ಫಲಪುಷ್ಪ ಪ್ರದರ್ಶನಕ್ಕೆ ಮನಸೋತ ಜನತೆ

| Published : Sep 22 2024, 01:51 AM IST

ಸಾರಾಂಶ

ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಗಮನ ಸೆಳೆದಿದ್ದು ಪುಟ್ಟ ಅಯೋಧ್ಯಯ ಶ್ರೀರಾಮಮಂದಿರ. ಈ ಆಕೃತಿ ಚಿಕ್ಕದಾಗಿದ್ದರೂ ಬರುವ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ಅಜೀಜಅಹ್ಮದ ಬಳಗಾನೂರ

ಧಾರವಾಡ:

ಉತ್ತರ ಕರ್ನಾಟದಲ್ಲಿ ರೈತರ ಜಾತ್ರೆ ಎಂದೇ ಪ್ರಖ್ಯಾತಿ ಪಡೆದಿರುವ ಕೃಷಿ ಮೇಳಕ್ಕೆ ಶನಿವಾರ ಅಧಿಕೃತ ಚಾಲನೆ ದೊರೆತಿದ್ದು, ಮೇಳದ ಮೊದಲ ದಿನವೇ ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಜನಸಾಗರವೇ ಹರಿದು ಬಂದಿತು. ಬಗೆಬಗೆಯ ಸಸಿಗಳು, ಬಣ್ಣಬಣ್ಣದ ಗುಲಾಬಿ, ಸೇವಂತಿಗೆ ಹೂ ನೋಡುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು.

ಮೇಳದಲ್ಲಿ ಪ್ರದರ್ಶನಕ್ಕಿಟ್ಟ ವಿವಿಧ ಬಗೆಯ ತರಕಾರಿ, ಬಗೆಬಗೆಯ ಬೋನ್ಸಾಯ ಗಿಡ, ಅಲಂಕಾರಿಕ ಹೂ, ಔಷಧೀಯ ಸಸ್ಯ, ಬಣ್ಣಬಣ್ಣದ ಹೂವುಗಳನ್ನು ಒಂದೇ ಕಡೆ ಕಣ್ತುಂಬಿಕೊಂಡು ಜನರು ಸಂತಸ ಪಟ್ಟರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸಾಹಿತ್ಯ ದಿಗ್ಗಜರು, ಸಂಗೀತಗಾರರು, ಕವಿಗಳು, ದೇವತೆ, ಹೋರಾಟಗಾರು ಕಲ್ಲಂಗಡಿಯಲ್ಲಿ ಅರಳಿ ನಿಂತಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. ಈ ಎಲ್ಲ ಚಿತ್ತಾರ ಮೂಡಿರುವುದು ಕೃಷಿ ವಿವಿ ಕಾಲೇಜು ವಿದ್ಯಾರ್ಥಿಗಳ ಕೈಯಲ್ಲಿ ಎಂಬುದು ಮತ್ತೊಂದು ವಿಶೇಷ.

ಏನೆಲ್ಲ ಇವೆ?

ಪುಷ್ಪ ಮೇಳದಲ್ಲಿ ಬಗೆಬಗೆಯ ಸಸ್ಯರಾಶಿಗಳೇ ಕಂಡು ಬರುತ್ತಿವೆ. ಗಾಳಿ ಶುದ್ಧೀಕರಿಸುವ ಸಸ್ಯಗಳಾದ ಸ್ಪೈಡರ್‌ ಸಸ್ಯ, ಜಾನೆಟ್‌ ಕ್ರೇಗ್, ಔಷಧಿ ಸಸ್ಯಗಳಾದ ಮಧುನಾಶಿನಿ, ಬಿಳಿ ಚಿತ್ರಮೂಲ, ಆಡುಸೋಗೆ, ಪಚೌಲಿ, ಶತಾವರಿ, ಮುಂಗರವಳ್ಳಿ, ಅಮೃತಬಳ್ಳಿ, ಕೃಷ್ಣ ತುಳಸಿ, 10ಕ್ಕೂ ಅಧಿಕ ಬಗೆಯ ಲಿಂಬೆ, ಚಕ್ಕೋತ, ಬಗೆಬಗೆಯ ಕುಂಬಳಕಾಯಿ, ಮಾವಿನ ಶುಂಠಿ ಸೇರಿದಂತೆ ಹಲವು ಬಗೆಬಗೆಯ, ವಿವಿಧ ತಳಿಗಳು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.

ಶ್ರೀರಾಮಮಂದಿರ:

ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಗಮನ ಸೆಳೆದಿದ್ದು ಪುಟ್ಟ ಅಯೋಧ್ಯಯ ಶ್ರೀರಾಮಮಂದಿರ. ಈ ಆಕೃತಿ ಚಿಕ್ಕದಾಗಿದ್ದರೂ ಬರುವ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಸುತ್ತಲೂ ಬಣ್ಣಬಣ್ಣದ ಹೂವುಗಳ ರಾಶಿಯ ನಡುವೆ ಶ್ರೀರಾಮಮಂದಿರ ಹೊಳೆಯುವಂತೆ ಕಾಣುತ್ತಿತ್ತು. ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಮಂದಿರದ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

ಮೆಚ್ಚಿದ ರೈತನ ಸ್ನೇಹಿತ:

ಪ್ರದರ್ಶನದ ಒಳಗೆ ಹೋಗುತ್ತಿದ್ದಂತೆ ನಮಗೆ ಎದುರಾಗುವುದು ರೈತನ ಸ್ನೇಹಿತ ಎತ್ತುಗಳು ಹಾಗೂ ನೇಗಿಲು. ಬಗೆಬಗೆಯ ತರಕಾರಿ, ಹೂಗಳು, ಎಲೆಗಳಿಂದ ತಯಾರಿಸಲಾಗಿದ್ದು ಜೋಡೆತ್ತು, ನೇಗಿಲು ಹಾಗೂ ಕರ್ನಾಟಕದ ನಕಾಶೆ, ಪಕ್ಕದಲ್ಲಿಯೇ ಹತ್ತಾರು ಬಗೆಯ ತರಕಾರಿ, ಹೂಗಳು ಹಾಗೂ ಹಣ್ಣುಗಳಿಂದ ಸಿದ್ಧಪಡಿಸಲಾದ ಭೂಮಾತೆಯ ಚಿತ್ರ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿವೆ.ನಾವು ಪ್ರತಿವರ್ಷ ಕೃಷಿ ಮೇಳಕ್ಕೆ ಬರುತ್ತೇವೆ. ಫಲಪುಷ್ಪ ಪ್ರದರ್ಶನ ವರ್ಷದಿಂದ ವರ್ಷಕ್ಕೆ ಭಿನ್ನವಾಗಿರುತ್ತದೆ. ವಿವಿಧ ಬಗೆಯ ಹೂವುಗಳನ್ನು ಫೋಟೋದಲ್ಲಿ ಮಾತ್ರ ನೋಡಿರುತ್ತೇವೆ. ಈಗ ಇಲ್ಲಿಗೆ ಬಂದು ಕಣ್ತುಂಬಿಕೊಂಡಿದ್ದೇವೆ ಎಂದು ಬಳ್ಳಾರಿಯಿಂದ ಆಗಮಿಸಿದ್ದ ಕಾಲೇಜು ವಿದ್ಯಾರ್ಥಿನಿ ರೇಖಾ ದಾಸರ ಹೇಳಿದರುಇಷ್ಟೊಂದು ವೈಭವಪೂರಿತವಾಗಿ ಎಲ್ಲಿಯೂ ಕೃಷಿಮೇಳ ನಡೆಯುವುದಿಲ್ಲ. ಇಲ್ಲಿನ ಫಲಪುಷ್ಪ ಪ್ರದರ್ಶನದಲ್ಲಿ ಎಲ್ಲ ಬಗೆಯ ಸಸ್ಯ, ಹೂ, ಹಣ್ಣು, ಔಷಧೀಯ ಸಸ್ಯಗಳಿದ್ದು ನಾನು ಎಲ್ಲಿಯೂ ನೋಡಿಲ್ಲ. ಪ್ರತಿ ವರ್ಷವೂ ಎಲ್ಲ ಸ್ನೇಹಿತರು ಈ ಮೇಳಕ್ಕೆ ಆಗಮಿಸುತ್ತೇವೆ ಎಂದು ಹಾವೇರಿಯಿಂದ ಆಗಮಿಸಿದ್ದ ಮೇಘನಾ ಚಿತ್ತೂರ, ಅಮೃತಾ ಹೆಗಡೆ ಹೇಳಿದರು.