ರಾಜ್ಯದಲ್ಲೀಗ ಪೇ ಡಬಲ್ ಸಿಎಂ ವ್ಯವಸ್ಥೆ: ಬೊಮ್ಮಾಯಿ

| Published : Nov 06 2024, 11:48 PM IST / Updated: Nov 06 2024, 11:49 PM IST

ಸಾರಾಂಶ

ಇಡೀ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಯಾವ ಇಲಾಖೆಯಲ್ಲಿ ಹೋದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಂದಲೂ ತಿಂಗಳಿಗೆ ಕಮಿಷನ್ ವಸೂಲಿಗೆ ಫಿಕ್ಸ್ ಮಾಡುವ ಹಂತಕ್ಕೆ ಹೋಗಿದ್ದಾರೆ.

ಹುಬ್ಬಳ್ಳಿ:

ರಾಜ್ಯದಲ್ಲಿ ಈಗ ಪೇ ಡಬಲ್ ಸಿಎಂ ಆಗಿದೆ‌. ಭ್ರಷ್ಟಾಚಾರದಲ್ಲಿ ಇಡೀ ಸರ್ಕಾರವೇ ಮುಳುಗಿ ಹೋಗಿದ್ದು, ಮಂತ್ರಿಗಳಿಗೆ ಒಂದು ಪಾಲು, ಸಿಎಂಗೆ ಒಂದು ಪಾಲು ಪೇಮೆಂಟ್ ಹೋಗುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ನಮ್ಮ ವಿರುದ್ಧ ಯಾವುದೇ ದಾಖಲೆ ಇಲ್ಲದೇ ವಿನಾಕಾರಣ ಕಮಿಷನ್‌ ಆರೋಪ ಮಾಡಿದ್ದರು. ಈಗ ಅಬಕಾರಿ ಇಲಾಖೆಯಲ್ಲಿ ಕಮಿಷನ್ ಆರೋಪ ಕೇಳಿ ಬಂದಿದೆ. ಹಣಕಾಸು ಇಲಾಖೆ ನೇರವಾಗಿ ಮುಖ್ಯಮಂತ್ರಿಗಳ ಕೈಯಲ್ಲಿಯೇ ಇದೆ. ಒಂದೊಂದು ಲೈಸೆನ್ಸ್ ನೀಡಲು ಎಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎನ್ನುವುದನ್ನು ಅವರೇ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಇಡೀ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಯಾವ ಇಲಾಖೆಯಲ್ಲಿ ಹೋದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಂದಲೂ ತಿಂಗಳಿಗೆ ಕಮಿಷನ್ ವಸೂಲಿಗೆ ಫಿಕ್ಸ್ ಮಾಡುವ ಹಂತಕ್ಕೆ ಹೋಗಿದ್ದಾರೆ ಎಂದರೆ, ಭ್ರಷ್ಟಾಚಾರ ಯಾವ ಹಂತಕ್ಕೆ ತಲುಪಿದೆ ಎಂದು ಊಹಿಸಿ ಎಂದರು.

ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು, ಅಭಿವೃದ್ಧಿಯನ್ನು ಜನ ಅನುಭವಿಸಿದ್ದಾರೆ. ಕಾಂಗ್ರೆಸ್‌ನವರ ಆಲೋಚನೆಗಳಿಗೂ ಶಿಗ್ಗಾಂವಿ ಜನರ ಆಲೋಚನೆಗಳಿಗೂ ಬಹಳ ವ್ಯತ್ಯಾಸ ಇದೆ. ಸರ್ಕಾರ ಅವರದೇ ಇದೆ. ಶಿಗ್ಗಾಂವಿಯಲ್ಲಿ ತಾಲೂಕು ಮಟ್ಟದಲ್ಲಿ 200 ಬೆಡ್ ಆಸ್ಪತ್ರೆ, ಟೆಕ್ಸ್‌ಟೈಲ್ ಪಾರ್ಕ್ , ಸವಣೂರಿನಲ್ಲಿ ಆಯುರ್ವೇದ ಕಾಲೇಜ್ , ಐಟಿಐ ಕಾಲೇಜ್, ಪ್ರವಾಹ ಸಂದರ್ಭದಲ್ಲಿ 12,000ಕ್ಕಿಂತ ಹೆಚ್ಚು ಮನೆ ನಿರ್ಮಾಣ, ಬೆಂಗಳೂರಿಗಿಂತ ಒಳ್ಳೆಯ ರಸ್ತೆ ಶಿಗ್ಗಾಂವಿಯಲ್ಲಿವೆ. ಸಿಎಂ ಕಾರಲ್ಲಿ ಹೋಗುವಾಗ ನಿದ್ದೆ ಮಾಡುತ್ತಿರುತ್ತಾರಾ ಏನೋ ಗೊತ್ತಿಲ್ಲ ಎಂದು ಹೇಳಿದರು.

ಸ್ವಾಮೀಜಿಗೆ ಅವಮಾನ:

ಕಾಗಿನೆಲೆ ಗುರು ಪೀಠದ ಸ್ವಾಮೀಜಿ ಬಗ್ಗೆ ಒಬ್ಬ ಮುಖ್ಯಮಂತ್ರಿಯಾಗಿ ಧಾರ್ಷ್ಟ್ಯದ ಮಾತು ಹೇಳುವುದು ಅವರಿಗೆ ಅವಮಾನ ಮಾಡಿದಂತೆ‌, ಅವರು ನಮ್ಮ ಗುರುಗಳು, ಅವರ ನಮ್ಮ ನಡುವೆ ಗುರು ಭಕ್ತರ ಸಂಬಂಧ ಇದೆ. ಚುನಾವಣೆ ಸೋಲಿನ ಭಯದಲ್ಲಿ ಸಿಎಂ ಸ್ವಾಮೀಜಿಯನ್ನು ಎಳೆ ತರುವ ಪ್ರಯತ್ನ ಮಾಡಿದ್ದಾರೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕನ ವಿರುದ್ಧ ಡೆತ್ ನೋಟ್ ಬರೆದಿಟ್ಟು ಸಾವಿಗೀಡಾಗಿರುವ ಪ್ರಕರಣದ ಕುರಿತು ತನಿಖೆಯಾಗಲಿ. ಸರ್ಕಾರಿ ನೌಕರರು ರಾಜಕೀಯ ಒತ್ತಡದಿಂದ ರೋಸಿಹೋಗಿದ್ದಾರೆ ಎಂದರು.