ದೇಶ ಭಕ್ತಿ ಬಿಜೆಪಿಗೆ ಸೀಮಿತವಲ್ಲ, ದೇಶವಾಸಿಗಳೆಲ್ಲರೂ ದೇಶ ಭಕ್ತರು

| Published : Feb 10 2024, 01:50 AM IST

ದೇಶ ಭಕ್ತಿ ಬಿಜೆಪಿಗೆ ಸೀಮಿತವಲ್ಲ, ದೇಶವಾಸಿಗಳೆಲ್ಲರೂ ದೇಶ ಭಕ್ತರು
Share this Article
  • FB
  • TW
  • Linkdin
  • Email

ಸಾರಾಂಶ

ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆಗಳ ಜನಸ್ಪಂದನ ಸಭೆ ಮತ್ತು ಗ್ಯಾರಂಟಿ ಸಮಾವೇಶ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಔರಾದ್‌

ಬಿಜೆಪಿಯಲ್ಲಿ ಇರುವವರಷ್ಟೇ ದೇಶ ಭಕ್ತರಲ್ಲ, ದೇಶವಾಸಿಗಳೆಲ್ಲ ದೇಶ ಭಕ್ತರೆಂದು ಕಮಲ ಪಾಳಯ ಒಪ್ಪಿಕೊಳ್ಳಬೇಕು. ಅಷ್ಟಕ್ಕೂ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸಚಿವರು ಸುಳ್ಳನ್ನೇ ಸತ್ಯವೆಂದು ಬಿಂಬಿಸುತ್ತಿರುವುದು ದುರಾದೃಷ್ಟದ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ಶುಕ್ರವಾರ ಇಲ್ಲಿನ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆಗಳ ಜನಸ್ಪಂದನ ಸಭೆ ಮತ್ತು ಗ್ಯಾರಂಟಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನೂ ಕೂಡಾ ಅಪ್ಪಟ ದೇಶ ಭಕ್ತನೇ ಇದ್ದೇನೆ. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಜೆಪಿಗೆ ಕುಟುಕಿದರು.

ಜನ ಸಾಮಾನ್ಯನಿಗೆ ಸ್ಪಂದಿಸುವ ಆಡಳಿತ ನೀಡುವ ಮೂಲಕ ಬಡವರ ಏಳ್ಗೆಗೆ ಶ್ರಮಿಸುತ್ತಿರುವ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳೆಲ್ಲ ಜಾರಿಯಾಗಿ ನುಡಿದಂತೆ ನಡೆದಿದ್ದೇವೆ. ಚುನಾವಣಾ ಪೂರ್ವದಲ್ಲಿಯ ಎಲ್ಲಾ ಭರವಸೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ನಮ್ಮ 5 ಮಹತ್ವಾಕಾಂಕ್ಷಿ ಯೋಜನೆಗಳಿಂದ ಸಾಮಾನ್ಯ ಜನರು. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ ಎಂದರು.

ಗೃಹಲಕ್ಷ್ಮಿ ಯೋಜನೆ ಲಾಭವನ್ನು ನಮ್ಮ ಜಿಲ್ಲೆಯಲ್ಲಿ 3.5ಲಕ್ಷ ಮಹಿಳೆಯರು ಪಡೆಯುತ್ತಿದ್ದಾರೆ. ತಿಂಗಳಿಗೆ 70 ಕೋಟಿ. ವರ್ಷಕ್ಕೆ 800 ಕೋಟಿ ರು.ಗಳು ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ ಮತ್ತು ಗೃಹಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುತ್ತಿದ್ದೇವೆ. ಅನ್ನಭಾಗ್ಯ ಯೋಜನೆಯಡಿ ತಿಂಗಳಿಗೆ 650 ಕೋಟಿ ರು. ವರ್ಷಕ್ಕೆ 7 ಸಾವಿರ ಕೋಟಿ ರು. ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 1.07ಲಕ್ಷ ಮಹಿಳೆಯರು ಪ್ರತಿದಿನ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಎಂದರು.

ನಿರುದ್ಯೋಗ ಭತ್ಯೆಗೆ 5 ಸಾವಿರ ಅರ್ಜಿ:

ಯುವಕರು ನಮ್ಮ ಸಂಪತ್ತು. ಹಾಗಾಗಿ ಪದವಿ ಹಾಗೂ ಡಿಪ್ಲೊಮಾ ಮುಗಿಸಿ 6 ತಿಂಗಳವರೆಗೆ ಉದ್ಯೋಗ ಸಿಗದವರಿಗೆ 2 ವರ್ಷಗಳವರೆಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದ್ದು ಈಗಾಗಲೇ ಬೀದರ್‌ ಜಿಲ್ಲೆಯಲ್ಲಿ 5 ಸಾವಿರ ಯುವಕರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ರಮ ರಾಜ್ಯದಲ್ಲಿ ಜಾರಿಗೆ ಬರುವ ಮುಂಚೆ ನಾನು ಬೀದರ ಜಿಲ್ಲೆಯಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಿದ್ದೆ. ನಂತರ ಇದು ಜಾರಿಗೆ ಬಂದಿತು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರಿಂದ ಜನರ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ವೃದ್ದಾಪ್ಯ ವೇತನ, ಮನಸ್ವಿನಿ, ಮೈತ್ರಿ ಸೇರಿ ಹಲವಾರು ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸ್ಥಳದಲ್ಲಿಯೇ ಪರಿಹಾರ ನೀಡಲು ಅನುಕೂಲವಾಗುತ್ತದೆ ಎಂದರು.

ಔರಾದ್‌ಗೆ 100ಕೋಟಿ ರು. :

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಬೀದರ್‌ ಜಿಲ್ಲೆಗೆ 400 ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು ಅದರಲ್ಲಿ ಹೆಚ್ಚಿನ ಅನುದಾನ 100 ಕೋಟಿ ರು. ಔರಾದ್‌ ತಾಲೂಕಿಗೆ ಬಂದಿದದೆ. ಈ ಗಡಿ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದ ಫಲಾನುಭವಿಗಳಿಗೆ ಸಚಿವರು ಹಕ್ಕು ಪತ್ರಗಳನ್ನು ವಿತರಿಸಿ. ಸಾರ್ವಜನಿಕರ ಅಹವಾಲುಗಳಾದ ಮನೆ ಮಂಜೂರಾತಿ. ವಿವಿಧ ಗ್ರಾಮಗಳಿಗೆ ಸ್ಮಶಾನ ಭೂಮಿ, ವಿಧವೆಯರಿಗೆ ಮಾಶಾಸನ, ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಮಂಜೂರಾತಿ. ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ. ಕುಡಿಯುನ ನೀರಿನ ಸಮಸ್ಯೆ ಸೇರಿದಂತೆ ಇತರೆ ಹಲವಾರು ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ ಸಚಿವರು ಅವುಗಳಿಗೆ ಪರಿಹಾರ ನೀಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಡಾ. ಗಿರೀಶ್ ದಿಲೀಪ್ ಬದೋಲೆ, ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್‌, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಔರಾದ್‌ ತಹಶಿಲ್ದಾರ ನಾಗಯ್ಯ ಹಿರೇಮಠ ಸೇರಿದಂತೆ ಮತ್ತಿತರರ ಅಧಿಕಾರಿಗಳಿದ್ದರು.