ನಗರದ ಪದವೀಧರರಿಂದ ಶಾಂತಿಯುತ ಮತದಾನ

| Published : Jun 04 2024, 12:30 AM IST

ಸಾರಾಂಶ

ಬೆಂಗಳೂರು ಪದವೀಧರ ಮತಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸದಸ್ಯರ ಆಯ್ಕೆಗೆ ಸೋಮವಾರ ಶಾಂತಿಯುತ ಮತದಾನ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಪದವೀಧರ ಮತಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸದಸ್ಯರ ಆಯ್ಕೆಗೆ ಸೋಮವಾರ ಶಾಂತಿಯುತ ಮತದಾನ ನಡೆಯಿತು.

ಸರತಿ ಸಾಲಿನಲ್ಲಿ ನಿಂತು ಪದವೀಧರ ಮತದಾರರು ಮತ ಚಲಾಯಿಸಿದರು. ಮಲ್ಲೇಶ್ವರದ ಸರ್ಕಾರಿ ಪಿಯು ಕಾಲೇಜು ಮತಗಟ್ಟೆ, ಶೇಷಾದ್ರಿಪುರ ಪಿಯು ಕಾಲೇಜು ಮತಗಟ್ಟೆ ಸೇರಿದಂತೆ ಒಟ್ಟು 159 ಮತಗಟ್ಟೆಗಳಲ್ಲಿ ಪದವೀಧರರು ತಮ್ಮ ಹಕ್ಕು ಚಲಾಯಿಸಿದರು. ಎನ್‌ಡಿಎ ಅಭ್ಯರ್ಥಿ ಅ.ದೇವೇಗೌಡ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಅವರು ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

58,791 ಪುರುಷ ಮತದಾರರು, 63,055 ಮಹಿಳಾ ಮತದಾರರು ಮತ್ತು 14 ಇತರ ಮತದಾರರು ಸೇರಿ ಒಟ್ಟು 1,21,860 ಪದವೀಧರರು ಹೆಸರು ನೋಂದಣಿ ಮಾಡಿಕೊಂಡಿದ್ದರು. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ. ಉತ್ತರ, ಬೆಂ. ದಕ್ಷಿಣ, ಬೆಂ. ಕೇಂದ್ರ ಮತ್ತು ರಾಮನಗರ ಜಿಲ್ಲೆ ಬೆಂಗಳೂರು ಪದವೀಧರ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಜೂ.6ರಂದು ಮತಎಣಿಕೆ ನಡೆಯಲಿದೆ.

ವಾಗ್ವಾದ: ಬ್ಯಾಟರಾಯನಪುರ ಮತಗಟ್ಟೆಯಲ್ಲಿ ಸಚಿವ ಕೃಷ್ಣಬೈರೆಗೌಡ ಅವರು ತಮ್ಮ ಅಭ್ಯರ್ಥಿ ಪರ ಮತಗಟ್ಟೆಯಲ್ಲೇ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ಕೃಷ್ಣಬೈರೆಗೌಡರನ್ನು ಮತಕೇಂದ್ರದಿಂದ ಹೊರಗೆ ಕರೆದೊಯ್ದರು.