ಮಹಾಲಿಂಗೇಶ್ವರನ ಆರಾಧನೆಯಿಂದ ನೆಮ್ಮದಿ: ಕಾಣಿಯೂರು ಶ್ರೀ

| Published : Mar 21 2024, 01:01 AM IST

ಮಹಾಲಿಂಗೇಶ್ವರನ ಆರಾಧನೆಯಿಂದ ನೆಮ್ಮದಿ: ಕಾಣಿಯೂರು ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ನೆಮ್ಮದಿ ನಾಶಕ್ಕೆ ನಾನಾ ತರಹದ ಆಮಿಷಗಳು ಕಾರಣ. ಇದಕ್ಕೆ ಪರಿಹಾರ ಮಹಾಲಿಂಗೇಶ್ವರನ ಆರಾಧನೆ.

ಕನ್ನಡಪ್ರಭ ವಾರ್ತೆ ಉಡುಪಿ

ಪುನನಿರ್ಮಾಣಗೊಂಡಿರುವ ಪೆರ್ಣಂಕಿಲ ಮಹಾಲಿಂಗೇಶ್ವರ - ಮಹಾಗಣಪತಿ ದೇವಾಲಯದ ಶಿಲ್ಪ ಮತ್ತು ಕಾಷ್ಠ ವೈಭವಗಳು ಈ ಕ್ಷೇತ್ರದ ಶ್ರೇಷ್ಠತೆಗೆ ಸಾಕ್ಷಿಯಾಗಿವೆ. ಒಂದು ವರ್ಷದೊಳಗೆ ಇಷ್ಟು ಭವ್ಯವಾಗಿ ಈ ದೇವಾಲಯ ಪುನರ್‌ನಿರ್ಮಾಣ ಗೊಂಡಿರುವುದು ಪೇಜಾವರ ಶ್ರೀಗಳ ಸಂಕಲ್ಪ ಶಕ್ತಿ ಮತ್ತು ಒಳಗಿರುವ ದೇವರ ಶಕ್ತಿಗಳೂ ಕಾರಣ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.

ಅವರು ಶ್ರೀ ಕ್ಷೇತ್ರ ಪೆರ್ಣಂಕಿಲದ ಬ್ರಹ್ಮಕಲಶೋತ್ಸವದಂಗವಾಗಿ, ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಇಂದು ನೆಮ್ಮದಿ ನಾಶಕ್ಕೆ ನಾನಾ ತರಹದ ಆಮಿಷಗಳು, ಆಕರ್ಷಣೆಗಳು ಕಾರಣವಾಗುತ್ತದೆ. ಇದಕ್ಕೆ ಪರಿಹಾರ ಎಂದರೇ ಮನೋನಿಯಾಮಕನಾದ ಮಹಾಲಿಂಗೇಶ್ವರನ ಅರಾಧನೆ. ಇದು ಅಪ್ಪ ಮಹಾಲಿಂಗೇಶ್ವರ ಮತ್ತು ಮಗ ಮಹಾಗಣಪತಿ ಜೊತೆಯಾಗಿ ಪೂಜೆ ಸ್ವೀಕರಿಸುವ ವಿಶಿಷ್ಟ ಕ್ಷೇತ್ರವಾಗಿದೆ. ಜೀರ್ಣೋದ್ಧಾರದಿಂದ ಈ ಕ್ಷೇತ್ರದ ಶಕ್ತಿ ಇನ್ನಷ್ಟು ವೃದ್ಧಿಯಾಗಿದೆ ಎಂದರು.

ಸಾನಿಧ್ಯವಹಿಸಿದ್ದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ತಿಂಗಳಾನುಗಟ್ಟಲೇ ಊರವರು ಮತ್ತು ಪರವೂರವರು ಕರಸೇವೆಯ ಮೂಲಕ ಈ ದೇವಳವನ್ನು ಪುನಃನಿರ್ಮಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದರು.

ವಿದ್ವಾನ್ ಪಂಜ ಭಾಸ್ಕರ ಭಟ್ ವಿಶೇಷ ಧಾರ್ಮಿಕ ಉಪನ್ಯಾಸ ನೀಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಹರಿದಾಸ್ ಭಟ್ ಸ್ವಾಗತಿಸಿದರು. ಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್ ಸಗ್ರಿ ವೇದಿಕೆಯಲ್ಲಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್ ವಂದಿಸಿದರು. ಕಾರ್ಯದರ್ಶಿ ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮದ ನಂತರ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಕಲಾವಿದರಿಂದ ನೃತ್ಯ ಸಿಂಚನ ಪ್ರಸ್ತುತಗೊಂಡಿತು.