. ಮಹಲಿಂಗ ಕೊಳ್ಳೆ ದೀಪ ಬೆಳಗಿಸಿ ಉದ್ಘಾಟಿಸಿದರು.