ಸಾರಾಂಶ
ನ್ಯಾಯಾಲಯದ ಆದೇಶದ ಮೇರೆಗೆ ತಾಲೂಕಿನ ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಗಿರವಿ ಇಟ್ಟಿದ್ದ ಚಿನ್ನಾಭರಣಗಳನ್ನು 37 ಮಂದಿ ರೈತರಿಗೆ ಪ್ರಥಮ ಹಂತದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ವಾಪಸ್ ನೀಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನ್ಯಾಯಾಲಯದ ಆದೇಶದ ಮೇರೆಗೆ ತಾಲೂಕಿನ ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಗಿರವಿ ಇಟ್ಟಿದ್ದ ಚಿನ್ನಾಭರಣಗಳನ್ನು 37 ಮಂದಿ ರೈತರಿಗೆ ಪ್ರಥಮ ಹಂತದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ವಾಪಸ್ ನೀಡಿದರು. ಮಲೆಯೂರು ಸಹಕಾರ ಸಂಘದಲ್ಲಿ ಶೂನ್ಯ ಬಡ್ಡಿದರದಲ್ಲಿ ೩೫೭ ಹೆಚ್ಚು ಮಂದಿ ರೈತರು ತಮ್ಮ ಚಿನ್ನಾಭರಣಗಳನ್ನು ಅಡಮಾನ ಮಾಡಿ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದುಕೊಂಡಿದ್ದರು.ಸಂಘದ ಕಾರ್ಯದರ್ಶಿ ನಾಗೇಂದ್ರ ಹಾಗೂ ಆಡಳಿತ ಮಂಡಳಿ ಸದಸ್ಯರು ರೈತರ ಚಿನ್ನಾಭರಣಗಳನ್ನು ಅಕ್ರಮವಾಗಿ ಬೇರೆ ಖಾಸಗಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಹಣಕ್ಕೆ ಗಿರವಿಯಿಟ್ಟು ವಂಚನೆ ಮಾಡಿದ್ದರು. ಹಣ ಕಟ್ಟಿರುವ ರೈತರಿಗೆ ಚಿನ್ನಾಭರಣ ವಾಪಸ್ ನೀಡದೆ ಸಬೂಬು ಹೇಳುತ್ತಿದ್ದರು.
ಈ ಅಕ್ರಮದ ವಿರುದ್ಧ ಕಳೆದ ಒಂದುವರೆ ವರ್ಷದಿಂದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘವು ರೈತರೊಂದಿಗೆ ನಿರಂತರ ಹೋರಾಟ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿತ್ತು. ಇಂದು ನ್ಯಾಯಾಲಯದ ಆದೇಶದ ಮೇರೆಗೆ ೩೭ ಮಂದಿಗೆ ರೈತರಿಗೆ ಚಿನ್ನಾಭರವಣವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ವಾಪಸ್ ಕೊಡಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಈ ವೇಳೆ ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘದ ನೇತೃತ್ವದಲ್ಲಿ ಸುಮಾರು ಒಂದೊವರೆ ವರ್ಷದ ನಿರಂತರ ಹೋರಾಟದ ಫಲಶೃತಿಯಾಗಿ ೩೫೭ ಕ್ಕೂ ಹೆಚ್ಚು ಮಂದಿ ರೈತರು ತಾಲೂಕಿನ ಮಲೆಯೂರು ಪ್ರಾಥಮಿಕ ಕೃಪಿ ಪತ್ತಿನ ಸಹಕಾರ ಸಂಘ ದಲ್ಲಿ ಶೂನ್ಯ ಬಡ್ಡಿದರದಲ್ಲಿ ಚಿನ್ನವನ್ನು ಗಿರಿವಿ ಇಟ್ಟಿದ್ದರು. ಸಂಘದಲ್ಲಿ ಶೂನ್ಯ ಬಡ್ಡಿದರದಲ್ಲಿ ಚಿನ್ನದ ಸಾಲ ಕೊಡುವುದಾಗಿ ಸಂಘದ ಕಾರ್ಯದರ್ಶಿ, ಆಡಳಿತ ಮಂಡಳಿ ರೈತರಿಗೆ ಮೋಸ ಮಾಡಿದರು. ಸಂಘದ ರೈತರು ಗಿರಿವಿ ಇಟ್ಟಿದ ಚಿನ್ನಾಭರಣಗಳನ್ನು ಕಾರ್ಯದರ್ಶಿ, ಆಡಳಿತ ಮಂಡಳಿ ಅಕ್ರಮವಾಗಿ ಅನ್ಯ ಖಾಸಗಿ ಬ್ಯಾಂಕ್‌ಗಳಲ್ಲಿ ಗಿರವಿ ಇಟ್ಟಿದ್ದ ಚಿನ್ನವನ್ನು ಸಂಘದ ಹೋರಾಟ ಫಲವಾಗಿ ಜಿಲ್ಲಾಡಳಿತ ಮಧ್ಯಸ್ಥಿಕೆಯಲ್ಲಿ, ನ್ಯಾಯಾಲಯ ಆದೇಶದ ಮೇರೆಗೆ ಮೊದಲ ಹಂತದಲ್ಲಿ ೩೭ ಮಂದಿಗೆ ಚಿನ್ನವನ್ನು ವಾಪಸ್ ವಿತರಿಸಲಾಯಿತು. ಇದು ಸಂಘದ ಹೋರಾಟ ಫಲಶ್ರುತಿಯಾಗಿದೆ ಎಂದರು. ಸಂಘದಿಂದ ಜಿಲ್ಲಾಡಳಿತಕ್ಕೆ ಅಭಿನಂದನೆ:ಸಹಕಾರಿ ಸಂಘಗಳು, ಬ್ಯಾಂಕ್‌ಗಳು, ವೈಯುಕ್ತಿಕವಾಗಿ ಆದಂತಹ ಚಿನ್ನಾಭರಣ ಗಿರವಿ ಇಟ್ಟು ಮೋಸ ಹೋದ ಪ್ರಕರಣಗಳಲ್ಲಿ ಚಾಮರಾಜನಗರ ಜಿಲ್ಲಾಡಳಿತ ಮೊಟ್ಟಮೊದಲ ಬಾರಿಗೆ ಒಂದೊವರೆ ವರ್ಷದ ಅವಧಿಯಲ್ಲಿ ಸಂಬಂಧಪಟ್ಟ ರೈತರಿಗೆ ಚಿನ್ನಾಭರಣ ವಾಪಸ್ ವಿರತಣೆ ಮಾಡಿರುವ ಜಿಲ್ಲಾಡಳಿಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಎಸ್ಪಿ ಪದ್ಮಿನಿಸಾಹು, ತಹಸೀಲ್ದಾರ್ ಬಸವರಾಜು, ಎಸ್‌ಐ ಸಾಗರ್, ಎ.ಆರ್.ದಯಾನಂದ, ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ಪ್ರಧಾನ ಕಾರ್ಯದರ್ಶಿ ಮಲೆಯೂರು, ಮಹೇಂದ್ರ, ಸತೀಶ್, ಜನ್ನೂರುಕಾಂತರಾಜು, ಉಡಿಗಾಲ ಮಂಜುನಾಥ್, ಕೀಳಲಿಪುರ ಶ್ರೀಕಂಠ, ಅರಳೀಕಟ್ಟೆ ಪ್ರಭುಸ್ವಾಮಿ ಮತ್ತಿತರರು ಹಾಜರಿದ್ದರು.