ಸಾರಾಂಶ
ಶಿಗ್ಗಾಂವಿ: ಪ್ರಾಮಾಣಿಕವಾಗಿ ದುಡಿದು ಗಳಿಸಿದ ಸಂಪತ್ತಿನಲ್ಲಿ ದಾನ ಮಾಡುವುದು ಶ್ರೇಷ್ಠ. ಇತರರಿಗೆ ದಾನ ಮಾಡುವ ಕಾರ್ಯ ಭವಿಷ್ಯದ ಬದುಕಿಗೆ ಹಣ ಠೇವಣಿ ಮಾಡಿದಷ್ಟು ಸಮಾನವಾಗಿದೆ. ಅಂತಹ ಕಾಯಕದ ಗುಣ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಶಿರಹಟ್ಟಿಯ ಫಕೀರ ಸಿದ್ದರಾಮ ಸ್ವಾಮೀಜಿ ತಿಳಿಸಿದರು.ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ನಡೆದ ನಾಣ್ಯ ಮತ್ತು ಧಾನ್ಯ ತುಲಾಭಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮನೆ, ಮನಸ್ಸು ಶಾಂತವಾಗಿದ್ದರೆ ಅದು ಸ್ವರ್ಗಕ್ಕೆ ಸಮಾನ. ಆಸ್ತಿ, ಅಂತಸ್ತು ಮತ್ತು ಅಧಿಕಾರ ಎಂದಿಗೂ ಶಾಶ್ವತವಲ್ಲ. ಬದುಕಿನ ಅವಧಿಯಲ್ಲಿ ಮಾಡುವ ಪರೋಪಕಾರ ಮುಖ್ಯವಾಗಿದೆ. ಅದರಿಂದ ಸಿಗುವ ಶಾಂತಿ, ನೆಮ್ಮದಿ ಬೇರಾವುದರಲ್ಲಿ ಸಿಗಲು ಸಾಧ್ಯವಿಲ್ಲ. ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ನಡೆ ನುಡಿಗಳನ್ನು ತಿಳಿಸುವುದು ಅಗತ್ಯವಾಗಿದೆ ಎಂದರು.ಗಂಜೀಗಟ್ಟಿ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪಾಶ್ಚಿಮಾತ್ಯ ಅನುಕರಣೆ ದೂರಾಗಬೇಕು. ನೆಲದ ಮೂಲ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿ. ಮನೆ ಕಟ್ಟುವ ಜತೆಗೆ ಸರ್ವ ಸಮಾಜದ ಜನರಲ್ಲಿ ಪರಸ್ಪರ ಮನಸ್ಸು ಕಟ್ಟುವ ಕೆಲಸವಾಗಬೇಕು ಎಂದರು.ಶಿರಹಟ್ಟಿಯ ಫಕೀರ ಸಿದ್ದರಾಮ ಸ್ವಾಮೀಜಿ, ಬಂಕಾಪುರದ ರೇವಣಸಿದ್ಧೇಶ್ವರ ಸ್ವಾಮೀಜಿ, ಗಂಜೀಗಟ್ಟಿಯ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಮಣಕಟ್ಟಿಯ ವಿಶ್ವಾರಾಧ್ಯ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಹಿರಿಯೂರಿನ ನಂಜುಂಡೇಶ್ವರ ಸ್ವಾಮೀಜಿ ಅವರಿಗೆ ನಾಣ್ಯ ಮತ್ತು ಧಾನ್ಯದ ತುಲಾಭಾರ ಕಾರ್ಯಕ್ರಮ ಜರುಗಿತು.ಮುಖಂಡ ಜಗದೀಶ ದೊಡ್ಡಗೌಡ್ರ ನೇತೃತ್ವ ವಹಿಸಿದ್ದರು. ಕವಿತಾ ದೊಡ್ಡಗೌಡ್ರ, ಕನ್ನವ್ವ ದೊಡಗೌಡ್ರ, ವಿನೋದವ್ವ ಅಂಗಡಿ, ಪುರಸಭೆ ಸದಸ್ಯ ಸುರೇಶ ಕುರಗೋಡಿ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ, ಪಿಎಸ್‌ಐ ಡಿ.ಎನ್. ಕೂಡಲ, ಮುಖಂಡರಾದ ನಿಂಗನಗೌಡ್ರ ಪಾಟೀಲ, ಗಂಗಣ್ಣ ಬಡ್ಡಿ, ಗಂಗಾಧರ ಪೂಜಾರ, ಶಂಭು ತಳವಾರ, ರವಿ ನರೆಗಲ್ಲ, ವಿವಿಧ ಸಮಾಜದ ಮುಖಂಡರು, ಪುರಸಭೆ ಸಿಬ್ಬಂದಿ ಇದ್ದರು.