ಅರಮನೆಯಲ್ಲಿ ಮೊದಲ ದಸರಾ ಜಂಬೂಸವಾರಿ ತಾಲೀಮು ಯಶಸ್ವಿ

| Published : Oct 10 2024, 02:16 AM IST

ಸಾರಾಂಶ

. ಪ್ರಧಾನ ದಳಪತಿಯಾಗಿ ಅಶ್ವರೋಹಿದಳ ಕಮಾಂಡೆಂಟ್ ಶೈಲೇಂದ್ರ, ಉಪ ಪ್ರಧಾನ ದಳಪತಿಯಾಗಿ ಸಾಸನೂರ್ ಅವರು ತಾಲೀಮನ್ನು ಮುನ್ನಡೆಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಇನ್ನೂ 3 ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಗಜಪಡೆ, ಅಶ್ವರೋಹಿ ದಳ ಹಾಗೂ ವಿವಿಧ ಪೊಲೀಸ್ ತುಕಡಿಗಳು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಸೇರಿದಂತೆ ಜಂಬೂಸವಾರಿ ತಾಲೀಮು ಬುಧವಾರ ನಡೆಯಿತು.ಮೈಸೂರು ಅರಮನೆಯ ಮುಂಭಾಗದಲ್ಲಿ ನಡೆದ ದಸರಾ ಜಂಬೂಸವಾರಿಯ ಮೊದಲ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಲಕ್ಷ್ಮಿ ಮತ್ತು ಹಿರಣ್ಯಾ, ಅಶ್ವರೋಹಿ ದಳ ಕುದುರೆಗಳು, ವಿವಿಧ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಪಾಲ್ಗೊಂಡಿದ್ದವು. ಪ್ರಧಾನ ದಳಪತಿಯಾಗಿ ಅಶ್ವರೋಹಿದಳ ಕಮಾಂಡೆಂಟ್ ಶೈಲೇಂದ್ರ, ಉಪ ಪ್ರಧಾನ ದಳಪತಿಯಾಗಿ ಸಾಸನೂರ್ ಅವರು ತಾಲೀಮನ್ನು ಮುನ್ನಡೆಸಿದರು.ಅಂಬಾರಿ ಹೊರಲಿರುವ ಅಭಿಮನ್ಯು ಆನೆಯು ವೇದಿಕೆ ಮುಂಭಾಗ ಬರುತ್ತಿದ್ದಂತೆ ಶಾಸಕ ಟಿ.ಎಸ್. ಶ್ರೀವತ್ಸ, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಮಾರುತಿ, ಎಸಿಪಿಗಳಾದ ಶಾಂತಮಲ್ಲಪ್ಪ, ಚಂದ್ರಶೇಖರ್ ಅವರು ಪುಷ್ಪಾರ್ಚನೆ ಮಾಡಿದರು. ಈ ವೇಳೆ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ಅರಮನೆಯ ಹೊರ ಆವರಣದಲ್ಲಿ 7 ಪಿರಂಗಿಗಳನ್ನು ಬಳಸಿ ಒಟ್ಟು 21 ಕುಶಾಲತೋಪುಗಳನ್ನು ಪಿರಂಗಿ ದಳದ ಸಿಬ್ಬಂದಿ ಸಿಡಿಸಿದರು.ಈ ತಾಲೀಮಿನಲ್ಲಿ ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ ಸಾಗಿದವು. ಭೀಮ, ಕಂಜನ್, ರೋಹಿತ್, ಏಕಲವ್ಯ, ಪ್ರಶಾಂತ, ಮಹೇಂದ್ರ, ಸುಗ್ರೀವ, ದೊಡ್ಡಹರವೆ ಲಕ್ಷ್ಮಿ ಸಾಲಾನೆಗಳಾಗಿ ಸಾಗಿದವು. ನಂತರ ಅಂಬಾರಿ ಆನೆ ಅಭಿಮನ್ಯು, ಕುಮ್ಕಿಗಳಾಗಿ ಲಕ್ಷ್ಮಿ ಮತ್ತು ಹಿರಣ್ಯಾ ಸಾಗಿದವು. ವಯಸ್ಸಿನ ಕಾರಣಕ್ಕೆ ವರಲಕ್ಷ್ಮಿ ಆನೆಯು ಈ ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ. ಈ ತಾಲೀಮು ಯಾಕೆ?ಅ.12 ರಂದು ದಸರಾ ಜಂಬೂಸವಾರಿ ದಿನ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಬರುವ ಮಾರ್ಗ, ಪುಷ್ಪಾರ್ಚನೆ ಮಾಡುವ ಸ್ಥಳ, ಆನೆಗಳ ತಂಡದ ಮುಂದೆ ಸಂಚರಿಸಲಿರುವ ಅಶ್ವರೋಹಿದಳ, ಪಥಸಂಚಲನದಲ್ಲಿ ಪಾಲ್ಗೊಳ್ಳುವ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಯಾವ ಕ್ರಮಾಂಕದಲ್ಲಿ ಸಾಗಬೇಕೆಂಬುದನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ತಾಲೀಮು ಜರುಗಿತು.----ಬಾಕ್ಸ್... ಅಂತಿಮ ಹಂತಕ್ಕೆ ತಲುಪಿದ ಗಜಪಡೆಯ ತಾಲೀಮುಮೊದಲ ತಂಡದಲ್ಲಿ 9, ಎರಡನೇ ತಂಡದಲ್ಲಿ 5 ಸೇರಿದಂತೆ ಒಟ್ಟು 14 ಆನೆಗಳು ಕಾಡಿನಿಂದ ನಾಡಿಗೆ ಆಗಮಿಸಿದ್ದು, ವಿಜಯದಶಮಿ ಮೆರವಣಿಗಾಗಿ ವಿವಿಧ ತಾಲೀಮಿನಲ್ಲಿ ಆನೆಗಳು ಭಾಗವಹಿಸಿ ಯಶಸ್ವಿಗೊಳಿಸಿದ್ದು, ಜಂಬೂಸವಾರಿಯ ಅಂತಿಮ ಹಂತಕ್ಕೆ ತಲುಪಿವೆ.ಈಗಾಗಲೇ ಅರಮನೆ ಆವರಣದ ಆನೆ ಬಿಡಾರದಿಂದ ಬನ್ನಿಮಂಟಪದವರೆಗೆ ನಡಿಗೆ ತಾಲೀಮು, ಮರಳು ಮೂಟೆ ಹೊರುವ ತಾಲೀಮು, ಮರದ ಅಂಬಾರಿ ಹೊರುವ ತಾಲೀಮು ಯಶಸ್ವಿಗೊಳಿಸಿ, ಮೂರು ಬಾರಿ ಕುಶಾಲತೋಪು ಸಿಡಿಸುವಾಗ ಉಂಟಾಗುವ ಶಬ್ದದ ಪರಿಚಯಿಸುವ ತಾಲೀಮನ್ನು ಗಜಪಡೆ ಯಶಸ್ವಿಗೊಳಿಸಿವೆ. ಈಗ ಅಂತಿಮ ಹಂತವಾದ ಜಂಬೂಸವಾರಿ ತಾಲೀಮಿಲ್ಲಿ ಭಾಗವಹಿಸಿದ್ದು, ಗುರುವಾರ ಅಂತಿಮ ಹಂತದ ತಾಲೀಮು ನಡೆಯಲಿದೆ.----ಕೋಟ್...ಜಂಬೂಸವಾರಿ ವೇಳೆ ಪುಷ್ಪಾರ್ಚನೆ ಮಾಡುವ ಮಾದರಿಯಲ್ಲಿ ತಾಲೀಮು ನಡೆಸಿದ್ದೇವೆ. ಧನಂಜಯ ನಿಶಾನೆ, ಗೋಪಿ ನೌಫತ್ ಆನೆಯಾಗಿ ಭಾಗಿಯಾಗಿವೆ. ಅಭಿಮನ್ಯು ಅಂಬಾರಿ ಆನೆಯಾಗಿ, ಲಕ್ಷ್ಮಿ ಮತ್ತು ಹಿರಣ್ಯಾ ಕುಮ್ಕಿ ಆನೆಗಳಾಗಿ, ಉಳಿದವು ಸಾಲಾನೆಗಳಾಗಿ ಭಾಗಿಯಾಗಿವೆ. ವರಲಕ್ಷ್ಮಿ ಹೊರತುಪಡಿಸಿ 13 ಆನೆಗಳು ಭಾಗಿಯಾಗಿವೆ. ಜಂಬೂಸವಾರಿಯಲ್ಲಿ 9 ಆನೆಗಳು ಮಾತ್ರ ಭಾಗಿಯಾಗಲಿವೆ. ಕುಶಾಲತೋಪು ಸಿಡಿಸಿದ ವೇಳೆ ಹೊರಹೊಮ್ಮಿದ ಸದ್ದಿಗೆ ಎಲ್ಲಾ ಆನೆಗಳು ಹೊಂದಿಕೊಂಡಿವೆ. ಜಂಬೂಸವಾರಿ ಮೆರವಣಿಗೆಗೆ ಎಲ್ಲಾ ಆನೆಗಳು ಸಿದ್ಧಗೊಂಡಿವೆ.- ಡಾ.ಐ.ಬಿ. ಪ್ರಭುಗೌಡ, ಡಿಸಿಎಫ್