ಶೇ.75ಕ್ಕಿಂತ ಹೆಚ್ಚಿನ ವಿಕಲಚೇತನರಿಗೆ ಪಿಂಚಣಿ ಹೆಚ್ಚಿಸಲು ವೈ.ಎಂ. ಸತೀಶ್ ಆಗ್ರಹ

| Published : Jul 25 2024, 01:15 AM IST

ಶೇ.75ಕ್ಕಿಂತ ಹೆಚ್ಚಿನ ವಿಕಲಚೇತನರಿಗೆ ಪಿಂಚಣಿ ಹೆಚ್ಚಿಸಲು ವೈ.ಎಂ. ಸತೀಶ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶೇ.40ರಿಂದ 75ರಷ್ಟು ಅಂಗವಿಕಲತೆ ಇರುವವರಿಗೆ ಮಾಸಿಕ ₹800, ಶೇ. 75ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಂಗವಿಕಲತೆ ಇರುವವರಿಗೆ ₹1400 ಕೊಡಿ.

ಬಳ್ಳಾರಿ: ರಾಜ್ಯದಲ್ಲಿರುವ ವಿಕಲಚೇತನರಿಗೆ ಪಿಂಚಣಿ ಹೆಚ್ಚಿಸಿ ಅವರಿಗೂ ಮತ್ತು ಅವರ ಕುಟುಂಬಕ್ಕೂ ಮಾನವೀಯತೆ ಆಧಾರದಲ್ಲಿ ಆರ್ಥಿಕವಾಗಿ ನೆರವಾಗಲು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ವಿಧಾನಪರಿಷತ್ತಿನಲ್ಲಿ ಬುಧವಾರ ಧ್ವನಿ ಎತ್ತಿದ್ದಾರೆ.

ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿಕಲಚೇತನರಿಗೆ ಪಿಂಚಣಿ ನೀಡುವ ಸಲುವಾಗಿ ಕೇಂದ್ರ ಸರ್ಕಾರದ ಪಾಲು ₹4854 ಲಕ್ಷ (₹48.54 ಕೋಟಿ) ಮತ್ತು ರಾಜ್ಯದ ಪಾಲು ₹3889.35 ಕೋಟಿ) ರೂಪಾಯಿ ಸೇರಿ ಒಟ್ಟು ₹3937.89 ಕೋಟಿ ವಿನಿಯೋಗಿಸಲಾಗಿದೆ ಎಂದರು.

ಶೇ.40ರಿಂದ 75ರಷ್ಟು ಅಂಗವಿಕಲತೆ ಇರುವವರಿಗೆ ಮಾಸಿಕ ₹800, ಶೇ. 75ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಂಗವಿಕಲತೆ ಇರುವವರಿಗೆ ₹1400 ಮತ್ತು ಶೇ.75ರಷ್ಟು ಮನೋವೈಕಲ್ಯತೆ ಇರುವವರಿಗೆ ₹2000 ಪಿಂಚಣಿಯಾಗಿ ನೀಡಲಾಗುತ್ತಿದೆ ಎಂದು ಹೇಳಿದರು.

ವೈ.ಎಂ. ಸತೀಶ್ ಮಾತನಾಡಿ, ಶೇ.75ರಷ್ಟು ಮನೋವೈಕಲ್ಯತೆ ಹೊಂದಿರುವ ಮತ್ತು ಈ ಪ್ರಮಾಣಕ್ಕಿಂತಲೂ ಹೆಚ್ಚಿರುವ ವ್ಯಕ್ತಿಗಳಿಗೆ ಹಾಗೂ ವಿಕಲಚೇತನರಿಗೆ ಮಾನವೀಯತೆಯ ಆಧಾರದ ಮೇಲೆ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.

ಈ ಕುರಿತು ಸರ್ಕಾರ ಸಕಾರಾತ್ಮಕವಾಗಿ ಚಿಂತನೆ ನಡೆಸಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಬಜೆಟ್ ಪೂರ್ವದಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ಸದನಕ್ಕೆ ಸ್ಪಷ್ಟಪಡಿಸಿದರು.

ಆಡಳಿತ ಭವನ ನಿರ್ಮಾಣಕ್ಕೆ ಒತ್ತಾಯ:

ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಮತ್ತು ವಿಜಯನಗರ ಜಿಲ್ಲೆಯ ಆರು ತಾಲೂಕುಗಳಲ್ಲಿ ತಾಲೂಕು ಮಟ್ಟದ ಆಡಳಿತ ಸೌಧಗಳ ಅಗತ್ಯವಿದ್ದು, ಆದಷ್ಟು ಶೀಘ್ರದಲ್ಲಿ ಎಲ್ಲ 11 ತಾಲೂಕುಗಳಲ್ಲಿ ತಾಲೂಕು ಆಡಳಿತ ಸೌಧಗಳ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಆಗ್ರಹಿಸಿದರು.

ಸದಸ್ಯ ವೈ.ಎಂ. ಸತೀಶ್ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಕೊಟ್ಟೂರು ತಾಲೂಕಿನ 2.61 ಎಕರೆ ಪ್ರದೇಶದಲ್ಲಿ ₹15 ಕೋಟಿ ವೆಚ್ಚದಲ್ಲಿ ಆಡಳಿತಸೌಧ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗಾಗಿ ಪ್ರಸ್ತಾವನೆ ಸರ್ಕಾರದಲ್ಲಿ ಸ್ವೀಕೃತವಾಗಿದೆ ಎಂದರು.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಮತ್ತು ಸಂಡೂರು ತಾಲೂಕುಗಳಲ್ಲಿ ತಾಲೂಕು ಆಡಳಿತಸೌಧಗಳಿವೆ. ಕಂಪ್ಲಿ, ಕುರುಗೋಡು ತಾಲೂಕುಗಳಲ್ಲಿ ತಾಲೂಕು ಆಡಳಿತಸೌಧ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಉತ್ತರಿಸಿದರು.