ಮುಂಡರಗಿ: ಪಟ್ಟಣದ ತೋಂಟದಾರ್ಯ ಮಠದಲ್ಲಿ ಸೋಮವಾರ ವಿಶ್ವಮಾನವ ಬಸವಣ್ಣನವರ 893ನೇ ಜಯಂತಿ ಅಂಗವಾಗಿ ಬಸವಣ್ಣನವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡ ಕೊಟ್ರೇಶ ಅಂಗಡಿ ಮಾತನಾಡಿ, ಜಗತ್ತಿನಾದ್ಯಂತ ಬಸವಣ್ಣನನ್ನು ಸ್ಮರಿಸುತ್ತಿದ್ದಾರೆ. ಉಚ್ಚ ಕುಲದಲ್ಲಿ ಜನಿಸಿದ ಬಸವಣ್ಣನವರು ಜನರಲ್ಲಿನ ಅಜ್ಞಾನ, ಅಂಧಕಾರವನ್ನು ತೊಡೆದು ಹಾಕಿ, ಎಲ್ಲ ಜನರನ್ನು‌ ಅಪ್ಪಿ ಒಪ್ಪಿಕೊಳ್ಳುವ ಮೂಲಕ ಕೆಳಗೆ ಬಿದ್ದವರನ್ನು ಮೇಲೆತ್ತುವ ಕಾರ್ಯ ಮಾಡಿದ್ದಾರೆ.

900 ವರ್ಷಗಳಿಂದ ಸಮಾನತೆಗಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಸಂಪೂರ್ಣವಾಗಿ ಸಮಾನತೆ ಬರದಿರುವುದು ವಿಷಾದಕರ. ರಾಷ್ಟ್ರ ರಾಷ್ಟ್ರಗಳ ಮಧ್ಯೆ ಶಾಂತಿ ನೆಲೆಸಬೇಕಾದರೆ ನಿತ್ಯದ ಜೀವನದಲ್ಲಿ ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಮಾತನಾಡಿ, ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತರಾದವರಲ್ಲ. ಅವರು ಇಡೀ ಮನುಕುಲಕ್ಕೆ ಬೇಕಾದವರು. ಮೇಲು, ಕೀಳು ಎನ್ನುವ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದರು. ಕಾಯಕ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ನೀತಿಯನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಕ್ಕಳಿಗೆ ಕಾಯಕದ ತತ್ವಗಳನ್ನು ತಿಳಿಸಿಕೊಡುವ ಕಾರ್ಯ ಆಗಬೇಕು ಎಂದರು.

ಪಾಲಾಕ್ಷಿ ಗಣದಿನ್ನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸದಾಶಿವಯ್ಯ ಕಬ್ಬೂರಮಠ, ಈಶಣ್ಣ ಬೆಟಗೇರಿ, ಶಿವಯೋಗಿ ಗಡ್ಡದ, ಗಿರೀಶಗೌಡ ಪಾಟೀಲ, ಶಿವಕುಮಾರ ಬೆಟಗೇರಿ, ಅಶೋಕ ಅಣ್ಣಿಗೇರಿ, ನಾಗಪ್ಪ ಕುಬಸದ, ಉಮೇಶ ಹಿರೇಮಠ, ಶಿದ್ದಲಿಂಗೇಶ ಕಬ್ಬೂರಮಠ, ಎಸ್.ವಿ. ಕೊಪ್ಪಳ, ಸುಕನ್ಯಾ ಕಬ್ಬೂರಮಠ, ಶೋಭಾ ಅಂಗಡಿ, ಮಂಗಳಾ ಕರ್ಜಗಿ, ಪಾರ್ವತಿ ಕುಬಸದ, ಅನ್ನಕ್ಕ ಸಜ್ಜನರ, ಶಾಂತಾ ಕುಬಸದ, ಪ್ರಭಾವತಿ ಕುಬಸದ, ವಿಜಯಲಕ್ಷ್ಮಿ ಹೂಗಾರ, ಪೂರ್ಣಿಮಾ ಅಂಗಡಿ, ಗೀತಾ ಬೆಳವಟಗಿಮಠ, ಗಾಯತ್ರಿ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಶ್ರಮದ ಗೌರವ ಪ್ರತಿಪಾದಿಸಿದ ಮಹಾನ್ ದಾರ್ಶನಿಕ


ಗದಗ: ಶ್ರಮದ ಗೌರವವನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಎಂದರೆ ಅದು ಬಸವಣ್ಣನವರು ಎಂದು ಸುಮಾ ಶಿವನಗೌಡರ ತಿಳಿಸಿದರು.ಸೋಮವಾರ ನಗರದ ಭೀಷ್ಮ ಕೆರೆಯಲ್ಲಿರುವ ಬಸವೇಶ್ವರ ಪ್ರತಿಮೆಯ ಬಳಿಯಲ್ಲಿ ಗದಗ ರಡ್ಡಿ ಮಹಿಳಾ ಬಳಗದ ವತಿಯಿಂದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಸವಣ್ಣರು ಸಮಾಜದಲ್ಲಿ ಜಾತಿ ಭೇದವಿಲ್ಲದ ಸಮಾನತೆ, ಮಹಿಳಾ ಸಬಲೀಕರಣ ಹಾಗೂ ಶ್ರಮದ ಗೌರವವನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕರಾಗಿದ್ದಾರೆ. ಕಾಯಕವೇ ಕೈಲಾಸ ಎಂಬ ಅವರ ತತ್ವವು ಎಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದರು. ಮಹಿಳೆಯರಿಂದ ವಚನ ಗಾಯನ ನಡೆಯಿತು. ವಚನಗಳನ್ನು ಶೋಭಾ ಬೆಂತುರ ಮುಂತಾದವರು ಪ್ರಸ್ತುತಪಡಿಸಿದರು. ಶೋಭಾ ಭೂಮರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ತಿರ್ಲಾಪುರ ಸ್ವಾಗತಿಸಿದರು. ಶೈಲಜಾ ಕವಲೂರ ವಂದಿಸಿದರು. ಕಾರ್ಯಕ್ರಮದಲ್ಲಿ ಆಶಾ ಓದುಗೌಡರ, ಲತಾ ಮುಂಬಾರೆಡ್ಡಿ, ಜಯಾ ಕೆಂಚರೆಡ್ಡಿ, ಪೂರ್ಣಿಮಾ ಪಾಟೀಲ, ಸುಷ್ಮಾ ಶಿವನಗೌಡರ ಉಪಸ್ಥಿತರಿದ್ದರು.