ರೈತ ಚಳವಳಿಗಳು ಮತ್ತೆ ಬಲಗೊಳ್ಳಬೇಕಿದೆ

| Published : Oct 10 2024, 02:16 AM IST / Updated: Oct 10 2024, 02:17 AM IST

ಸಾರಾಂಶ

ಶೇ. 93 ರಷ್ಟಿದ್ದ ಕೃಷಿಕರನ್ನು ಆಡಳಿತಾರೂಢ ಸರ್ಕಾರಗಳು ಅಲಕ್ಷ್ಯ ಮಾಡಿ ಅಭಿವೃದ್ಧಿಯ ಹೆಸರಿನಲ್ಲಿ ಕೈಗಾರಿಕೆಗಳ ಬೆನ್ನು ಬಿದ್ದ ಪರಿಣಾಮ ಕೃಷಿಕ್ಷೇತ್ರ ಬಡವಾಗಿ, ರೈತರ ಬದುಕು ಹೀನಾಯ ಸ್ಥಿತಿ ತಲಪಿದೆ. ರೈತರು 80ರ ದಶಕದಲ್ಲಿ ಚಳುವಳಿಗೆ ಇಳಿದಾಗ ಬೆದರಿದ ಸರ್ಕಾರ ಚಳವಳಿ ಹತ್ತಿಕ್ಕಲು ರೈತರ ಮೇಲೆ ಗುಂಡು ಹಾರಿಸಿತು. 90 ರದಶಕದಲ್ಲಿ ಗ್ಯಾಟ್ ಒಪ್ಪಂದವಾದ ಬಳಿಕ ಅಂತಾರಾಷ್ಟ್ರೀಯ ಶಕ್ತಿಗಳು ಕೃಷಿಯನ್ನು ವ್ಯಾಪಾರೀಕರಣಗೊಳಿಸುವ ಮೂಲಕ ಕೃಷಿಯ ಮೇಲಿನ ರೈತರ ಹಕ್ಕನ್ನು ನಾಶಗೊಳಿಸಿ ರೈತರನ್ನು ಭಿಕ್ಷುಕರನ್ನಾಗಿಸಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೆ.ಸಿ. ಬಸವರಾಜ್ ಹೇಳಿದರು.

ಕನ್ನಡಪ್ರಭಾ ವಾರ್ತೆ ಅರಕಲಗೂಡು

ರೈತನ ಕೃಷಿ ಬದುಕನ್ನುನಾಶ ಮಾಡಿದ ಅಂತಾರಾಷ್ಟ್ರೀಯ ಶಕ್ತಿಗಳನ್ನು ಮೆಟ್ಟಿ ನಿಲ್ಲಲು ರೈತ ಚಳವಳಿ ಮರಳಿ ಬಲಗೊಳ್ಳುವ ಅಗತ್ಯವಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೆ.ಸಿ. ಬಸವರಾಜ್ ತಿಳಿಸಿದರು.

ಅರಕಲಗೂಡು ದಸರಾ ಉತ್ಸವದ ಪ್ರಯುಕ್ತ ಪಟ್ಟಣದ ಗಣಪತಿ ಕೊತ್ತಲು ಉದ್ಯಾನವನದಲ್ಲಿ ಏರ್ಪಡಿಸಿದ್ದ ರೈತ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಶೇ. 93 ರಷ್ಟಿದ್ದ ಕೃಷಿಕರನ್ನು ಆಡಳಿತಾರೂಢ ಸರ್ಕಾರಗಳು ಅಲಕ್ಷ್ಯ ಮಾಡಿ ಅಭಿವೃದ್ಧಿಯ ಹೆಸರಿನಲ್ಲಿ ಕೈಗಾರಿಕೆಗಳ ಬೆನ್ನು ಬಿದ್ದ ಪರಿಣಾಮ ಕೃಷಿಕ್ಷೇತ್ರ ಬಡವಾಗಿ, ರೈತರ ಬದುಕು ಹೀನಾಯ ಸ್ಥಿತಿ ತಲಪಿದೆ. ರೈತರು 80ರ ದಶಕದಲ್ಲಿ ಚಳುವಳಿಗೆ ಇಳಿದಾಗ ಬೆದರಿದ ಸರ್ಕಾರ ಚಳವಳಿ ಹತ್ತಿಕ್ಕಲು ರೈತರ ಮೇಲೆ ಗುಂಡು ಹಾರಿಸಿತು. 90 ರದಶಕದಲ್ಲಿ ಗ್ಯಾಟ್ ಒಪ್ಪಂದವಾದ ಬಳಿಕ ಅಂತಾರಾಷ್ಟ್ರೀಯ ಶಕ್ತಿಗಳು ಕೃಷಿಯನ್ನು ವ್ಯಾಪಾರೀಕರಣಗೊಳಿಸುವ ಮೂಲಕ ಕೃಷಿಯ ಮೇಲಿನ ರೈತರ ಹಕ್ಕನ್ನು ನಾಶಗೊಳಿಸಿ ರೈತರನ್ನು ಭಿಕ್ಷುಕರನ್ನಾಗಿಸಿದೆ. ರೈತರು ಉತ್ತಮ ಬದುಕಿಗಾಗಿ ಮತ್ತೊಮ್ಮೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ ಎಂದರು. ಹಾಸನ ಆಕಾಶವಾಣಿ ಪ್ರಸಾರ ವಿಭಾಗದ ಎ. ವಿ. ಮಧುಸೂದನ್ ಮಾತನಾಡಿ, ಕೃಷಿಯ ಪರಿಭಾಷೆ ಬದಲಾಗಿದೆ ಆದರೆ ರೈತರ ಬದುಕು ಬದಲಾಗಿಲ್ಲ, ಬೆಳೆದ ಬೆಳೆಗೆ ಸರಿಯಾದ ಬೆಲೆ ಪಡೆಯಲು ಸಾಧ್ಯವಾಗುತ್ತಿಲ್ಲ, ಹೆಚ್ಚಿನ ವೆಚ್ಚ ಬೇಡುವ ಆಹಾರದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೆ ವಾಣಿಜ್ಯ ಬೆಳೆಯತ್ತ ರೈತರು ಚಿತ್ತ ಹರಿಸಿದ್ದರೂ ನೆಮ್ಮದಿಯ ಬದುಕು ಕಂಡುಕೊಳ್ಳಲಾಗುತ್ತಿಲ್ಲ ಎಂದರು. ದೊಡ್ಡಮಠದ ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ, ಅರೆ ಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ರವಿಕುಮಾರ್, ರೈತ ಸಂಘದ ಗೌರವಾಧ್ಯಕ್ಷ ಭುವನೇಶ್ ಮಾತನಾಡಿದರು. 2023-24ನೇ ಸಾಲಿನ ಸಮಗ್ರ ಕೃಷಿಯಲ್ಲಿ ಜಿಲ್ಲಾಮಟ್ಟದ ಉತ್ತಮ ರೈತ ಪ್ರಶಸ್ತಿ ಪಡೆದ ತಾಲೂಕಿನ ಹೊಡೆನೂರು ಗ್ರಾಮದ ಚಿಕ್ಕೇಗೌಡ ಅವರನ್ನು ಸನ್ಮಾನಿಸಲಾಯಿತು. ಹೋರಿಗಳು, ಮಿಶ್ರತಳಿ ಕರುಗಳು, ಕುರಿಗಳು ಹಾಗೂ ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ 105 ಪ್ರಾಣಿಗಳು ಭಾಗವಹಿಸಿದ್ದವು. ಹೊನ್ನವಳ್ಳಿ ಗ್ರಾಮದ ಈಶ್ವರ ಅವರ ಜೋಡಿ ಎತ್ತುಗಳು ಪ್ರಥಮ ಹಾಗೂ ಇದೇ ಗ್ರಾಮದ ಅಜಿತ್ ಅವರ ಎತ್ತುಗಳು ದ್ವಿತೀಯ ಹಾಗೂ ಹನ್ಯಾಳು ಗ್ರಾಮದ ಪ್ರಮೋದ್ ಅವರ ಎತ್ತುಗಳು ಮೂರನೆ ಬಹುಮಾನ ಪಡೆದವು. ಕೊಣನೂರು ಹೋಬಳಿ ಸಬ್ಬತ್ತಿ ಗ್ರಾಮದ ವಾಜಿದ್ ಬೇಗ್ ಅವರ ಟಗರುಗಳು ಪ್ರಥಮ ಬಹುಮಾನ ಗಳಿಸಿತು.

ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಸುಬಾನ್ ಷರೀಫ್, ತಹಶೀಲ್ದಾರ್‌ ಕೆ.ಸಿ. ಸೌಮ್ಯ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಎ.ಡಿ.ಶಿವರಾಮ್, ಸಹಾಯಕ ಕೃಷಿ ನಿರ್ದೇಶಕರಾದ ಕೆ. ಜಿ. ಕವಿತಾ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ. ರಾಜೇಶ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸೀತಾರಾಮ್ ಭಟ್, ಮುಖಂಡ ನರಸೇಗೌಡ, ದಸರಾ ಸಮಿತಿ ಸದಸ್ಯರಾದ, ಕಿಶೋರ್, ಮೋಹನ್, ಭಾಸ್ಕರ್, ರಘು, ರೈತ ಸಂಘದ ಜಿಲ್ಲಾ ಉಪಾದ್ಯಕ್ಷ ಜಗಧೀಶ್, ತಾಲೂಕು ಅಧ್ಯಕ್ಷ ದಿನೇಶ್, ಮುಖಂಡರಾದ ಹೊಂಬೇಗೌಡ, ಕೃಷ್ಣೇಗೌಡ, ರವಿ ಉಪಸ್ಥಿತರಿದ್ದರು.