ಕನ್ನಡಪ್ರಭ ವಾರ್ತೆ ಬೆಂಗಳೂರು
ಕುಡಿಯುವ ನೀರನ್ನು ಪೋಲು ಮಾಡದೆ ಇತಿಮಿತಿಯಲ್ಲಿ ಬಳಸಬೇಕು, ನೀರು ದುರ್ಬಳಕೆ ಮಾಡಿದರೆ ದಂಡ ಪಾವತಿಸಬೇಕಾಗುತ್ತದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಅಧ್ಯಕ್ಷ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಎಚ್ಚರಿಸಿದರು.ಬುಧವಾರ ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿಯಲ್ಲಿ ಆಯೋಜಿಸಿದ್ದ ‘ವಿಶ್ವ ಜಲ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರನ್ನು ಪೋಲು ಮಾಡದೇ ಇತಿಮಿತಿಯಲ್ಲಿ ಬಳಕೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜಲಮೂಲಗಳ ಮಾಲಿನ್ಯವನ್ನು ನಿಲ್ಲಿಸಬೇಕಿದೆ ಎಂದರು.
ಮ್ಯಾಪಿಂಗ್ ಮಲ್ನಾಡ್‌ನ ವಿಷಯ ಸಂಪಾದಕರಾದ ನಿರ್ಮಲಾ ಗೌಡ ಮಾತನಾಡಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಕರ್ನಾಟಕದ ತುಂಗಾ, ಭೀಮಾ, ಕಾವೇರಿ ಸೇರಿದಂತೆ ಕನಿಷ್ಠ 14 ನದಿಗಳು ಮಾಲಿನ್ಯಕ್ಕೆ ಒಳಗಾಗಿವೆ. ಈ ಮಾಲಿನ್ಯ ಕೇವಲ ಪರಿಸರ ಸಮಸ್ಯೆಯಲ್ಲ. ಇದು ನೇರವಾಗಿ ಮಾನವ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ನೀರಿನಲ್ಲಿ ಕಂಡುಬರುವ ಎಂಡೋಕ್ರೈನ್ ವ್ಯತ್ಯಯ ಉಂಟುಮಾಡುವ ರಾಸಾಯನಿಕಗಳು ಬಂಜೆತನ, ಹಾರ್ಮೋನ್ ಅಸಮತೋಲನ, ಥೈರಾಯ್ಡ್ ಸಮಸ್ಯೆಗಳು, ಡಿಪ್ರೆಷನ್ ಹಾಗೂ ಅತಿಯಾದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಬಂಜೆತನದ ಪ್ರಮಾಣ ಹೆಚ್ಚುತ್ತಿರುವುದು ಮತ್ತು ಕ್ಲಿನಿಕ್‌ಗಳ ಸಂಖ್ಯೆ ಹೆಚ್ಚುತ್ತಿರುವುದು ಈ ಸಮಸ್ಯೆಯ ಮೂಲ ಕಾರಣಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೀಣಾ ಆರ್.ಅಚ್ಯುತ, ಬೇಸ್ ವಿವಿಯ ರಿಜಿಸ್ಟಾರ್ ಜಿ.ಎಸ್.ಮಮತಾ ದೇವಿ, ಆರೋಹಣಾ ಗ್ರಾಮೀಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಸ್.ಆಶಾ, ಸಂಘದ ಅಧ್ಯಕ್ಷ ಬಿ.ಸಿ.ಗಂಗಾಧರ, ಉಪಾಧ್ಯಕ್ಷ ರಮಾನಂದ, ಕಾರ್ಯದರ್ಶಿ ಎ.ರಾಜಶೇಖರ, ಖಜಾಂಚಿ ಎಸ್.ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.